ಪ್ರಭುತ್ವದಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ

Update: 2020-04-24 17:50 GMT

ಕೊರೋನ ವೈರಾಣುವಿನ ದಾಳಿಯ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲೇ ಸುರಕ್ಷಿತವಾಗಿರಬೇಕು ಎಂದು ಪ್ರತಿಪಾದಿಸುವವರು ತೇಲ್ತುಂಬ್ಡೆ ಮತ್ತು ನವ್ಲಾಖಾ ಇಂದು ಜೈಲಿನಲ್ಲಿರಬೇಕೆಂದು ಬಯಸುವುದು ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಪ್ರಭುತ್ವ ವಿರೋಧಿ ಹೋರಾಟಗಾರರ ವಿರುದ್ಧ ಕಾಲ್ಪನಿಕ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿ ಅವರನ್ನು ದಮನಗೊಳಿಸಲು ಪ್ರಭುತ್ವ ಮತ್ತು ನ್ಯಾಯಾಂಗ ಮುಂದಾಗಿರುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಕಾಲವೇ ಸೂಕ್ತ ಉತ್ತರ ನೀಡುತ್ತದೆ.


ಭೀಮಾ ಕೋರೆಗಾಂವ್ ವಿಜಯೋತ್ಸವ ಭಾರತದ ಮೂಲನಿವಾಸಿಗಳು ದಮನಕಾರಿ ಪೇಶ್ವೆ ಪ್ರಭುತ್ವದ ವಿರುದ್ಧ ಜನವರಿ 1, 1818ರಲ್ಲಿ ಸಾಧಿಸಿದ ಐತಿಹಾಸಿಕ ವಿಜಯದ ಸಂಕೇತವಾಗಿದೆ. ಪ್ರಖ್ಯಾತ ಮಹಾರ್ ರೆಜಿಮೆಂಟಿನ ಸುಮಾರು 500 ಯೋಧರನ್ನೊಳಗೊಂಡ ಸಿದ ನಾಯಕ ಮತ್ತಿತರ ಸ್ವಾಭಿಮಾನಿಗಳು ಎರಡನೇ ಬಾಜಿರಾವ್ ಪೇಶ್ವೆ ನೇತೃತ್ವದ ದಮನಕಾರಿ ಪ್ರಭುತ್ವ ನಿಷ್ಠ 30 ಸಾವಿರ ಯೋಧರನ್ನೊಳಗೊಂಡ ಮರಾಠಿ ಸೇನೆಯನ್ನು ಸದೆಬಡೆದು ಸಾಧಿಸಿದ ಅಮೋಘ ಗೆಲುವು ಭಾರತದ ಚರಿತ್ರೆಯಲ್ಲಿ ಒಂದು ಮೈಲುಗಲ್ಲಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ತಾವು ಬದುಕಿರುವ ತನಕ ಜನವರಿ 1 ರಂದು ಪ್ರತಿವರ್ಷ ಪುಣೆ ನಗರದ ಸಮೀಪದಲ್ಲಿರುವ ಕೋರೆಗಾಂವ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದರು. 1818ರಿಂದ 2020ರ ತನಕ ಸುಮಾರು 202 ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಭಾರತದ ಉದ್ದಗಲಕ್ಕೂ ಸ್ವಾಭಿಮಾನ ದಲಿತರು ಅತ್ಯಂತ ಪ್ರೀತಿ, ಶಾಂತಿ ಮತ್ತು ಶಿಸ್ತಿನಿಂದ ಆಚರಿಸಿದ್ದಾರೆ. ಇಂದು ಶಿವಾಜಿ ಮಹಾರಾಜರನ್ನು ದೇಶಾಭಿಮಾನ ಮತ್ತು ಶೌರ್ಯದ ಸಂಕೇತವೆಂದು ಬ್ರಾಂಡ್ ಮಾಡಿಕೊಂಡು ರಾಜಕೀಯ ಲಾಭ ಗಳಿಸುತ್ತಿರುವ ಮನುವಾದಿಗಳ ಪೂರ್ವಜರು ಶಿವಾಜಿ ಪಟ್ಟಾಭಿಷೇಕದಲ್ಲಿ ಅವರು ಶೂದ್ರ ಸಮುದಾಯಕ್ಕೆ ಸೇರಿದ ರಾಜನೆಂಬ ಕಾರಣಕ್ಕಾಗಿ ಭಾಗವಹಿಸಲು ನಿರಾಕರಿಸಿರುವ ಹೇಯ ಘಟನೆ ಭಾರತದ ಚರಿತ್ರೆಯಲ್ಲಿ ದಾಖಲಾಗಿದೆ. ಇದೇ ಮನುವಾದಿಗಳು ಇಂದು ತಮಗೆ ಲಭಿಸಿರುವ ರಾಜ್ಯಾಧಿಕಾರವನ್ನು ದುರುಪಯೋಗಪಡಿಸಿಕೊಂಡು ನೂತನ ಸಹಸ್ರಮಾನದಲ್ಲಿ ಅಂಬೇಡ್ಕರ್ ಸಂವಿಧಾನವನ್ನು ಬದಲಾಯಿಸಿ ಮನುಧರ್ಮಶಾಸ್ತ್ರವನ್ನು ಮತ್ತೊಮ್ಮೆ ಜಾರಿಗೊಳಿಸುವ ಸಂಚನ್ನು ರೂಪಿಸಿದ್ದಾರೆ. ಅಲ್ಲದೆ, ಅಂಬೇಡ್ಕರ್ ಒಬ್ಬರೆ ಭಾರತದ ಸಂವಿಧಾನ ಬರೆದಿಲ್ಲವೆಂದು ಕಟ್ಟುಕಥೆಯನ್ನು ಹೆಣೆದು ನಗೆಪಾಟಲಿಗೆ ಗುರಿಯಾಗಿದ್ದಾರೆ.

