24 ವರ್ಷಗಳ ಬಳಿಕ ಹುತಾತ್ಮ ಯೋಧನ ಕುಟುಂಬಕ್ಕೆ ನಿವೇಶನ ಹಂಚಿಕೆ

Update: 2020-04-09 13:07 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.9: ನಾಗಾಲ್ಯಾಂಡ್‍ನಲ್ಲಿ 24 ವರ್ಷಗಳ ಹಿಂದೆ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ರಾಜ್ಯದ ಸೈನಿಕ ಎ.ಮುನಿಯಪ್ಪನ್ ಅವರ ಕುಟುಂಬಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಉಚಿತವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ.

ಸೈನಿಕ ಕಲ್ಯಾಣ ಇಲಾಖೆಯ ಶಿಫಾರಸಿನ ಮೇರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 30x40 ಅಡಿ ಅಳತೆಯ ನಿವೇಶನ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹುತಾತ್ಮರ ಪತ್ನಿ ಎಂ.ದೇವಿ ಅವರಿಗೆ ಪತ್ರ ಬರೆದು ವಿಷಯ ತಿಳಿಸಿದ್ದಾರೆ.

ಇದರೊಂದಿಗೆ ಆದೇಶ ಪ್ರತಿಯನ್ನು ಕೂಡ ಕಳುಹಿಸಿಕೊಟ್ಟಿದ್ದಾರೆ. ನಿಮ್ಮ ಪತಿ ಸಿಪಾಯಿ ಎ.ಮುನಿಯಪ್ಪನ್ ಅವರು ನಾಗಾಲ್ಯಾಂಡ್‍ನಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ 24 ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ತಾವು ಕೂಡ ಈಗ ತೀವ್ರ ಅನಾರೋಗ್ಯ ಪೀಡಿತರಾಗಿರುವ ವಿಷಯ ತಿಳಿದು ಅತ್ಯಂತ ದುಃಖವಾಯಿತು. ಭಗವಂತ ನಿಮಗೆ ಆಯುರಾರೋಗ್ಯ ನೀಡಿ ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ.

ದೇಶ ಸೇವೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಮುನಿಯಪ್ಪನ್ ಅವರ ತ್ಯಾಗ ಸ್ಮರಣೀಯ. ತಾವು ನಿವೇಶನ ಹಂಚಿಕೆಯಾಗದೆ ತೊಂದರೆ ಅನುಭವಿಸುತ್ತಿರುವ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಂದ ಮಾಹಿತಿ ತರಿಸಿ ಪರಿಶೀಲಿಸಿದಾಗ ತಮಗೆ ನಿವೇಶನ ಹಂಚಿಕೆಯಾಗಿರುವುದು ತಿಳಿದು ಬಂದಿದೆ. ನಿವೇಶನ ಮಂಜೂರಾತಿ ಪತ್ರ ಇದರೊಂದಿಗೆ ಲಗತ್ತಿಸಿ ಕಳುಹಿಸಲಾಗಿದೆ. ತಮಗೆ, ತಮ್ಮ ಕುಟುಂಬದವರಿಗೆ ಮತ್ತೊಮ್ಮೆ ಶುಭ ಹಾರೈಕೆಗಳು ಎಂದು ಮುಖ್ಯಮಂತ್ರಿ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News