ಅಡಿಕೆ ಕದ್ದವ ಪುಡಿಗಳ್ಳನಾದರೆ ಬ್ಯಾಂಕ್ ದೋಚಿದವ.....?

Update: 2020-04-30 06:52 GMT

‘ಅಡಿಕೆ ಕದ್ದವ ಕಳ್ಳ

ಭೂಮಿ ಕದ್ದವ ಅರಸ

ನ್ಯಾಯ ಪಂಡಿತರಿಗೇಕೆ

ಕಾಣದಾಗಿದೆ ಈ ವಿಪರ್ಯಾಸ?’

ಚುವಾಂಗ್ ತ್ಸೆ ಶತಮಾನಗಳ ಹಿಂದೆ ಕೇಳಿದ ಈ ಪ್ರಶ್ನೆ ಇಂದಿಗೂ ಉತ್ತರವಿಲ್ಲದೆ ಧೂಳು ತಿನ್ನುತ್ತಿದೆ. ಭಾರತದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿ ಕೂತಿರುವ ಹೊತ್ತಿನಲ್ಲೇ ಕೊರೋನ ವೈರಸ್ ಅದರ ಮೇಲೆ ದಾಳಿ ನಡೆಸಿದ ಕಾರಣ ವೆಂಟಿಲೇಟರ್‌ನಲ್ಲಿ ಇಡಲಾಗಿದೆ. ಆದರೆ ಭಾರತದ ಆರ್ಥಿಕತೆಯ ಇಂದಿನ ಸ್ಥಿತಿಗೆ ಕೊರೋನ ಒಂದು ನೆಪ ಮಾತ್ರ. ಈ ವೈರಸ್ ಇದಕ್ಕೆ ಅಂಟಿಕೊಳ್ಳುವುದಕ್ಕೆ ಮೊದಲೇ ಅದು ಸಂಪೂರ್ಣ ರೋಗಗ್ರಸ್ಥವಾಗಿ ಬಿಟ್ಟಿತ್ತು ಮತ್ತು ಇದೀಗ ಕೊರೋನವನ್ನು ಮುಂದಿಟ್ಟುಕೊಂಡು ತನ್ನನ್ನು ತಾನು ಸಮರ್ಥಿಸಿಕೊಳ್ಳುವುದಕ್ಕೆ ಸರಕಾರ ಮುಂದಾಗುತ್ತಿದೆ. ಈ ದೇಶದ ಬಡವರಿಗೆ ಸೌಲಭ್ಯಗಳನ್ನು ನೀಡಿದರೆ ಆರ್ಥಿಕತೆ ಸರ್ವನಾಶವಾಗುತ್ತದೆ ಎನ್ನುವ ಬಲವಾದ ನಂಬಿಕೆಯ ಜೊತೆ ಜೊತೆಗೇ ಬಜೆಟ್‌ಗಳನ್ನು ಮಂಡಿಸುತ್ತಾ ಬಂದ ಸರಕಾರ, ಕಾರ್ಪೊರೇಟ್ ವಲಯದ ಮೂಲಕ ದೇಶದ ಭವಿಷ್ಯ ಕಟ್ಟಲು ಮುಂದಾಯಿತು. ಬೃಹತ್ ಉದ್ಯಮಿಗಳಿಗೆ ಸರಕಾರ ನೀಡುತ್ತಾ ಬಂದ ಕೊಡುಗೆಗಳು ಮಾಧ್ಯಮಗಳ ಮುಖಪುಟದಲ್ಲಿ ‘ಅಭಿವೃದ್ಧಿಗೆ ಪೂರಕ ಬಜೆಟ್’ ಎಂದು ಬಣ್ಣಿಸಲ್ಪಟ್ಟಿತು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಈ ಬೃಹತ್ ಉದ್ಯಮಿಗಳು ದೇಶದ ಆರ್ಥಿಕತೆಗೆ ಕೊಟ್ಟದ್ದೇನು ಎನ್ನುವುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಹಿರಂಗಪಡಿಸಿದೆ.