2014ರಿಂದ ಬಹುತ್ವ ಕೇಂದ್ರಿತ ಬಹುಜನರ ಭಾರತವನ್ನು ಆಳುತ್ತಿರುವ ಎನ್‌ಡಿಎ ಸರಕಾರದ ಎಲ್ಲಾ ಕಪಟ ನಾಟಕಗಳ ಸೂತ್ರಧಾರಿ ಮಹಾರಾಷ್ಟ್ರದ ನಾಗಪುರದಲ್ಲಿರುವ ಹಿಂದೂ ಧರ್ಮದ ಪರಮ ರಕ್ಷಕ ಆರೆಸ್ಸೆಸ್ ಸಂಘಟನೆ. ಈ ದೇಶವನ್ನಾಳುತ್ತಿರುವ ಮೂಲಭೂತವಾದಿಗಳಿಗೆ ದಮನಿತ ವರ್ಗಗಳು ಸಂಘಟಿತರಾಗುವುದು, ಜಾಗೃತರಾಗುವುದು ಮತ್ತು ಮಹಾಪುರುಷರ ಪರಿವರ್ತನೆ ರಥವನ್ನು ಮುನ್ನಡೆಸುವುದು ಸುತರಾಂ ಇಷ್ಟವಿಲ್ಲ. ಇಂತಹ ವಿಶೇಷ ಸಂದರ್ಭಗಳಲ್ಲಿ ಗೊಂದಲ ಮೂಡಿಸುವುದು, ಗಲಭೆ ಸೃಷ್ಟಿಸುವುದು, ಸಾಮಾಜಿಕ ಸಾಮರಸ್ಯ ಕದಡುವುದು, ವಿಚಾರವಾದಿಗಳನ್ನು ನಗರ ನಕ್ಸಲರೆಂದು ಬಿಂಬಿಸುವುದು, ಸಂಘಟಕರನ್ನು ದೇಶದ್ರೋಹಿಗಳೆಂದು ಚಿತ್ರಿಸುವುದು, ವಿಚಾರ ಪ್ರಚೋದಕ ಭಾಷಣಗಳನ್ನು ಪ್ರಚೋದನಕಾರಿ ಭಾಷಣಗಳೆಂದು ಬಣ್ಣಿಸುವುದು, ಕಾರ್ಯಕ್ರಮಗಳಿಗೆ ಮಾವೋವಾದಿಗಳ ಆರ್ಥಿಕ ಬೆಂಬಲವಿದೆಯೆಂದು ಹೇಳುವುದು ಮತ್ತು ಪ್ರಗತಿಪರ ಹೋರಾಟಗಾರರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಿ ಬಂಧಿಸುವುದು ಮೊದಲಾದ ಕುತಂತ್ರಗಳು ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದ ತನಕ ಹಿಂದೂ ರಾಷ್ಟ್ರ ನಿರ್ಮಾಣ ಗುರಿಯನ್ನು ಹೊಂದಿರುವ ಆರೆಸ್ಸೆಸ್ ನೇತೃತ್ವದ ಸ್ಥಾಪಿತ ಹಿತಾಸಕ್ತಿಗಳ ನೇತೃತ್ವದ ಮೋದಿ ಸಾಮ್ರಾಜ್ಯದಲ್ಲಿ ಕಳೆದ ಆರು ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಿವೆ.

