ರವಿ ಪೂಜಾರಿ ಅಪರಾಧ ಪ್ರಕರಣ: ಸಿಸಿಬಿ ಪೊಲೀಸರಿಂದ ಮುತ್ತಪ್ಪ ರೈ ವಿಚಾರಣೆ

Update: 2020-04-16 12:33 GMT
ಮುತ್ತಪ್ಪ ರೈ

ಬೆಂಗಳೂರು, ಎ.16: ಭೂಗತ ಪಾತಕಿ ರವಿ ಪೂಜಾರಿ ಅಪರಾಧ ಪ್ರಕರಣಗಳ ಸಂಬಂಧ ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಅವರನ್ನು ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಗುರುವಾರ ನಗರದ ಹೊರವಲಯದ ಬಿಡದಿಯಲ್ಲಿರುವ ನಿವಾಸದಲ್ಲಿ ಮುತ್ತಪ್ಪ ರೈ ಅವನ್ನು ವಿಚಾರಣೆ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದ ಆಧಿಕಾರಿಗಳ ತಂಡ ರೈ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ರಾಜ್ಯ ಪೊಲೀಸರ ತಂಡ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಸೆನಗಲ್‍ನಲ್ಲಿ ವಶಕ್ಕೆ ಪಡೆದು ಕರೆದುಕೊಂಡು ಬಂದಿತ್ತು. ಪೂಜಾರಿ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲೇ 50ಕ್ಕೂ ಹೆಚ್ಚು ಪ್ರಕರಣಗಳಿವೆ. ಭೂಗತ ಪಾತಕಿಗಳಾದ ಛೋಟಾ ರಾಜನ್, ದಾವೂದ್ ಇಬ್ರಾಹಿಂ ತಂಡದಲ್ಲಿ ಗುರುತಿಸಿಕೊಂಡಿದ್ದ ರವಿ ಪೂಜಾರಿ ವಿರುದ್ಧ ಮಹಾರಾಷ್ಟ್ರ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಗಣ್ಯರಿಗೆ ಬೆದರಿಕೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಗಳೂ ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News