ಕೊರೋನ ತಡೆಗೆ ಕಟ್ಟುನಿಟ್ಟಿನ ಕ್ರಮ: ಬೆಂಗಳೂರಿನಲ್ಲಿ ಕ್ವಾರಂಟೈನ್ ಅವಧಿ ಮೂರು ಪಟ್ಟು ಹೆಚ್ಚಳ

Update: 2020-04-10 14:39 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.10: ಬೆಂಗಳೂರಿನಲ್ಲಿ ಕೊರೋನ ವೈರಸ್ ಸಂಬಂಧಿಸಿ ಕ್ವಾರಂಟೈನ್‍ನಲ್ಲಿರುವವರು ಇರಬೇಕಿದ್ದ 14 ದಿನಗಳ ಗೃಹಬಂಧನದ ಅವಧಿಯನ್ನು ಮೂರು ಪಟ್ಟು, ಅಂದರೆ 42 ದಿನಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. 

ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವವರು ಮತ್ತು ಸೋಂಕಿನ ಶಂಕೆ ಇರುವವರಿಗೆ ಈ ದೀರ್ಘಾವಧಿ ಕ್ವಾರಂಟೈನ್ ಅನ್ವಯವಾಗಲಿದೆ. ಈಗಾಗಲೇ ನಿಗಾದಲ್ಲಿ ಇರುವ ಹಾಗೂ ಇನ್ನು ಮುಂದೆ ಹೊಸದಾಗಿ ಪತ್ತೆಯಾಗುವ ಎರಡೂ ವರ್ಗವೂ ಕಡ್ಡಾಯವಾಗಿ 42 ದಿನಗಳ ಕಾಲ ಕ್ವಾರಂಟೈನ್‍ಗೆ ಒಳಪಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿದೇಶಗಳಿಂದ ಬಂದವರನ್ನು ಈ ಮೊದಲು 14 ದಿನಗಳವರೆಗೆ ಕ್ವಾರಂಟೈನ್ ಮಾಡಲಾಗುತ್ತಿತ್ತು. ಆದರೆ, ಬೆಂಗಳೂರಿನಲ್ಲಿ ಕೊರೋನ ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ದೀರ್ಘಾವಧಿ ಕ್ವಾರಂಟೈನ್ ಮಾಡಲು ಸರಕಾರ ಸೂಚಿಸಿದೆ. ಅದರಂತೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ನೂರಾರು ಮಂದಿ 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಬಿಡುಗಡೆಯಾಗಿದ್ದಾರೆ. ಇನ್ನು ಕೆಲವರು ಬಿಡುಗಡೆ ಹಂತದಲ್ಲಿದ್ದಾರೆ. 17 ಜನರು ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಈ ಮಧ್ಯೆ ಸೋಂಕಿತರೊಂದಿಗೆ 457 ಮಂದಿ ಪ್ರಾಥಮಿಕ ಸಂಬಂಧ ಹೊಂದಿದ್ದು, ಅವರ ಕುಟುಂಬಗಳೂ ಗೃಹಬಂಧನದಲ್ಲಿವೆ ಎಂದು ತಿಳಿಸಿದ್ದಾರೆ.

ಕೊರೋನ ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು 14 ದಿನ ಪಾಲಿಕೆಯಿಂದ ಗುರುತಿಸಿದ ಸ್ಥಳಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. 12ನೇ ದಿನ ಶಂಕಿತರ ಮಾದರಿ ಪರೀಕ್ಷೆಗೊಳಪಡಿಸಿ ವರದಿ ನೆಗೆಟಿವ್ ಬಂದರೆ ಕ್ವಾರಂಟೈನ್ ಮುಕ್ತ ಮಾಡಲಾಗುತ್ತದೆ. ಇಲ್ಲದಿದ್ದರೆ ಮತ್ತೆ 14 ದಿನಗಳು ಪಾಲಿಕೆಯು ನಿಗಾ ವಹಿಸಿ ಕ್ವಾರಂಟೈನ್ ಮಾಡಲಾಗುವುದು. ನಂತರ 15 ದಿನ ವೈಯುಕ್ತಿಕ ಕಾಳಜಿ ನಿಟ್ಟಿನಲ್ಲಿ ಕ್ವಾರಂಟೈನ್ ಸೂಚನೆ ನೀಡಲಾಗುತ್ತದೆ. ಒಟ್ಟಾರೆ 42 ದಿನಗಳು ಕ್ವಾರಂಟೈನ್ ಮಾಡಿ ಕೊರೋನ ಹರಡುವುದಕ್ಕೆ ಕಡಿವಾಣ ಹಾಕಲಾಗುವುದು ಎಂದರು.

ತಪಾಸಣೆ ಮತ್ತಷ್ಟು ಬಿಸಿ: ಈ ಮಧ್ಯೆ ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಟೋಲ್‍ಗೇಟ್‍ಗಳು ಹಾಗೂ ಚೆಕ್‍ಪೋಸ್ಟ್ ಗಳಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಸ್ವತಃ ಗೃಹ ಸಚಿವರೇ ರಿಯಾಲಿಟಿ ಚೆಕ್‍ಗಾಗಿ ರಸ್ತೆಗಿಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News