ಜನವರಿ 1, 2018ರಲ್ಲಿ ಪುಣೆ ನಗರದ ಬಳಿ ಕೋರೆಗಾಂವ್ ಸ್ಮಾರಕ ಪ್ರದೇಶದಲ್ಲಿ ಎಂದಿನಂತೆ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಿ ದೇಶದ ಮೂಲನಿವಾಸಿಗಳಿಗೆ ನೈಜ ಇತಿಹಾಸವನ್ನು ನೆನಪಿಸಿಕೊಟ್ಟ ಅಂಬೇಡ್ಕರ್ ಪರಿವರ್ತನೆ ರಥವನ್ನು ಮುಂದಕ್ಕೆಳೆದು ಅಧಿಕಾರ, ಸಂಪತ್ತು ಮತ್ತು ಅವಕಾಶ ವಂಚಿತ ಶೋಷಿತ ಸಮುದಾಯಗಳನ್ನು ಸಬಲೀಕರಣದೆಡೆಗೆ ಮುನ್ನಡೆಸಲು ಸಮಾನ ಮನಸ್ಕ ಸಾಮಾಜಿಕ ನ್ಯಾಯಪರ ಹೋರಾಟಗಾರರ ವೇದಿಕೆಯಾದ ಎಲ್ಘಾರ್ ಪರಿಷತ್ ಸಮ್ಮೇಳನವೊಂದನ್ನು ಏರ್ಪಡಿಸಿತ್ತು. ಈ ಸಮ್ಮೇಳನ ಯಾವುದೇ ಧರ್ಮ ಅಥವಾ ರಾಜಕೀಯ ಸಂಘಟನೆಯ ವಿರುದ್ಧವಲ್ಲ. ಇದನ್ನು ಸಂಘಟಿಸಿದವರು ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹಾಗೂ ಭಾರತೀಯ ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಬಿ.ಸಾವಂತ್, ಮುಂಬೈ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ.ಜಿ.ಕೋಲ್ಸೆ ಪಾಟೀಲ್, ಅಂಬೇಡ್ಕರ್‌ವಾದಿ ಆನಂದ್ ತೇಲ್ತುಂಬ್ಡೆ ಮೊದಲಾದ ಗಣ್ಯವ್ಯಕ್ತಿಗಳು. ವಿಶೇಷವಾಗಿ ಶೋಷಿತ ಸಮುದಾಯಗಳಿಗೆ ಸೇರಿದ ಚಿಂತಕರು, ಸಂಘಟಕರು ಮತ್ತು ಹೋರಾಟಗಾರರನ್ನೊಳಗೊಂಡ ಸುಮಾರು 300 ಪ್ರಗತಿಪರ ಸಂಘಟನೆಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದವು. ಸಂಬಂಧಪಟ್ಟ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿಗಳ ಅನುಮತಿ ಪಡೆದುಕೊಂಡೇ ಎಲ್ಘಾರ್ ಪರಿಷತ್ ಈ ಸಮ್ಮೇಳನವನ್ನು ಏರ್ಪಡಿಸಿತ್ತು.