ಭಾರತ ದೇಶದ ಆರ್ಥಿಕತೆಯನ್ನು ನಾಶ ಮಾಡಿದ ವೈರಸ್‌ಗಳು ಯಾರು ಎನ್ನುವುದನ್ನು ಇದು ಘೋಷಿಸಿದೆ. ಈ ವೈರಸ್‌ಗಳಿಂದ ಆರ್ಥಿಕತೆಯನ್ನು ರಕ್ಷಿಸಲು ಸರಕಾರ, ಅದ್ಯಾವ ಮದ್ದು ಕಂಡು ಹುಡುಕಲಿದೆ ಎನ್ನುವುದರ ವಿವರವನ್ನು ಈವರೆಗೆ ವಿತ್ತ ಸಚಿವರು ಬಹಿರಂಗ ಪಡಿಸಿಲ್ಲ. ಬದಲಿಗೆ, ಕೊರೋನಎನ್ನುವ ಗುಮ್ಮನನ್ನು ಮುಂದಿಟ್ಟುಕೊಂಡು ಈ ವೈರಸ್‌ಗಳನ್ನು ರಕ್ಷಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ. ಮಾಹಿತಿ ಹಕ್ಕು ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಸಲ್ಲಿಸಿದ ಅರ್ಜಿಗೆ ಉತ್ತರವಾಗಿ ಆರ್‌ಬಿಐ ಕೇಂದ್ರ ಸಾರ್ವಜನಿಕ ಸಂಪರ್ಕಾಧಿಕಾರಿ ಅಭಯಕುಮಾರ್ ಬಿಡುಗಡೆ ಮಾಡಿರುವ ಮಾಹಿತಿಗಳು ‘‘ಪ್ರದಾನಿ ಮೋದಿ ಭ್ರಷ್ಟರನ್ನೆಲ್ಲ ಹಿಡಿದು ಹೆಡೆಮುರಿ ಕಟ್ಟುತ್ತಾರೆ’’ ಎಂದು ಕಾಯುತ್ತಿದ್ದ ತಳಸ್ತರದ ಜನರ ಬೆನ್ನಿಗೆ ಆಳವಾಗಿ ಇರಿದಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ಮಾಹಿತಿಯ ಪ್ರಕಾರ 2019ರ ಸೆಪ್ಟಂಬರ್ 30ರವರೆಗಿನ ಅವಧಿಯಲ್ಲಿ 68,000 ಕೋಟಿ ರೂಪಾಯಿ ಮೊತ್ತದ ಸಾಲವನ್ನು ಲೆಕ್ಕ ಪತ್ರದಿಂದ ತೊಡೆದು ಹಾಕಲಾಗಿದೆ. ಪರೋಕ್ಷವಾಗಿ ಈ ತೊಡೆದು ಹಾಕುವುದನ್ನು ವಜಾಗೊಳಿಸಲಾಗುವುದು ಎಂದೇ ತಿಳಿದುಕೊಳ್ಳಬೇಕು. ಯಾಕೆಂದರೆ, ಮುಂದಿನ ದಿನಗಳಲ್ಲಿ ಈ ಸಾಲದ ಮೊತ್ತವನ್ನು ಯಾವುದೇ ಕಾರಣಕ್ಕೂ ಲೆಕ್ಕಪತ್ರಗಳಲ್ಲಿ, ಲಾಭ-ನಷ್ಟಗಳಲ್ಲಿ ತೋರಿಸಲಾಗುವುದಿಲ್ಲ. ಇದನ್ನು ವಸೂಲಿ ಮಾಡುವ ಜವಾಬ್ದಾರಿಯಿಂದ ಬ್ಯಾಂಕ್‌ಗಳು ಸಂಪೂರ್ಣವಾಗಿ ಕೈತೊಳೆದುಕೊಂಡಿವೆ. ವಿಪರ್ಯಾಸವೆಂದರೆ, ಗುಜರಾತ್‌ನ ತಲೆಮರೆಸಿಕೊಂಡಿರುವ ವಜ್ರೋದ್ಯಮಿ ಮೆಹುಲ್ ಜೋಕ್ಸಿಯ ಗೀತಾಂಜಲಿ ಜೆಮ್ಸ್ ಸಂಸ್ಥೆ ಅಗ್ರ 50 ಸಂಸ್ಥೆಗಳಲ್ಲಿ ಮೊದಲ ಸ್ಥಾನದಲ್ಲಿದೆ. ಈತ ಬ್ಯಾಂಕ್‌ಗಳಿಗೆ ಬಾಕಿಯಿಟ್ಟಿರುವುದು 5,492 ಕೋಟಿ ರೂಪಾಯಿ. ದ್ವಿತೀಯ ಸ್ಥಾನದಲ್ಲಿ ಆರ್‌ಇಐ ಆಗ್ರೋ ಲಿ. ಸಂಸ್ಥೆಯಿದೆ. ಇದು ಬಾಕಿಯಿಟ್ಟಿರುವ ಒಟ್ಟು ಮೊತ್ತ 4,314 ಕೋಟಿ ರೂಪಾಯಿ.

