ಇದು ಶಿಕ್ಷಕರ ಹಿತ ಕಾಯುವ ಸಮಯ

Update: 2020-05-01 06:18 GMT

ಈಗಾಗಲೇ ಹಲವು ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಅವರಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಸಂಬಳವನ್ನು ಕಡಿತಗೊಳಿಸಲಾಗುವುದು ಎನ್ನುವ ಮಾಹಿತಿಯನ್ನು ರವಾನೆ ಮಾಡಿವೆ. ಸಮಾಜ ಸೇವೆಯ ಧ್ಯೇಯೋದ್ದೇಶದಿಂದ ಸ್ಥಾಪನೆ ಮಾಡುವ ಶಿಕ್ಷಣ ಸಂಸ್ಥೆಗಳು, ಸೇವೆಯ ಮನೋಭಾವವನ್ನು ಬದಿಗೊತ್ತಿ ಹಣ ಸಂಪಾದನೆಯೇ ಮುಖ್ಯ ಗುರಿಯನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಸಮಾಜಕ್ಕೆ ಮಾರಕ ಮತ್ತು ಮನುಕುಲಕ್ಕೆ ಶಾಪ.ಕೊರೋನದಂತಹ ಕರಾಳ ಸಮಯದಲ್ಲಿ ಅರೆಕಾಲಿಕ ಶಿಕ್ಷಕರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಸಂಬಳದ ಗ್ಯಾರಂಟಿಯೂ ಇಲ್ಲದೆ ಅಭದ್ರತೆಯಲ್ಲಿ ಲಾಕ್‌ಡೌನ್ ಸಮಯವನ್ನು ಕಳೆಯಬೇಕಿದೆ. ಇವರೂ ಕೂಡ ಒಂದು ತರಹದ ಅಸಂಘಟಿತ ವಲಯದ ಕಾರ್ಮಿಕರೇ ಎನ್ನಬಹುದು. ಶಾಲಾ ಪ್ರವೇಶಾತಿ ಶುಲ್ಕ ಹೆಚ್ಚಿಸುವ ಕುರಿತು ಯೋಚಿಸುತ್ತಿರುವ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ತಮ್ಮ ಶಿಕ್ಷಕರ ಸಂಬಳದ ಕುರಿತೂ ಯೋಚಿಸುವ ಅವಶ್ಯಕತೆ ಇದೆ.

ಶಿಕ್ಷಕರೆಂದರೆ ದೇಶದ ಆಸ್ತಿ, ಮನುಕುಲವನ್ನು ಮುನ್ನೆಡೆಸುವ ಶಕ್ತಿ ಮತ್ತು ಸಮಾಜದ ಏಳಿಗೆಗೆ ಬೇಕಾಗಿರುವ ನಾಗರಿಕರನ್ನು ತಯಾರಿಸುವಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸುವವರು. ಹಾಗಾಗಿ ಶಿಕ್ಷಕರನ್ನು ದೇವರ ಸ್ವರೂಪಿ ಎಂದು ಗೌರವಿಸುವುದುಂಟು. ರಾಜ್ಯದ ಸಾವಿರಾರು ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ಲಕ್ಷಾಂತರ ಶಿಕ್ಷಕರು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕೊರೋನದ ಈ ಅಪಾಯಕಾರಿ ಸಂದರ್ಭದಲ್ಲಿಯೂ ತಮ್ಮ ಮನೆಗಳಿಂದಲೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಾಠಗಳನ್ನು ಮಾಡುತ್ತ, ಸೂಕ್ತ ನಿರ್ದೇಶನಗಳನ್ನು ನೀಡುತ್ತ ವಿದ್ಯಾಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.