ಪ್ರಗತಿಪರ ಎಲ್ಘಾರ್ ಪರಿಷತ್ ಏರ್ಪಡಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಸಂದರ್ಭದಲ್ಲಿ ಆರೆಸ್ಸೆಸ್ ಮತ್ತು ಕೇಂದ್ರ ಸರಕಾರದ ಬೆಂಬಲ ಪಡೆದ ಮನುವಾದಿಗಳು ಪ್ರಭುತ್ವ ವಿರೋಧಿ ಜನಪರ ಶಕ್ತಿಗಳನ್ನು ದಮನಗೊಳಿಸಿ ಪರಿವರ್ತನಾ ರಥವನ್ನು ಹಿಮ್ಮೆಟ್ಟಿಸುವ ಯೋಜನೆಯನ್ನು ರೂಪಿಸಿದ್ದರು. ಈ ಕುತಂತ್ರದ ಒಂದು ಭಾಗವಾಗಿ ಛತ್ರಪತಿ ಶಿವಾಜಿ ಮಗ ಸಂಭಾಜಿ ಮಹಾರಾಜನ ಸಮಾಧಿಯ ವಿವಾದವನ್ನು ಮಿಲಿಂದ ಏಕಬೋಟೆ, ಸಂಭಾಜಿ ಬಿಡೆ ಮೊದಲಾದವರ ಮೂಲಕ ಸೃಷ್ಟಿಸಲಾಯಿತು. ಆದರೆ ಸಮಯ, ಸಂದರ್ಭ ಮತ್ತು ಪರಿಸರವನ್ನು ಸೂಕ್ಷ್ಮವಾಗಿ ಗ್ರಹಿಸಿದ ದಲಿತರು ಮತ್ತು ಮರಾಠರು ಕುತಂತ್ರಕ್ಕೆ ಬಲಿಯಾಗದಿರಲು ನಿರ್ಧರಿಸಿದರು. ಆದರೆ ಈ ಕಿತಾಪತಿಗಳು ಇಷ್ಟಕ್ಕೇ ಸುಮ್ಮನಾಗದೆ ಎಲ್ಘಾರ್ ಪರಿಷತ್‌ನ ಸಮ್ಮೇಳನದಲ್ಲಿ ಭಾಗಿಯಾಗಿದ್ದ ದಲಿತರ ಮೇಲೆ ಧಾಳಿ ನಡೆಸಿದರು. ಪ್ರಭುತ್ವ, ಪೊಲೀಸರು ಮತ್ತು ಸಮಾಜಘಾತುಕ ಶಕ್ತಿಗಳು ಒಗ್ಗೂಡಿ ನಡೆಸಿದ ಸಂಘಟಿತ ಹಿಂಸಾಚಾರಕ್ಕೆ ಅನೇಕ ದಲಿತರು ಬಲಿಯಾದರು. ಸಮ್ಮೇಳನದಲ್ಲಿ ಭಾಗವಹಿಸಿದ್ದ ದಲಿತ ನಾಯಕ ಜಿಗ್ನೇಶ್ ಮೇವಾನಿಯವರನ್ನು ಪ್ರಚೋದನಕಾರಿ ಭಾಷಣ ಮಾಡಿದರೆಂದು ಬಂಧಿಸಲಾಯಿತು. ಸಮ್ಮೇಳನಕ್ಕೆ ಮಾವೋವಾದಿಗಳ ನೈತಿಕ ಹಾಗೂ ಆರ್ಥಿಕ ಬೆಂಬಲ ವಿದೆಯೆಂದು ಮನುವಾದಿ ಮಾಧ್ಯಮಗಳ ಸಹಾಯದಿಂದ ಅಪಪ್ರಚಾರ ನಡೆಸಲಾಯಿತು. ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧವಿಲ್ಲದ ಮಾನವ ಹಕ್ಕುಗಳ ಹೋರಾಟಗಾರರಾದ ಸುಧಾ ಭಾರದ್ವಾಜ್, ಶೋಮಸೇನ್, ಸುರೇಂದ್ರ ಗಾಡ್ಲಿಂಗ್, ಮಹೇಶ್ ರಾವತ್, ಅರುಣ್ ಫೆರೇರಾ, ಸುಧೀರ್ ಧಾವಳೆ, ರೋನಾ ವಿಲ್ಸನ್, ವರ್ಣನ್ ಗೋನ್ಸಾಲಿಸ್, ವರವರರಾವ್ ಮೊದಲಾದವರನ್ನು ಪ್ರಧಾನಿ ಮೋದಿಯವರ ಹತ್ಯೆಯ ಸಂಚಿನ ರೂವಾರಿಗಳೆಂಬ ಸುಳ್ಳು ಅಪಾದನೆ ಹೊರಿಸಿ ಬಂಧಿಸಲಾಯಿತು.