ತಲೆಮರೆಸಿಕೊಂಡಿರುವ ಇನ್ನೋರ್ವ ಪ್ರಮುಖ ಉದ್ಯಮಿ ಜತಿನ್ ಮೆಹ್ತಾ ಬ್ಯಾಂಕ್‌ಗೆ ಬಾಕಿಯಿಟ್ಟ ಹಣ 4,076 ಕೋಟಿ ರೂಪಾಯಿ. ಈತ ತೃತೀಯ ಸ್ಥಾನವನ್ನು ಅಲಂಕರಿಸಿ ‘ಗುಜರಾತ್ ಮಾದರಿ’ಗೆ ಗೌರವ ತಂದುಕೊಟ್ಟಿದ್ದಾನೆ. ಇದೇ ಸಂದರ್ಭದಲ್ಲಿ ಬಾಬಾ ರಾಮ್‌ದೇವ್ ಕೊಂಡುಕೊಂಡಿರುವ ರುಚಿ ಸೋಯಾ ಸಂಸ್ಥೆ 2,212 ಕೋಟಿ ರೂಪಾಯಿಗಳನ್ನು ಬ್ಯಾಂಕ್‌ಗೆ ಬಾಕಿಯಿರಿಸಿದ್ದು, ಇದೀಗ ಅದೂ ಲೆಕ್ಕ ಪತ್ರದಿಂದ ಹೊರ ಬಿದ್ದಿದೆ. ದಿವಾಳಿಯೆದ್ದಿದ್ದ ಈ ಸಂಸ್ಥೆಯನ್ನು ಕೊಂಡುಕೊಂಡ ನಾಟಕವಾಡಿರುವ ರಾಮ್‌ದೇವ್, ಇಂದು ಇದೇ ಸಂಸ್ಥೆಯ ಮೂಲಕ ಪತಂಜಲಿ ಸಂಸ್ಥೆಯ ಯಾವುದೇ ಉತ್ಪನ್ನಕ್ಕಿಂತ ಹೆಚ್ಚು ಲಾಭದ ನಿರೀಕ್ಷೆಯಲ್ಲಿದ್ದಾರೆ. ಮೊದಲ 50 ಸುಸ್ತಿದಾರರ ಪಟ್ಟಿಯಲ್ಲಿ ಮೊದಲಿನ ಆರು ಸ್ಥಾನಗಳನ್ನು ವಜ್ರೋದ್ಯಮ ಸಂಸ್ಥೆಗಳೇ ಪಡೆದಿರುವುದು ವಿಶೇಷವಾಗಿದೆ. ವಜ್ರೋದ್ಯಮ ಎಂದರೆ ಗುಜರಾತ್ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

