×
Ad

ಎ.20ರ ನಂತರ ಕಂಟೈನ್ಮೆಂಟ್ ಝೋನ್‌ ಅಲ್ಲದ ಕಡೆ ದ್ವಿಚಕ್ರ ವಾಹನ ಓಡಾಟಕ್ಕೆ ಅನುಮತಿ: ಸಿಎಂ ಯಡಿಯೂರಪ್ಪ

Update: 2020-04-18 17:25 IST

ಬೆಂಗಳೂರು, ಎ. 18: ಕೊರೋನ ವೈರಸ್ ಸೋಂಕು ಪೀಡಿತ ಕಂಟೈನ್ಮೆಂಟ್ ಝೋನ್‍ನಲ್ಲಿ ಇನ್ಸಿಡೆಂಟ್ ಕಮಾಂಡರ್ ನೇಮಕ ಮಾಡಿ, ಅವರಿಗೆ ಮ್ಯಾಜಿಸ್ಟೀರಿಯಲ್ ಅಧಿಕಾರ ನೀಡಲಾಗುವುದು. ಜತೆಗೆ ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ತಂಡ ರಚಿಸಲಾಗುವುದು. ಅವರಿಗೆ ಕಂಟೈನ್ಮೆಂಟ್ ಝೋನ್‍ಗಳ ಮೇಲ್ವಿಚಾರಣೆ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾರಕ ಕೊರೋನ ವೈರಸ್ ಸೋಂಕು ನಿಯಂತ್ರಣ ಸಂಬಂಧ ಎ.20ರ ನಂತರ ಕೈಗೊಳ್ಳಬೇಕಾದ ಕ್ರಮಗಳ ಸಂಬಂಧ ಹಿರಿಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಲಾಕ್‍ಡೌನ್ ಉಲ್ಲಂಘನೆ ದೂರುಗಳು ಹೆಚ್ಚುತ್ತಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಕೋವಿಡ್-19 ಪ್ರಕರಣಗಳು ಪತ್ತೆಯಾದ ಪ್ರದೇಶವನ್ನು 'ಕಂಟೈನ್ಮೆಂಟ್ ಝೋನ್' ಎಂದು ಗುರುತಿಸಲಾಗುವುದು ಹಾಗೂ ಇತರ ಪ್ರದೇಶಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಗಿದೆ. 'ಕಂಟೈನ್ಮೆಂಟ್ ಝೋನ್' ಪ್ರದೇಶದಲ್ಲಿ ಲಾಕ್‍ಡೌನ್ ಅನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಈ ಪ್ರದೇಶಗಳಲ್ಲಿ ಯಾರೂ ಕೂಡ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು. ಅವರಿಗೆ ಅಗತ್ಯವಿರುವ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು. ಬಫರ್ ಝೋನ್‍ನಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದ ಅವರು, ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ, ಇತರ ವಲಯಗಳಲ್ಲಿ ದ್ವಿಚಕ್ರ ವಾಹನಗಳು, ಇಲ್ಲಿಯವರೆಗೆ ಪಾಸ್ ಪಡೆದಿರುವ ಕಾರುಗಳು ಹಾಗೂ ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗುವುದು ಎಂದರು.