ನಿಜವಾದ ಕೋಮುವಾದಿ ಕೊಲೆಗಡುಕರಿಗೆ ರಕ್ಷಣೆ - ಹೋರಾಟಗಾರರನ್ನು ಹತ್ಯೆ ಸಂಚಿನ ಸುಳ್ಳು ಆಪಾದನೆ ಮೇಲೆ ಜೈಲಿಗೆ ತಳ್ಳುವುದು ಎಂತಹ ವಿಪರ್ಯಾಸ! ಸಮಕಾಲೀನ ಬಹುತ್ವ ಭಾರತಕ್ಕೆ ಇದೇ ಮೋದಿ ಸಾಮ್ರಾಜ್ಯದ ಬಹುದೊಡ್ಡ ಬಳುವಳಿ!! ಪ್ರಬುದ್ಧ ಚಿಂತಕರು, ಸಂವಿಧಾನ ನಿಷ್ಠರು ಮತ್ತು ನಾಗರಿಕ ಹಕ್ಕುಗಳ ಪ್ರಬಲ ಹೋರಾಟಗಾರರಾದ ಆನಂದ್ ತೇಲ್ತುಂಬ್ಡೆ, ಗೌತಮ್ ನವ್ಲಾಖಾರನ್ನು ಮಾವೋವಾದಿ-ನಗರ ನಕ್ಸಲರೆಂಬ ಹಣೆಪಟ್ಟಿ ಹಚ್ಚಿ ನಮ್ಮನ್ನು ಆಳುತ್ತಿರುವ ಸಾಂಸ್ಕೃತಿಕ ಸಾಮ್ರಾಜ್ಯಶಾಹಿ 2018ರಲ್ಲಿ ಜರುಗಿದ ಎಲ್ಘಾರ್ ಪರಿಷತ್‌ನ ಭೀಮಾ ಕೋರೆಗಾಂವ್ ಗಲಭೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾದಳದ ಮುಂದೆ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಸ್ವಯಂ ಪ್ರೇರಣೆಯಿಂದ ಶರಣಾದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವುದು ಸಾಂವಿಧಾನಿಕ ಮೌಲ್ಯಗಳು ಮತ್ತು ಮೂಲಭೂತ ಮಾನವ ಹಕ್ಕುಗಳ ಹರಣವಾಗಿದೆ. ಇವರಿಬ್ಬರೂ ಗಣ್ಯರು. ಅತ್ಯುನ್ನತ ಶಿಕ್ಷಣ, ಜವಾಬ್ದಾರಿಯುತ ಸಾರ್ವಜನಿಕ ಸೇವೆ, ಸಾಂವಿಧಾನಿಕ ಆಶಯಗಳಿಗೆ ನಿಷ್ಟೆ ಮತ್ತು ದಮನಿತ ವರ್ಗಗಳ ಮಾನವ ಹಕ್ಕುಗಳ ರಕ್ಷಣೆಗೆ ಬದ್ಧರಾಗಿ ಕಳೆದ 40 ವರ್ಷಗಳಿಂದ ಪಾರದರ್ಶಕ ಹಾಗೂ ನಿಷ್ಕಳಂಕ ಸೇವೆ ಸಲ್ಲಿಸಿ ದೇಶದಲ್ಲಿ ಜನಮನ್ನಣೆ ಗಳಿಸಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯ ಕೇಂದ್ರಿತ ಸಮಸಮಾಜ ರೂಪಿಸುವ ಪ್ರಜಾಸತ್ತಾತ್ಮಕ ಆಂದೋಲನಗಳಲ್ಲಿ ಸಕ್ರಿಯವಾಗಿ ದುಡಿದಿರುವ ಇವರಿಗೆ ಮನುವಾದಿಗಳಿಂದ ನಿಯಂತ್ರಿಸಲ್ಪಟ್ಟಿರುವ ಎನ್‌ಡಿಎ ಸರಕಾರ ದೇಶದ್ರೋಹದ ಹುಸಿ ಕಥನಗಳನ್ನು ಆಧರಿಸಿದ ಸುಳ್ಳು ಮೊಕದ್ದಮೆಗಳನ್ನು ಸೃಷ್ಟಿಸಿ ನ್ಯಾಯಾಂಗ ಬಂಧನಕ್ಕೆ ಗುರಿಪಡಿಸಿರುವುದು ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿರುವುದನ್ನು ಸೂಚಿಸುತ್ತದೆ. ಕೊರೋನ ವೈರಾಣು ಭಾರತವನ್ನೂ ಒಳಗೊಂಡಂತೆ ಇಡೀ ವಿಶ್ವವನ್ನೇ ತನ್ನ ಕಬಂಧಬಾಹುವಿನಿಂದ ಆವರಿಸಿ ಆತಂಕಕ್ಕೆ ಗುರಿಮಾಡಿರುವ ಹಿನ್ನೆಲೆಯಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ವಿಚಾರಣಾಧೀನ ಕೈದಿಗಳನ್ನು ಪೆರೋಲ್ ಮೇಲೆ ಮುಂದಿನ ತೀರ್ಮಾನದವರೆಗೆ ಜೈಲಿನಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಬೇಕೆಂದು ಮಾನವೀಯ ನೆಲೆಗಟ್ಟಿನಲ್ಲಿ ವಿವಿಧ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿರುವ ಇತ್ತೀಚಿನ ನಿರ್ದೇಶನ ಸಂದರ್ಭೋಚಿತವಾಗಿದೆ. ಆದರೆ ಇದೇ ಸರ್ವೋಚ್ಚ ನ್ಯಾಯಾಲಯ ತೇಲ್ತುಂಬ್ಡೆ ಮತ್ತು ನವ್ಲಾಖಾರನ್ನು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಕಾನೂನು ವಿರೋಧಿ ಚಟುವಟಿಕೆಗಳನ್ನು ತಡೆಗಟ್ಟುವ ಕಾಯ್ದೆಗೆ (ಯುಎಪಿಎ) ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವುದು ನೈಸರ್ಗಿಕ ನ್ಯಾಯತತ್ವಕ್ಕೆ ವಿರುದ್ಧವಾಗಿದೆ.