  ವಿಪರ್ಯಾಸವೆಂದರೆ ತನ್ನ ಸರಕಾರದ ವೈಫಲ್ಯವನ್ನು ಯುಪಿಎ ಸರಕಾರದ ವೈಫಲ್ಯದ ಜೊತೆಗಿಟ್ಟು ಸಮರ್ಥಿಸಿಕೊಳ್ಳಲು ವಿತ್ತ ಸಚಿವೆ ಸೀತಾರಾಮನ್ ಹೊರಟಿರುವುದು.‘2009-10ರಿಂದ 2013-14ರವರೆಗೆ ಯುಪಿಎ ಆಡಳಿತದ ಅವಧಿಯಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳು 1,45,226 ಕೋ.ರೂ.ಗಳ ಸಾಲಗಳನ್ನು ತಮ್ಮ ಲೆಕ್ಕದ ಪುಸ್ತಕಗಳಿಂದ ತೊಡೆದುಹಾಕಿದ್ದವು. ಅನುತ್ಪಾದಿತ ಆಸ್ತಿಗಳಿಗೆ ಸಂಬಂಧಿಸಿಂತೆ ಈ ಕ್ರಮವು ಆರ್‌ಬಿಐ ನಿಯಮಗಳಿಗೆ ಅನುಗುಣವಾಗಿದೆ ಮತ್ತು ಸಾಲಗಳನ್ನು ಲೆಕ್ಕದ ಪುಸ್ತಕಗಳಿಂದ ತೊಡೆದುಹಾಕಿದ್ದರೂ ಅವುಗಳ ಮರುವಸೂಲಿಗೆ ಬ್ಯಾಂಕುಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತವೆ, ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಇದರ ಜೊತೆ ಜೊತೆಗೇ ಇತ್ತೀಚೆಗೆ ಟ್ವೀಟೊಂದರಲ್ಲಿ ವಿತ್ತ ಸಚಿವೆ, ‘ಮೋದಿ-ಚೋಕ್ಸಿ-ಮಲ್ಯ ಅವರಿಂದ 2,780.50 ಕೋ.ರೂ.ಗಳನ್ನು ಮರುವಸೂಲಿ ಮಾಡಲಾಗಿದೆ ’ ಎಂದೂ ಹೇಳಿದ್ದರು. ಆದರೆ ಇವೆಲ್ಲದರ ಅಸಲಿಯತ್ತನ್ನು ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿಅಂಶಗಳು ಬಹಿರಂಗಗೊಳಿಸಿದೆ.

‘ಸಾಲಗಳನ್ನು ಲೆಕ್ಕ ಪುಸ್ತಕಗಳಿಂದ ತೊಡೆದು ಹಾಕಿದ್ದರೂ ಅವುಗಳ ಮರು ವಸೂಲಿಗೆ ಬ್ಯಾಂಕುಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತವೆ’ ಎನ್ನುವುದೇ ಹಾಸ್ಯಾಸ್ಪದ ಹೇಳಿಕೆಯಾಗಿದೆ. ವಸೂಲಿಯಾಗುವ ಸಾಲಗಳ ಹಿಂದೆ ಬೀಳುವಾಗಲೇ ಅಧಿಕಾರಿಗಳು ಮೀನಮೇಷ ಎಣಿಸುತ್ತಾರೆ. ಹೀಗಿರುವಾಗ, ವಸೂಲಿಯಾಗದ ಸಾಲಗಳೆಂದು ಹೊರಗಿಟ್ಟವುಗಳನ್ನು ಬ್ಯಾಂಕ್ ಅಧಿಕಾರಿಗಳು ಬೆನ್ನು ಹತ್ತುತ್ತಾರೆ ಎನ್ನುವುದು ನಂಬಲರ್ಹವೆ? ಲಾಭ ನಷ್ಟಗಳಿಂದ ಅವುಗಳನ್ನು ಹೊರಗಿಡುವ ಮುಖ್ಯ ಉದ್ದೇಶವೇ ಅವುಗಳು ವಸೂಲಿಯಾಗುವುದಿಲ್ಲ ಎನ್ನುವುದು ಮನವರಿಕೆಯಾಗಿರುವುದರಿಂದ. ಎಲ್ಲಕ್ಕಿಂತ ಮುಖ್ಯವಾಗಿ, ಆರ್‌ಬಿಐ ಸಾಲಗಳನ್ನು ವಜಾಗೊಳಿಸುವ ಸಂದರ್ಭದಲ್ಲಿ ಚೋಕ್ಸಿ, ಮಲ್ಯ ಮೊದಲಾದವರು ಅದಾಗಲೇ ತಲೆಮರೆಸಿಕೊಂಡಿದ್ದರು. ಇದು ಪರೋಕ್ಷವಾಗಿ, ಆ ಉದ್ಯಮಿಗಳನ್ನು ರಕ್ಷಿಸುವ ಭಾಗವಾಗಿದೆ. ಈ ಪರೋಕ್ಷ ಸಾಲ ಮನ್ನಾ ಸೌಲಭ್ಯಗಳನ್ನು ತನ್ನದಾಗಿಸಿಕೊಂಡಿರುವ ಬಹುತೇಕ ಉದ್ಯಮಿಗಳೂ ಸರಕಾರದೊಂದಿಗೆ ಆತ್ಮೀಯ ಸಂಬಂಧಗಳನ್ನು ಹೊಂದಿದವರು ಎನ್ನುವುದು ಇನ್ನೊಂದು ಪ್ರಮುಖ ಅಂಶವಾಗಿದೆ. ಬರಗಾಲ, ನೆರೆ ಇತ್ಯಾದಿ ಕಾರಣಗಳಿಂದ ತತ್ತರಿಸಿ ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡಲಾಗದ ರೈತರ ಸಾಲಗಳನ್ನು ಮನ್ನಾ ಮಾಡಿ, ಅವರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡುವುದು ದೇಶದ ಅಭಿವೃದ್ಧಿ ಚಕ್ರ ಚಲಿಸುವುದಕ್ಕೆ ಪೂರಕವಾದ ನಿರ್ಧಾರಗಳಾಗಿವೆ.

