ಕೊರೋನ ಪ್ರಕರಣ ವರದಿಯಾಗುವ ಮೊದಲೇ ಏರ್ಪೋರ್ಟ್ ಗಳಲ್ಲಿ ಸ್ಕ್ರೀನಿಂಗ್: ಪ್ರಧಾನಿ ಮೋದಿ ಹೇಳಿಕೆ ಎಷ್ಟು ನಿಜ?

Update: 2020-04-15 12:37 GMT
ಫೈಲ್ ಚಿತ್ರ

ಹೊಸದಿಲ್ಲಿ,ಎ.15: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶವನ್ನುದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ಭಾರತದಲ್ಲಿ ಒಂದೇ ಒಂದು ಕೊರೋನ ವೈರಸ್ ಪ್ರಕರಣ ವರದಿಯಾಗುವ ಮೊದಲೇ ದೇಶದ ವಿಮಾನ ನಿಲ್ದಾಣಗಳಲ್ಲಿ ಕೊರೋನಪೀಡಿತ ದೇಶಗಳಿಂದ ಆಗಮಿಸುವ ಪ್ರಯಾಣಿಕರ ಸ್ಕ್ರೀನಿಂಗ್ ಆರಂಭಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಹೇಳಿಕೆ ಸಂಪೂರ್ಣವಾಗಿ ನಿಜವಲ್ಲದಿರಬಹುದು ಎಂದು thewire.in ವರದಿ ಮಾಡಿದೆ.

ಮೋದಿ ಸರಕಾರ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಬಗ್ಗೆ ಇತ್ತೀಚಿಗೆ ಹೆಚ್ಚಾಗಿ ಹೇಳಿಕೊಳ್ಳುತ್ತಿದೆ. ಕಳೆದ ತಿಂಗಳು ನಡೆದಿದ್ದ ಸಾರ್ಕ್ ನಾಯಕರ ಆನ್‌ಲೈನ್ ಸಮಾವೇಶದಲ್ಲಿ ಮೋದಿ ಈ ಮಾತನ್ನು ಮೊದಲ ಬಾರಿಗೆ ಹೇಳಿದ್ದರು. ಬಳಿಕ ಹಲವಾರು ಸಂದರ್ಭಗಳಲ್ಲಿ ಸರಕಾರವು ಈ ಮಾತನ್ನು ಹೇಳಿಕೊಳ್ಳುತ್ತಲೇ ಬಂದಿದೆ.

ಭಾರತದ ಮೊದಲ ಕೊರೋನ ವೈರಸ್ ಪ್ರಕರಣ ಜ.30ರಂದು ವರದಿಯಾಗಿತ್ತು. ಚೀನಾದ ವುಹಾನ್‌ನಿಂದ ಕೇರಳಕ್ಕೆ ಮರಳಿದ್ದ ವಿದ್ಯಾರ್ಥಿಯಲ್ಲಿ ಮೊದಲ ಸೋಂಕು ಕಾಣಿಸಿಕೊಂಡಿತ್ತು.

ಕೇವಲ ಚೀನಾದಿಂದ ಆಗಮಿಸುವ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುವುದು ಎಂದು ಜ.17ರಂದು ಪ್ರಕಟಿಸುವ ಮೂಲಕ ಮೋದಿ ಸರಕಾರವು ಕೊರೋನ ವಿರುದ್ಧ ಮೊದಲ ಕ್ರಮವನ್ನು ಕೈಗೊಂಡಿತ್ತು. ಆದರೆ ಈ ತಪಾಸಣೆ ದಿಲ್ಲಿ,ಮುಂಬೈ ಮತ್ತು ಕೋಲ್ಕತಾ ವಿಮಾನ ನಿಲ್ದಾಣಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಹೆಚ್ಚಿನ ಸ್ಕ್ರೀನಿಂಗ್‌ಗಳು ಸ್ವಯಂ ಘೋಷಣಾತ್ಮಕವಾದಂತಿದ್ದವು ಎಂದು thewire.in ವರದಿ ಮಾಡಿದೆ.

ಕೊರೋನ ವೈರಸ್ ಬಿಕ್ಕಟ್ಟಿನ ಕುರಿತು ತನ್ನ ಮೊದಲ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಜ.21ರಂದು ಪ್ರಕಟಿಸಿತ್ತು ಮತ್ತು ಆ ವರದಿಯಂತೆ ಚೀನಾದಲ್ಲಿ 278,ಜಪಾನ್,ದ.ಕೊರಿಯಾ ಮತ್ತು ಥೈಲ್ಯಾಂಡ್‌ಗಳಿಂದ ತಲಾ ಒಂದು ಸೇರಿದಂತೆ ವಿಶ್ವಾದ್ಯಂತ 282 ಪ್ರಕರಣಗಳಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿತ್ತು. ಅದೇ ದಿನ ಭಾರತವು ತನ್ನ ಥರ್ಮಲ್ ಸ್ಕ್ರೀನಿಂಗ್ ಅನ್ನು ವಿಸ್ತರಿಸಿತ್ತು. ಆದರೆ ಇದು ಇನ್ನಷ್ಟು ಹೆಚ್ಚಿನ ದೇಶಗಳ ಪ್ರಯಾಣಿಕರಿಗಾಗಿ ಅಲ್ಲವಾಗಿತ್ತು,ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ಏಳಕ್ಕೆ ಹೆಚ್ಚಿಸಲಾಗಿತ್ತಷ್ಟೇ.