ಈ ಇಬ್ಬರು ಗಣ್ಯರೂ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮುಂದೆ ಹಾಜರಾಗಿದ್ದರು. ತೇಲ್ತುಂಬ್ಡೆಯವರನ್ನು ಮುಂಬೈನ ಎನ್‌ಐಎ ಶಾಖೆ ಸರಕಾರಿ ವಕೀಲ ಪ್ರಕಾಶ್‌ಶೆಟ್ಟಿ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲು 10 ದಿನಗಳ ಕಾಲ ತನ್ನ ವಶಕ್ಕೆ ನೀಡಬೇಕೆಂದು ಮಾಡಿದ ಮನವಿಗೆ ಅನುಗುಣವಾಗಿ ನ್ಯಾಯಾಂಗ ಬಂಧನಕ್ಕೆ ಗುರಿಪಡಿಸಿದೆ. ಇದೇ ಸಂದರ್ಭದಲ್ಲಿ ತೇಲ್ತುಂಬ್ಡೆಯವರ ವಕೀಲ ಅರಿಫ್ ಸಿದ್ದೀಕಿ ಘಟನೆ ನಡೆದಾಗ ಆರೋಪಿ ಸಂಬಂಧಪಟ್ಟ ಸ್ಥಳದಲ್ಲೇ ಇರಲಿಲ್ಲ ಮತ್ತು ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಬಲವಾದ ಸಾಕ್ಷಾಧಾರಗಳಿಲ್ಲ ಎಂದು ಪ್ರತಿಪಾದಿಸಿದರೂ ಎನ್‌ಐಎ ಇವರ ವಾದವನ್ನು ಪುರಸ್ಕರಿಸಿಲ್ಲ. ಅಲ್ಲದೆ ಇವರ ನ್ಯಾಯಾಂಗ ಬಂಧನವನ್ನು ಪ್ರಸ್ತುತ ಸಂದರ್ಭದಲ್ಲಿ ಎಪ್ರಿಲ್ 25ರ ತನಕ ಎನ್‌ಐಎ ವಿಸ್ತರಿಸಿದೆ. ನವ್ಲಾಖಾ ವಿಷಯದಲ್ಲಿ ಅವರು ಹೊಸದಿಲ್ಲಿಯಲ್ಲಿರುವ ಕಾರಣ ಪ್ರಕರಣ ತನ್ನ ಕಾರ್ಯಕ್ಷೇತ್ರವ್ಯಾಪ್ತಿಗೆ ಬರುವುದಿಲ್ಲವೆಂದು ಮುಂಬೈ ಎನ್‌ಐಎ ನ್ಯಾಯಾಲಯ ಅಭಿಪ್ರಾಯಪಟ್ಟಿದ್ದರೂ ಇತ್ತೀಚೆಗೆ ಅವರ ನ್ಯಾಯಾಂಗ ಬಂಧನವನ್ನು ಒಂದು ವಾರದ ಕಾಲ ವಿಸ್ತರಿಸಿದೆ. ತೇಲ್ತುಂಬ್ಡೆ, ನವ್ಲಾಖಾರನ್ನು ನ್ಯಾಯಾಂಗ ಬಂಧನಕ್ಕೆ ಗುರಿಯಾಗಲು ನ್ಯಾಯಾಲಯದ ದ್ವಂದ್ವ ನಿಲುವು ಕಾರಣವಾಗಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಎಲ್ಲರ ಜೀವಗಳಿಗೂ ಸಮಾನ ಬೆಲೆಯಿದೆ ಎಂದು ಗೌರವಿಸಿ ಇವರಿಬ್ಬರನ್ನು ಕೊರೋನ ವೈರಾಣುವಿನ ಭೀಕರ ದಾಳಿಯ ಸಂದರ್ಭದಲ್ಲಿ ನಿರೀಕ್ಷಣಾ ಜಾಮೀನು ನೀಡಿ ಮನೆಗೆ ಕಳುಹಿಸಬಹುದಿತ್ತು ಅಥವಾ ಗೃಹಬಂಧನದಂತಹ ಸುರಕ್ಷಿತ ಕ್ರಮವನ್ನು ಅನುಸರಿಸಬಹುದಿತ್ತು.