ರಾಜ್ಯದ ರೈತರ ಸಾಲಮನ್ನಾ ಬೇಡಿಕೆ ಇಂದು ನಿನ್ನೆಯದಲ್ಲ. ಆ ಬೇಡಿಕೆಯನ್ನು ಕೇಂದ್ರ ಸರಕಾರ ಸಾರಾಸಗಟಾಗಿ ನಿರಾಕರಿಸುತ್ತಾ ಬಂದಿದೆ ಮಾತ್ರವಲ್ಲ, ಅದು ಅಭಿವೃದ್ಧಿಗೆ ವಿರುದ್ಧವಾದ ಕ್ರಮ ಎಂಬ ಹೇಳಿಕೆ ನೀಡಿದೆ. ಈ ದೇಶದಲ್ಲಿ ರೈತರು ಸಾಲ ಮಾಡಿ ಬ್ಯಾಂಕ್‌ಗಳಿಗೆ ವಂಚಿಸಿ ವಿದೇಶಕ್ಕೆ ತೆರಳಿದ ಒಂದೇ ಒಂದು ಉದಾಹರಣೆಗಳಿಲ್ಲ. ಹೆಚ್ಚೆಂದರೆ, ಅವರು ತಮ್ಮ ಮಾನ ಮರ್ಯಾದೆಗಳಿಗೆ ಅಂಜಿ, ಬ್ಯಾಂಕ್‌ಗಳ ಜಪ್ತಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಭಾರತದ ಆಹಾರ ಭದ್ರತೆಯ ದೃಷ್ಟಿಯಿಂದ ಕೃಷಿಕರು, ರೈತರು ಆರ್ಥಿಕವಾಗಿ ದಿವಾಳಿಯಾಗದಂತೆ, ಸಾಲದ ಶೂಲಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ. ಆದರೆ ಕೃಷಿಕರನ್ನು, ರೈತರನ್ನು ಕಳ್ಳರಂತೆ ನೋಡುತ್ತಾ ಬಂದಿರುವ ಸರಕಾರ, ಬೃಹತ್ ಉದ್ಯಮಿಗಳಿಗೆ ಈ ದೇಶದ ಜನರ ತೆರಿಗೆಯ ಹಣವನ್ನು ಮೊಗೆದು ಕೊಟ್ಟು ಆರ್ಥಿಕತೆಯ ಪತನಕ್ಕೆ ಕಾರಣವಾಗಿದೆ.

ಈ ಉದ್ಯಮಿಗಳಿಂದ ಆರ್ಥಿಕತೆಗಾದ ಮೋಸವನ್ನು ಮತ್ತೆ ದೇಶದ ಜನರೇ ತುಂಬಬೇಕಾಗಿದೆ. ಸರಕಾರ ಇನ್ನಾದರೂ, ಕಾರ್ಪೊರೇಟ್ ವಂಚಕರ ಮೂಗಿನ ನೇರಕ್ಕೆ ದೇಶದ ಆರ್ಥಿಕ ನೀತಿ ರೂಪಿಸುವುದು ಕೈ ಬಿಟ್ಟು, ತಳಸ್ತರದಿಂದ ಆರ್ಥಿಕತೆಯನ್ನು ಗಟ್ಟಿ ಮಾಡುವ ಕಡೆಗೆ ಮನ ಮಾಡಬೇಕಾಗಿದೆ. ಕೊರೋನ ‘ಲಾಕ್‌ಡೌನ್’ ಕೃಷಿಕರು, ಸಣ್ಣ ಉದ್ದಿಮೆದಾರರ ಅಳಿದುಳಿದ ಭರವಸೆಗಳನ್ನು ಇಲ್ಲವಾಗಿಸಿದೆ. ಉದ್ಯಮಿಗಳ ಕೋಟಿ ಕೋಟಿ ಹಣವನ್ನು ಮನ್ನಾ ಮಾಡಲು ಸರಕಾರಕ್ಕೆ ಸಾಧ್ಯವಾಗುವುದಾದರೆ, ಕೃಷಿಕರು, ಸಣ್ಣ ಉದ್ದಿಮೆದಾರರನ್ನು ಉಳಿಸಿ ಬೆಳೆಸುವುದಕ್ಕೆ ಸರಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ? ಬ್ಯಾಂಕ್‌ಗಳು ಮುಳುಗಿದರೆ ಬೃಹತ್ ಉದ್ಯಮಿಗಳು ವಿದೇಶಗಳಲ್ಲಿ ತಲೆಮರೆಸಿ ಬದುಕಬಲ್ಲರು.

