'ಗುಂಡಿಕ್ಕಿ ಕೊಲ್ಲಿ' ಹೇಳಿಕೆ : ಬಿಜೆಪಿ ಶಾಸಕರಾದ ಯತ್ನಾಳ್, ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೆ ಒತ್ತಾಯ

Update: 2020-04-08 12:34 GMT

ಬೆಂಗಳೂರು, ಎ. 8: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮಾಜದಲ್ಲಿ ದ್ವೇಷ ಹುಟ್ಟುಸುವಂತಹ ಹೇಳಿಕೆಗಳನ್ನು ನೀಡಿ ಶಾಂತಿ ಕದಡುವ ಅಕ್ಷಮ್ಯ ಅಪರಾಧ ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

ತಾವು ಅಲ್ಪಸಂಖ್ಯಾತ ಮುಖಂಡರು ಮತ್ತು ಧರ್ಮ ಗುರುಗಳ ಸಭೆ  ಕರೆದು ಸಲಹೆ ಕೊಡಿ, ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಸಹಕಾರ ನೀಡಿ ಎಂದು ಕೋರಿದ್ದೀರಿ. ಅದರಂತೆ ಅಲ್ಪಸಂಖ್ಯಾತ ಮುಖಂಡರು ಮತ್ತು ಧರ್ಮ ಗುರುಗಳು ತಮಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿ ಸಿದ್ದಾರೆ. ಆ ಮೂಲಕ ಸಮುದಾಯಕ್ಕೆ ಸೂಕ್ತ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ, ಮುಸ್ಲಿಮ್ ಸಮುದಾಯದ ಎಲ್ಲ ಭಾಂದವರು ತಮ್ಮ ನಮಾಝ್‍ಗಳನ್ನು ಅವರವರ ಮನೆಗಳಲ್ಲಿಯೇ ನಿರ್ವಹಿಸುತ್ತಿದ್ದು ಲಾಕ್‍ಡೌನ್ ನಿಯಮಗಳನ್ನು ಪಾಲಿಸುತ್ತಿದ್ದಾರೆ. ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ನಲ್ಲಿ ನಡೆದ ತಬ್ಲೀಗಿ ಜಮಾತ್ ಧಾರ್ಮಿಕ ಸಭೆ ಭಾಗವಹಿಸಿದ ಎಲ್ಲರೂ ತಪಾಸಣೆಗೆ ಒಳಗಾಗಬೇಕೆಂದು ಧರ್ಮಗುರುಗಳು ಕರೆ ನೀಡಿದ್ದು, ಅದರಂತೆ ಎಲ್ಲರೂ ಈ ಆದೇಶ ಪಾಲನೆ ಮಾಡಿದ್ದಾರೆ.

'ಅಲ್ಪಸಂಖ್ಯಾತರ ವಿರುದ್ಧ ಆಪಾದನೆಗಳನ್ನು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ' ಎಚ್ಚರಿಸಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಸ್ಥೈರ್ಯವನ್ನು ತುಂಬಿರುತ್ತೀರಿ. ಆದರೂ, ಇಬ್ಬರು ಶಾಸಕರು ದ್ವೇಷಭರಿತ ಹೇಳಿಕೆಗಳನ್ನು ನೀಡಿ ಸಮಾಜದ ಸ್ವಾಸ್ಥ್ಯವನ್ನು ಕದಡುವ ಕೆಲಸ ಸರಿಯಲ್ಲ ಎಂದು ಸಲೀಂ ಅಹ್ಮದ್ ಆಕ್ಷೇಪಿಸಿದ್ದಾರೆ.

ಈ ವಿಚಾರವನ್ನು ತಾವು ಅತ್ಯಂತ ಗಂಭೀರವಾಗಿ ಪರಿಗಣಿಸಿ ರೇಣುಕಾಚಾರ್ಯ ಅವರನ್ನು ಕೂಡಲೇ ತಮ್ಮ ಸಂಸದೀಯ ಕಾರ್ಯದರ್ಶಿ ಸ್ಥಾನ ದಿಂದ ವಜಾಗೊಳಿಸಬೇಕು. ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ರಾಜಧರ್ಮ ಪಾಲಿಸಬೇಕು ಎಂದು ಪತ್ರದಲ್ಲಿ ಸಲೀಂ ಅಹ್ಮದ್ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News