ಬೆಂಗಳೂರು: ಕೊರೋನ ಸೋಂಕಿನಿಂದ ವೃದ್ಧ ಸಾವು ಸುದ್ದಿ ಸುಳ್ಳು
Update: 2020-04-28 00:23 IST
ಬೆಂಗಳೂರು, ಎ.27: ವೃದ್ಧರೊಬ್ಬರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಎನ್ನುವ ವಂದತಿ ಸುಳ್ಳು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಇಲ್ಲಿನ ವಿಜಯನಗರದಲ್ಲಿನ ನಿರಾಶ್ರಿತರ ಕೇಂದ್ರದಲ್ಲಿದ್ದ ಶ್ರೀಕಂಠ(68) ಅವರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವದಂತಿ ಹಬ್ಬಿಸಲಾಗಿತ್ತು. ಆದರೆ, ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಶ್ರೀಕಂಠ ಅವರು ಸಾವನ್ನಪ್ಪಿರುವುದು ತಿಳಿದುಬಂದಿದೆ. ಆದರೆ ಅವರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದ್ದು, ಕೊರೋನ ಸೋಂಕು ತಗುಲಿ ಸಾವನ್ನಪ್ಪಿರುವುದಾಗಿ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವ ವಿಚಾರ ಬಯಲಿಗೆ ಬಂದಿದೆ.
ಮೃತ ಶ್ರೀಕಂಠ ಅವರು ಸುಬ್ರಮಣ್ಯನಗರ ನಿವಾಸಿ ಆಗಿದ್ದು, ಘಟನೆ ಕುರಿತು ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ರವಾನೆ ಮಾಡಿ, ಸ್ಥಳಕ್ಕೆ ಬಂದು ಮೃತ ದೇಹವನ್ನು ಕೊಂಡೊಯ್ಯಲು ಸೂಚಿಸಿದ್ದಾರೆ.