ಜ.25ರಂದು ತನ್ನ ಎರಡನೇ ಪ್ರಯಾಣ ಸಲಹಾ ಸುತ್ತೋಲೆಯನ್ನು ಹೊರಡಿಸಿದ್ದ ಆರೋಗ್ಯ ಸಚಿವಾಲಯವು ಚೀನಾಕ್ಕೆ ಅನಗತ್ಯ ಪ್ರಯಾಣವನ್ನು ಕೈಗೊಳ್ಳದಂತೆ ಸಾರ್ವಜನಿಕರಿಗೆ ಸೂಚಿಸಿತ್ತು. ಚೀನಾದ ಹೊರಗೆ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿತ್ತಾದರೂ ಅದು ಚೀನಾದಿಂದ ಆಗಮಿಸುವ ಪ್ರಯಾಣಿಕರು ಪಾಲಿಸಬೇಕಾದ ಮಾರ್ಗಸೂಚಿಗಳಿಗೇ ಹೆಚ್ಚಿನ ಗಮನವನ್ನು ನೀಡಿತ್ತು.

ಜ.25ರಂದು ವಿಶ್ವಾದ್ಯಂತ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 1,320ಕ್ಕೇರಿತ್ತು.

ಜ.28ರಂದು ಸರಕಾರವು ಚೀನಾಕ್ಕೆ ಪ್ರಯಾಣದ ಇತಿಹಾಸವನ್ನು ಹೊಂದಿದ್ದವರಿಗಾಗಿ ಅಥವಾ ಅವರ ಸಂಪರ್ಕಕ್ಕೆ ಬಂದಿದ್ದು ಕೊರೋನ ವೈರಸ್ ಸೋಂಕಿಗೆ ಗುರಿಯಾಗಿರುವ ಶಂಕಿತರಿಗಾಗಿ ಸಹಾಯವಾಣಿಯನ್ನು ಆರಂಭಿಸಿತ್ತು. ಆ ವೇಳೆಗೆ ವಿಶ್ವಾದ್ಯಂತ ಪ್ರಕರಣಗಳ ಸಂಖ್ಯೆ 4,593ಕ್ಕೇರಿದ್ದು,ಚೀನಾದ ಹೊರಗೆ 14 ರಾಷ್ಟ್ರಗಳಿಗೆ ಸೋಂಕು ವ್ಯಾಪಿಸಿತ್ತು.

ಫೆ.5ರಂದು ಭಾರತೀಯರು ಚೀನಾಕ್ಕೆ ಪ್ರಯಾಣ ಕೈಗೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು ಮತ್ತು ಚೀನಾದಿಂದ ವಿದೇಶಿಯರ ಭಾರತೀಯ ವೀಸಾಗಳನ್ನು ರದ್ದುಗೊಳಿಸಲಾಗಿತ್ತು. ಅದೇ ದಿನ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಅನ್ನು ಸಿಂಗಾಪುರ ಮತ್ತು ಥೈಲ್ಯಾಂಡ್‌ಗಳಿಂದ ಆಗಮಿಸುವ ಪ್ರಯಾಣಿಕರಿಗೆ ವಿಸ್ತರಿಸಲಾಗಿತ್ತು. ಫೆ.13ರಂದು ಈ ಪಟ್ಟಿಯಲ್ಲಿ ಜಪಾನ್ ಮತ್ತು ದ.ಕೊರಿಯಾ ಹಾಗೂ ಫೆ.23ರಂದು ಇನ್ನೂ ನಾಲ್ಕು ಏಷ್ಯನ್ ದೇಶಗಳು ಸೇರ್ಪಡೆಗೊಂಡಿದ್ದವು.

 ಫೆ.26ರಂದು ಆರೋಗ್ಯ ಸಚಿವಾಲಯವು ಹೊರಡಿಸಿದ್ದ ನಾಲ್ಕನೇ ಸುತ್ತೋಲೆಯಲ್ಲಷ್ಟೇ ಕ್ವಾರಂಟೈನ್‌ನ್ನು ಚೀನಾದಿಂದ ಆಗಮಿಸುವ ಪ್ರಯಾಣಿಕರಿಗೂ ವಿಸ್ತರಿಸಲಾಗಿತ್ತು. ದ.ಕೊರಿಯಾ,ಇರಾನ್ ಮತ್ತು ಇಟಲಿಗಳಿಂದ ಆಗಮಿಸುವ ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಬಹುದು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಆವೇಳೆಗಾಗಲೇ ಕೊರೋನ ವೈರಸ್ ವಿಶ್ವದ 38 ದೇಶಗಳಿಗೆ ಹರಡಿತ್ತು. ಮಾ.4ರಂದು ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮತ್ತು ಬಂದರುಗಳಲ್ಲಿ ಸಾರ್ವತ್ರಿಕವಾಗಿ ಥರ್ಮಲ್ ಇಮೇಜಿಂಗ್ ನಡೆಸಲಾಗುವುದು ಎಂದು ಸರಕಾರವು ಪ್ರಕಟಿಸಿತ್ತು ಮತ್ತು ಭಾರತಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರು ತಮ್ಮ ಪ್ರಯಾಣ ಇತಿಹಾಸ ಮತ್ತು ಸಂಭಾವ್ಯ ಲಕ್ಷಣಗಳನ್ನು ಘೋಷಿಸಬೇಕಾಗಿತ್ತು.

ಮಾ.13ರಂದು ತಮ್ಮ ಪ್ರಯಾಣವನ್ನು ಇನ್ನೂ ಆರಂಭಿಸದಿದ್ದ ವಿದೇಶಿ ಪ್ರಜೆಗಳು ಹೊಂದಿದ್ದ ಎಲ್ಲ ಭಾರತೀಯ ವೀಸಾಗಳನ್ನು ರದ್ದುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News