ನಿಮ್ಮ ಸಮಸ್ಯೆಯನ್ನು ಶೀಘ್ರ ಬಗೆಹರಿಸುತ್ತೇನೆ: ಖಾಸಗಿ ಕಂಪೆನಿ ನೌಕರರಿಗೆ ಕುಮಾರಸ್ವಾಮಿ ಅಭಯ
ಬೆಂಗಳೂರು, ಎ. 27: ನಿಮ್ಮ ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಬಗೆಹರಿಸಿಕೊಡುತ್ತೇನೆ, ಯಾವುದೇ ಕಾರಣಕ್ಕೂ ಧೈರ್ಯಕೆಡಬೇಡಿ, ನಿಮ್ಮೊಂದಿಗೆ ನಾನಿದ್ದೇನೆ, ನಿಮ್ಮ ಕೆಲಸಗಳನ್ನು ಪುನಃಕೊಡಿಸಲು ಪ್ರಯತ್ನ ನಡೆಸುತ್ತೇನೆ' ಎಂದು ನೌಕರಿ ಕಳೆದುಕೊಂಡಿರುವ ಖಾಸಗಿ ಕಂಪೆನಿಯ ನೌಕರರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅಭಯ ನೀಡಿದ್ದಾರೆ.
ಸೋಮವಾರ ನೌಕರರೊಂದಿಗ ವಿಡಿಯೋ ಸಂವಾದ ನಡೆಸಿದ ಅವರು, ಬೆಂಗಳೂರಿನ ಜೆಪಿ ನಗರದಲ್ಲಿರುವ ರುಪೀಕ್ ಫಿನ್‍ಟೆಕ್ ಪ್ರೈ.ಲಿ. ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 600 ಮಂದಿ ಗುತ್ತಿಗೆ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ವಜಾ ಮಾಡಿದೆ. ಕೊರೋನ ವೈರಸ್ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಯಾರೊಬ್ಬರನ್ನು ಕೆಲಸದಿಂದ ತೆಗೆಯಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರ್ದೇಶನ ನೀಡಿವೆ. ಆದರೂ, ನೌಕರರನ್ನು ವಜಾ ಮಾಡಲಾಗಿದೆ.
ಉದ್ಯೋಗ ಕಳೆದುಕೊಂಡ ನೌಕರರು ಸ್ಥಳೀಯ ಶಾಸಕರು ಹಾಗೂ ಉಪ ಕಾರ್ಮಿಕ ಆಯುಕ್ತರಿಗೆ ಪತ್ರ ಬರೆದು ಗಮನಕ್ಕೆ ತಂದರೂ ಕಂಪೆನಿ ತನ್ನ ನಿರ್ಧಾರವನ್ನು ಬದಲಾಯಿಸಿಲ್ಲ. ಬದಲಾಗಿ ಎರಡು ತಿಂಗಳ ವೇತನ ನೀಡುವುದಾಗಿ ಹೇಳಿತ್ತು. ಇದರಿಂದ ಆತಂಕಗೊಂಡ ನೌಕರರು ನನ್ನನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆಂದು ತಿಳಿಸಿದರು.
ಕಂಪೆನಿ ಎರಡು ತಿಂಗಳ ವೇತನವನ್ನು ನೀಡಿ ನೌಕರರನ್ನು ಕೆಲಸದಿಂದ ವಜಾ ಮಾಡಿದರೆ ಮತ್ತೆ ಅವರು ಹೊಸ ಕೆಲಸ ಹುಡುಕಲು ಸಾಧ್ಯವಿಲ. ಹೀಗಾಗಿ ಸಂಕಷ್ಟದ ಸಂದರ್ಭದಲ್ಲಿ ಬೇರೆ ಕಡೆ ಕೆಲಸ ಸಿಗುವುದು ಕಷ್ಟ. ಅದೇ ಕಂಪೆನಿಯಲ್ಲಿ ಕೆಲಸ ಕೊಡಿಸುವ ಸಂಬಂಧ ಸಮಾಲೋಚನೆ ನಡೆಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.