ಅದಕ್ಕೆ ಉದಾಹರಣೆಗಳು ಹತ್ತು ಹಲವು. ಆದರೆ ಬ್ಯಾಂಕುಗಳಿಗೆ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡ ಒಬ್ಬನೇ ಒಬ್ಬ ಕೃಷಿಕ ನಮ್ಮ ಮುಂದಿಲ್ಲ. ಈ ದೇಶದ ಬ್ಯಾಂಕ್‌ಗಳು ಯಾವಾಗ ರೈತರು, ಸಣ್ಣ ಉದ್ದಿಮೆದಾರರನ್ನು ಮರೆತು, ಕಾರ್ಪೊರೇಟ್‌ಗಳ ಬಾಲ ಹಿಡಿಯಿತೋ ಅಲ್ಲಿಂದಲೇ ದೇಶದ ಬ್ಯಾಂಕ್‌ಗಳ ಪತನ ಆರಂಭವಾಯಿತು. ಈ ಬೃಹತ್ ಉದ್ಯಮಿಗಳಿಂದಾಗಿ ಮುಳುಗಲಿರುವ ಬ್ಯಾಂಕ್‌ಗಳನ್ನು ಉದ್ಧರಿಸುವುದಕ್ಕಾಗಿಯೇ ‘ನೋಟು ನಿಷೇಧ’ವನ್ನು ಮಾಡಲಾಯಿತು. ಆರ್ಥಿಕತೆ ಇನ್ನಷ್ಟು ಹಳ್ಳ ಹಿಡಿಯುವುದಕ್ಕೆ ಇದೂ ಒಂದು ಕಾರಣವಾಯಿತು. ಪ್ರತಿ ಉದ್ಯಮಿಗಳ ಹಿಂದೆಯೂ ಒಬ್ಬೊಬ್ಬ ಪ್ರಭಾವಿ ರಾಜಕಾರಣಿಯಿದ್ದಾನೆ ಎನ್ನುವ ಅಂಶವನ್ನು ನಾವು ಈ ಸಂದರ್ಭದಲ್ಲಿ ಮರೆಯಬಾರದು. ಆದುದರಿಂದಲೇ, ಉದ್ಯಮಿಗಳು ರಾಜಕಾರಣಿಗಳ ಜೊತೆಗೆ ಸೇರಿಕೊಂಡು ಬ್ಯಾಂಕ್‌ಗಳನ್ನು ಮುಳುಗಿಸಿದ್ದಾರೆ ಮತ್ತು ಮುಳುಗಿದ ಬ್ಯಾಂಕ್‌ಗಳನ್ನು ಮೇಲೆತ್ತಲು ಮತ್ತೆ ಜನರ ಹರಿದ ಕಿಸೆಯೊಳಗೆ ಸರಕಾರ ಇಣುಕಿ ನೋಡುತ್ತಿದೆ. ಸರಕಾರ ಹೊಡೆದಂತೆ ನಟಿಸಿದರೆ, ಉದ್ಯಮಿಗಳು ಅತ್ತಂತೆ ನಟಿಸುತ್ತಿದ್ದಾರೆ. ಜನರು ಮಾತ್ರ ಕೊರೋನ, ಲಾಕ್‌ಡೌನ್‌ನ ಕಗ್ಗತ್ತಲೆಯೊಳಗೆ ತಡವರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News