ಒಟ್ಟಾರೆ ಪ್ರಭುತ್ವ ಹಾಗೂ ನ್ಯಾಯಾಂಗ ವ್ಯವಸ್ಥೆಗಳಲ್ಲಿ ಮನುಧರ್ಮಶಾಸ್ತ್ರವೇ ನ್ಯಾಯ ವಿತರಣೆಯ ಪ್ರಮುಖ ಮಾನದಂಡವಾಗಿರುವುದು ಮೇಲ್ಕಂಡ ಅಂಶಗಳಿಂದ ದೃಢಪಡುತ್ತದೆ. ಜನವಿರೋಧಿ ಹಾಗೂ ದಮನಕಾರಿ ಪ್ರಭುತ್ವದ ಧೋರಣೆಗಳು ಮತ್ತು ನಡವಳಿಕೆಗಳ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುವವರನ್ನು ನಗರ ನಕ್ಸಲರು ಎಂದು ಪರಿಗಣಿಸಿ ಇಂತಹ ಸೂಕ್ಷ್ಮ ದಮನಕಾರಿ ತಂತ್ರವನ್ನು ಪ್ರಭುತ್ವ ಹೆಣೆದಿದೆ. ನನ್ನ ಬಂಧನ ಇಂತಹ ಕಾರ್ಯತಂತ್ರದ ಒಂದು ಭಾಗವಾಗಿದೆ ಎಂದು ತೇಲ್ತುಂಬ್ಡೆ ಅತ್ಯಂತ ನೋವಿನಿಂದ ಪ್ರತಿಕ್ರಿಯಿಸಿದ್ದಾರೆ. ತ್ವರಿತ ಹಾಗೂ ನ್ಯಾಯೋಚಿತ ವಿಚಾರಣೆಯಿಂದ ಮಾತ್ರ ನಾನು ಹಾಗೂ ನನ್ನ ಸಹ ಹೋರಾಟಗಾರರು ನ್ಯಾಯ ಪಡೆಯಲು ಸಾಧ್ಯ ಎಂಬ ಆಶಾಭಾವವನ್ನು ನವ್ಲಾಖಾ ವ್ಯಕ್ತಪಡಿಸಿದ್ದಾರೆ.

