ಕೇರಳ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ವಲಸೆ ಕಾರ್ಮಿಕ !

Update: 2020-04-11 04:20 GMT
Photo: The News Minute

ತಿರುವನಂತಪುರ : ಮುಖ್ಯಮಂತ್ರಿ ವಿಕೋಪ ಪರಿಹಾರ ನಿಧಿ (ಸಿಎಂಡಿಆರ್‌ಎಫ್)ಗೆ ದೇಣಿಗೆ ನೀಡುವಂತೆ ಕೇರಳ ಸರ್ಕಾರ ಮಾಡಿರುವ ಮನವಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ನಡೆಯುತ್ತಿರುವ ವಾದ ವಿವಾದದಿಂದ ತಲೆ ಕೆಡಿಸಿಕೊಳ್ಳದ ರಾಜಸ್ಥಾನ ಮೂಲದ ವಲಸೆ ಕಾರ್ಮಿಕರೊಬ್ಬರು ಈ ನಿಧಿಗೆ 5 ಸಾವಿರ ರೂಪಾಯಿ ಕೊಡುಗೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ರಾಜಸ್ಥಾನದ ಭರತ್‌ಪುರ ಜಿಲ್ಲೆಯ ವಿನೋದ್ ಜಿಂಗಾದ್ ಟೈಲ್ಸ್ ಕಾರ್ಮಿಕ. ಹಲವು ವರ್ಷಗಳಿಂದ ಕೇರಳದಲ್ಲಿ ಇತರ ವಲಸೆ ಕಾರ್ಮಿಕರ ಜತೆ ವಾಸವಿದ್ದಾರೆ. ಪೊಲೀಸರ ಮೂಲಕ ಈ ದೇಣಿಗೆಯನ್ನು ಸಲ್ಲಿಸಿದರೆ ಅದು ವಾಸ್ತವವಾಗಿ ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪುತ್ತದೆ ಎಂಬ ಭಾವನೆಯಿಂದ ವಿನೋದ್, ಪೊಲೀಸರಿಗೆ ಈ ನೆರವನ್ನು ಹಸ್ತಾಂತರಿಸಿದ್ದಾಗಿ ದಿ ಹಿಂದೂ ವರದಿ ಮಾಡಿದೆ.

ನಾನು ಕೂಡಾ ಈ ನೆಲದ ಭಾಗ. ಸರ್ಕಾರ ನಮ್ಮ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಸಂತೋಷವಿದೆ. ಆದ್ದರಿಂದ ಈ ನೆರವು ನೀಡುತ್ತಿದ್ದೇನೆ ಎಂದು ವಿನೋದ್ ಹೇಳಿದ್ದಾರೆ.

ಎಲ್ಲ ಸರ್ಕಾರಿ ನೌಕರರು ಹಾಗೂ ಶಿಕ್ಷಕರು ಒಂದು ತಿಂಗಳ ವೇತನವನ್ನು ಸಿಎಂಡಿಆರ್‌ಎಫ್‌ಗೆ ಕೊಡುಗೆಯಾಗಿ ನೀಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನವಿ ಮಾಡಿದ್ದರು. ಇದು ಸಂಪುಟದ ಏಕಪಕ್ಷೀಯ ನಿರ್ಧಾರ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಹೀಗೆ ಸ್ವೀಕರಿಸಿದ ಹಣವನ್ನು ಸರ್ಕಾರ ಕೋವಿಡ್-19 ವಿರುದ್ಧದ ಸಮರಕ್ಕೇ ವಿನಿಯೋಗಿಸುತ್ತದೆ ಎಂಬ ಖಾತರಿ ಇಲ್ಲ ಎಂದು ವಿರೋಧ ಪಕ್ಷದ ನಾಯಕ ರಮೇಶ್ ಚನ್ನತ್ತಿಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News