ಯುಎಇ: ಬ್ಯಾರೀಸ್ ವೆಲ್ಫೇರ್ ಫೋರಂನಿಂದ ಅನಿವಾಸಿ ಕನ್ನಡಿಗರಿಗೆ ವೈದ್ಯಕೀಯ ಸೇವೆ, ಆಹಾರ ವಿತರಣೆ

Update: 2020-04-20 05:30 GMT

ಯುಎಇ, ಎ.20: ಕೊರೋನ ವೈರಸ್ ಸೋಂಕು ಭೀತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರಿಗೆ ಬ್ಯಾರೀಸ್ ವೆಲ್ಫೇರ್ ಫೋರಂ, ಅಬುಧಾಬಿ ವೈದ್ಯಕೀಯ ಸೇವೆ ಮತ್ತು ಆಹಾರ ಪದಾರ್ಥಗಳನ್ನು ಒದಗಿಸುವುದರ ಮೂಲಕ ನೆರವಾಗಿದೆ.

ಭಾರತೀಯ ದೂತವಾಸದ ಸಹಕಾರದೊಂದಿಗೆ ರೋಗಿಗಳು ಮತ್ತು ಅವರ ಒಡನಾಟದಲ್ಲಿರುವವರ ವೈದ್ಯಕೀಯ ತಪಾಸಣೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಮುಂತಾದ ಜೀವ ಕಾರುಣ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.

ಸಾವಿರಾರು ಕನ್ನಡಿಗರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅಂಥವರನ್ನು ಗುರುತಿಸಿ ಅವರಿಗೆ ಆಹಾರ ಮತ್ತು ಇನ್ನಿತರ ದೈನಂದಿನ ಆವಶ್ಯಕ ವಸ್ತುಗಳ ಪೂರೈಕೆ, ಧನ ಸಹಾಯವನ್ನು ಸ್ವಯಂ ಸೇವಕರು ನೀಡುತ್ತಿದ್ದಾರೆ. ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮತ್ತು ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಈ ಪರಿಹಾರ ಕಾರ್ಯದ ನೇತೃತ್ವ ವಹಿಸಿದ್ದಾರೆ.

ಸಿದ್ದೀಕ್ ಕಾಪು, ಇಮ್ರಾನ್ ಅಹ್ಮದ್, ರಶೀದ್ ಬಿಜೈ, ನವಾಝ್ ಉಚ್ಚಿಲ್, ಮುಹಮ್ಮದ್ ಕಲ್ಲಾಪು, ರಶೀದ್ ವಿಟ್ಲ, ಬಶೀರ್ ಉಚ್ಚಿಲ್ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಬಶೀರ್ ಬಜ್ಪೆ, ಹಂಝ ಎರ್ಮಾಳ್, ಅಬ್ದುಲ್ ರವೂಫ್, ಹಮೀದ್ ಗುರುಪುರ, ಅಬ್ದುಲ್ ಮಜೀದ್ ಕುತ್ತಾರ್, ಹನೀಫ್ ಉಳ್ಳಾಲ್, ಜಲೀಲ್ ಬಜ್ಪೆ, ಮಜೀದ್ ಆತೂರ್, ಮುಜೀಬ್ ಉಚ್ಚಿಲ್, ಇರ್ಫಾನ್ ಅಹ್ಮದ್ ಮತ್ತು ಮೊಹಿದೀನ್ ಹಂಡಲೆ ಸಹಕಾರ ನೀಡುತ್ತಿದ್ದಾರೆ.

ಯುಎಇ ಯಲ್ಲಿ ಅನಿವಾಸಿ ಭಾರತೀಯ ಕನ್ನಡಿಗರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದು, ಅವರಿಗೆ ನೆರವು ನೀಡಿ ಅವರ ಸಂಕಷ್ಟ ಪರಿಹಾರಕ್ಕೆ ಪ್ರಯತ್ನಿಸಬೇಕೆಂದು ಕರ್ನಾಟಕದ ಮುಖ್ಯಮಂತ್ರಿ, ಭಾರತ ಸರಕಾರದ ವಿದೇಶಾಂಗ ಮಂತ್ರಿ ಮತ್ತು ಇನ್ನಿತರ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಮುಹಮ್ಮದ್ ಅಲಿ ಉಚ್ಚಿಲ್ ಮನವಿ ಮಾಡಿದ್ದಾರೆ.

ಸಂಕಷ್ಟಗಳಿಗೆ ಒಳಗಾಗಿ ಊರಿಗೆ ಮರಳ ಬಯಸುವಂತಹ ಅನಿವಾಸಿ ಭಾರತೀಯ ಕನ್ನಡಿಗರನ್ನು ಕರೆತರುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಭಾರತ ಮತ್ತು ಯುಎಇ ಕಾರ್ಯಪ್ರವೃತ್ತವಾಗಬೇಕು ಮತ್ತು ಸರಕಾರದ ಜೊತೆಗೆ ಮಾತುಕತೆ ನಡೆಸಿ ಅನಿವಾಸಿ ಭಾರತೀಯ ಕನ್ನಡಿಗರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ ಮತ್ತು ಕ್ವಾರಂಟೈನ್ ವ್ಯವಸ್ಥೆಗಳ ಬಗ್ಗೆ ಖಾತರಿಪಡಿಸಬೇಕು. ಕೆಲಸ ಕಳೆದುಕೊಂಡು ತಾಯ್ನಾಡಿಗೆ ಹಿಂದಿರುಗುವ ಕನ್ನಡಿಗರ ನೆರವಿಗೆ ಕೇರಳದ 'ನೊರ್ರಾ' ಮಾದರಿಯಲ್ಲಿ ಪ್ರಾಧಿಕಾರ ಸ್ಥಾಪಿಸಿ ಅವರಿಗೆ ಸಹಾಯ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News