ಕೊರೋನ ವೈರಾಣುವಿನ ದಾಳಿಯ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲೇ ಸುರಕ್ಷಿತವಾಗಿರಬೇಕು ಎಂದು ಪ್ರತಿಪಾದಿಸುವವರು ತೇಲ್ತುಂಬ್ಡೆ ಮತ್ತು ನವ್ಲಾಖಾ ಇಂದು ಜೈಲಿನಲ್ಲಿರಬೇಕೆಂದು ಬಯಸುವುದು ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಪ್ರಭುತ್ವ ವಿರೋಧಿ ಹೋರಾಟಗಾರರ ವಿರುದ್ಧ ಕಾಲ್ಪನಿಕ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿ ಅವರನ್ನು ದಮನಗೊಳಿಸಲು ಪ್ರಭುತ್ವ ಮತ್ತು ನ್ಯಾಯಾಂಗ ಮುಂದಾಗಿರುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಕಾಲವೇ ಸೂಕ್ತ ಉತ್ತರ ನೀಡುತ್ತದೆ. ಕೊರೋನ ವೈರಾಣುವಿನ ಮುಂದೆ ದೇವರ ಆಟ ನಡೆಯಲಿಲ್ಲ. ಪ್ರಕೃತಿಯ ಮುಂದೆ ಪ್ರಭುತ್ವದ ಆಟವೂ ನಡೆಯುವುದಿಲ್ಲ. ಭಾರತವನ್ನು ಉಳಿಸುವುದು ಒಂದೇ ಶಕ್ತಿ, ಅದೇ ನಮ್ಮ ಸಂವಿಧಾನ. ಭಾರತವನ್ನು ಉದ್ಧರಿಸುವುದು ಒಂದೇ ಮಾದರಿ, ಅದೇ ಅಂಬೇಡ್ಕರ್‌ರ ಅಂತ್ಯೋದಯ ಅಭಿವೃದ್ಧಿ ಮಾದರಿ. ಮಹಾತ್ಮರು ಮುನ್ನಡೆಸಿದ ಪರಿವರ್ತನಾ ಯಾತ್ರೆಯನ್ನು ಪ್ರಜ್ಞಾವಂತ ಹಾಗೂ ಸಂವಿಧಾನ ನಿಷ್ಠ ಪ್ರಗತಿಪರರು ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ, ಯಾವುದೇ ಬೆಲೆಯನ್ನು ತೆತ್ತಾದರೂ ಮುನ್ನಡೆಸುವುದು ಇಂದಿನ ಬಹುದೊಡ್ಡ ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಹೊಣೆಗಾರಿಕೆಯಾಗಿದೆ.

Writer - ಡಾ.ಬಿ.ಪಿ.ಮಹೇಶ ಚಂದ್ರ ಗುರು

contributor

Editor - ಡಾ.ಬಿ.ಪಿ.ಮಹೇಶ ಚಂದ್ರ ಗುರು

contributor

Similar News