ಮಂಗಳಮುಖಿಯರು, ದಿನಗೂಲಿ ಕಾರ್ಮಿಕರಿಗೆ ರಾಧಿಕಾ ಕುಮಾರಸ್ವಾಮಿ ಸಹಾಯ ಹಸ್ತ

Update: 2020-04-09 15:40 GMT

ಬೆಂಗಳೂರು, ಎ.9: ಸದಾ ಭಿಕ್ಷಾಟನೆ ಮಾಡಿಯೇ ಜೀವನ ಸಾಗಿದುತ್ತಿದ್ದ ಮಂಗಳಮುಖಿಯರು ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಅಲ್ಲದೆ ಲಾಕ್‍ಡೌನ್ ಸುಳಿಗೆ ಹಲವು ದಿನಗೂಲಿ ಕಾರ್ಮಿಕರು ಸಹ ಸಿಲುಕಿಕೊಂಡಿದ್ದಾರೆ. ಅಂತಹವರಿಗೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಸಹಾಯ ಮಾಡಿದ್ದಾರೆ.

ಮಂಗಳಮುಖಿಯರು ಹಾಗೂ ಬಡವರನ್ನು ಹುಡುಕಿಕೊಂಡು ಹೋಗಿ ಅಕ್ಕಿ, ಬೇಳೆ ಸೇರಿದಂತೆ ವಿವಿಧ ರೀತಿಯ ಆಹಾರ ಸಾಮಗ್ರಿಗಳನ್ನು ದಾನ ಮಾಡುತ್ತಿದ್ದಾರೆ. ಈ ಮೂಲಕ ಅವರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಸಹಾಯ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿವಿಧ ರೀತಿಯ ಆಹಾರ ಸಾಮಗ್ರಿಗಳನ್ನು ಸ್ವತಃ ಅವರೇ ಕೈಯಾರೇ ಹಂಚಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ವಿಡಿಯೋ ಪೋಸ್ಟ್ ಮಾಡಿರುವ ಅವರು, ನಾವೆಲ್ಲರೂ ಮಾನವರು, ಇಂತಹ ಸಮಯದಲ್ಲಿ ದುರ್ಬಲರಿಗೆ, ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಭಾವಿಸುತ್ತೇನೆ. ಹೀಗಾಗಿ ಬೆಂಗಳೂರಿನಲ್ಲಿ ಅಗತ್ಯವಿರುವವರಿಗೆ ಸ್ವಯಂ ಪ್ರೇರಣೆಯಿಂದ ಆಹಾರ ಪದಾರ್ಥ ವಿತರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ರಾಧಿಕಾ ಕುಮಾರಸ್ವಾಮಿಯವರು ಮಾಗಡಿ ರೋಡ್, ಕೆಂಗೇರಿ, ನಾಯಂಡಹಳ್ಳಿ ಮುಂತಾದ ಏರಿಯಾಗಳಲ್ಲಿ ದಿನಸಿ ವಿತರಿಸಿದ್ದು, 1200ಕ್ಕೂ ಹೆಚ್ಚು ಮನೆಗಳಿಗೆ ಹಂಚಿಕೆ ಮಾಡಿದ್ದಾರೆ. ವಿಶೇಷವಾಗಿ ಮಂಗಳಮುಖಿಯರಿಗೆ ಅವರು ದಿನಸಿ ಹಂಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News