ಐಟಿ-ಬಿಟಿ ವಲಯಗಳಲ್ಲಿ ಶೇ.33ರಷ್ಟು ಮಂದಿ ಕಚೇರಿಗಳಿಗೆ ಹಾಜರಾಗಲು ಅನುಮತಿ ನೀಡಲಾಗುವುದು. ನಗರ ಪ್ರದೇಶದಲ್ಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಉಳಿದುಕೊಳ್ಳುವ ವ್ಯವಸ್ಥೆ ಇರುವಲ್ಲಿ ನಿರ್ಮಾಣ ಚಟುವಟಿಕೆಗಳು ಪ್ರಾರಂಭಿಸಲು ಅನುಮತಿ ನೀಡಲಾಗುವುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಉತ್ಪಾದನಾ ವಲಯದ ಕೈಗಾರಿಕೆಗಳು ಹಾಗೂ ನಗರ ಪ್ರದೇಶದಲ್ಲಿ ಎಸ್‍ಇಝಡ್‍ಗಳು, ಕೈಗಾರಿಕಾ ವಸಾಹತುಗಳು, ಕೈಗಾರಿಕಾ ಟೌನ್‍ಶಿಪ್‍ಗಳಲ್ಲಿ ಕೈಗಾರಿಕೆಗಳು ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇದೇ ವೇಳೆ ವಿವರಣೆ ನೀಡಿದರು.

ಯಾವುದೇ ಕಾರಣಕ್ಕೂ ಅಂತರ ಜಿಲ್ಲೆ ಪ್ರಯಾಣಕ್ಕೆ ಅವಕಾಶವಿಲ್ಲ. ಬೆಂಗಳೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಕೈಗಾರಿಕೆಗಳ ಉದ್ಯೋಗಿಗಳ ಓಡಾಟದ ದೃಷ್ಟಿಯಿಂದ ಒಂದು ಜಿಲ್ಲೆಯನ್ನಾಗಿ ಪರಿಗಣಿಸಲಾಗುವುದು ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

ಸರಕಾರಿ ಕಚೇರಿಗಳಲ್ಲಿ ಶೇ.33ರಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು, ಅವರಿಗೆ ಒಪ್ಪಂದದ ಆಧಾರದ ಮೇಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸೇರಿದಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದ ಅವರು, ಮೇ 3ರ ವರೆಗೆ ಕಲಂ 144ರ ಅನ್ವಯ ನಿಷೇಧಾಜ್ಞೆ ಮುಂದುವರಿಸಲಾಗುವುದು ಎಂದು ಹೇಳಿದರು.

ದ್ವಿಚಕ್ರ ವಾಹನಕ್ಕೆ ಓಡಾಟಕ್ಕೆ ಅವಕಾಶ
'ಕಂಟೈನ್ಮೆಂಟ್ ಝೋನ್' ಹೊರತುಪಡಿಸಿ, ಇತರ ವಲಯಗಳಲ್ಲಿ ದ್ವಿಚಕ್ರ ವಾಹನಗಳು, ಇಲ್ಲಿಯವರೆಗೆ ಪಾಸ್ ಪಡೆದಿರುವ ಕಾರುಗಳು ಹಾಗೂ ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಎ.20ರ ಬಳಿಕ ಅನುಮತಿ ನೀಡಲಾಗುವುದು. ಐಟಿ-ಬಿಟಿ ವಲಯಗಳಲ್ಲಿ ಶೇ.33ರಷ್ಟು ಮಂದಿ ಕಚೇರಿಗಳಿಗೆ ಹಾಜರಾಗಲು ಅನುಮತಿ. ನಗರ ಪ್ರದೇಶದಲ್ಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಉಳಿದುಕೊಳ್ಳುವ ವ್ಯವಸ್ಥೆ ಇರುವಲ್ಲಿ ನಿರ್ಮಾಣ ಚಟುವಟಿಕೆಗಳು ಪ್ರಾರಂಭಿಸಬಹುದು

-ಯಡಿಯೂರಪ್ಪ, ಮುಖ್ಯಮಂತ್ರಿ

ಹಿರಿಯ ನಾಗರಿಕರು ಮನೆಯಿಂದ ಯಾವುದೇ ಕಾರಣಕ್ಕೂ ಹೊರಬರಬಾರದು. ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ. ದಿನಸಿ ಖರೀದಿ ವೇಳೆ, ಮಾರುಕಟ್ಟೆಗಳು ಸೇರಿದಂತೆ ಎಲ್ಲ ಕಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಲಾಗುವುದು'

-ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News