ಜಾಗತೀಕರಣದ ಈ ಭರಾಟೆಯಲ್ಲಿ ಖಾಸಗಿ ವಿದ್ಯಾ ಸಂಸ್ಥೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು ಶಿಕ್ಷಕರನ್ನು ಯಾವ ಮಟ್ಟದಲ್ಲಿ ದುಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಜೊತೆಗೆ ಸರಕಾರಿ ಸಂಸ್ಥೆಗಳಲ್ಲಿಯೂ ಅರೆಕಾಲಿಕ ಶಿಕ್ಷಕರನ್ನು ನೇಮಿಸಿಕೊಳ್ಳುವುದು ಸಾಮಾನ್ಯವಾಗಿದೆ. ಫಿನ್‌ಲ್ಯಾಂಡ್ ಮತ್ತು ಜಪಾನ್‌ನಂತಹ ದೇಶಗಳಲ್ಲಿ ಶಿಕ್ಷಕರಿಗೆ ವಿಐಪಿ ಸ್ಥಾನ ನೀಡಿದ್ದು ಭಾರತದಂತಹ ಸುಸಂಸ್ಕೃತ ರಾಷ್ಟದಲ್ಲಿ ಶಿಕ್ಷಕರು ಸರಕಾರಗಳ ಮತ್ತು ಆಡಳಿತ ಮಂಡಳಿಗಳ ಕೈಗೊಂಬೆಗಳಾಗಿ, ಇಂದಿಗೂ ಜೀವನ ಸಾಗಿಸಲು ಹೆಣಗಾಡುತ್ತಾ ಕೆಲವೇ ಕೆಲವು ಸಾವಿರ ರೂ.ಗಳಿಗೆ ದುಡಿಯುವಂತಾಗಿದೆ. ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಲಕ್ಷಾಂತರ ರೂ.ಡೊನೇಶನ್ ತೆಗೆದುಕೊಳ್ಳುವ, ಪ್ರತಿ ತರಗತಿಯಲ್ಲಿ ನಿಗದಿತ ವಿದ್ಯಾರ್ಥಿಗಳ ಸಂಖ್ಯೆಗಿಂತ ಹೆಚ್ಚಿನ ದಾಖಲಾತಿಯೊಂದಿಗೆ ಸರಕಾರ ನಿಗದಿಪಡಿಸಿದ ಪ್ರವೇಶಾತಿ ಶುಲ್ಕದ ವಿವರಗಳ ಪಟ್ಟಿಯನ್ನು ಶಾಲೆಗಳಲ್ಲಿ ಪ್ರಕಟಿಸದೇ ತಮ್ಮಿಷ್ಟದಂತೆ ವಸೂಲಿ ಮಾಡುವ ಸಾಕಷ್ಟು ಶಿಕ್ಷಣ ಸಂಸ್ಥೆಗಳು ನಮ್ಮ ಕಣ್ಣೆದುರಿಗೆ ಇವೆ ಮತ್ತು ಅಂತಹ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಪರಿಸ್ಥಿತಿ ಸದ್ಯಕ್ಕಂತೂ ಅಧೋಗತಿ. ಏಕೆಂದರೆ, ಈಗಾಗಲೇ ಹಲವು ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಅವರಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಸಂಬಳವನ್ನು ಕಡಿತಗೊಳಿಸಲಾಗುವುದು ಎನ್ನುವ ಮಾಹಿತಿಯನ್ನು ರವಾನೆ ಮಾಡಿವೆ. ಸಮಾಜ ಸೇವೆಯ ಧ್ಯೇಯೋದ್ದೇಶದಿಂದ ಸ್ಥಾಪನೆ ಮಾಡುವ ಶಿಕ್ಷಣ ಸಂಸ್ಥೆಗಳು, ಸೇವೆಯ ಮನೋಭಾವವನ್ನು ಬದಿಗೊತ್ತಿ ಹಣ ಸಂಪಾದನೆಯೇ ಮುಖ್ಯ ಗುರಿಯನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಸಮಾಜಕ್ಕೆ ಮಾರಕ ಮತ್ತು ಮನುಕುಲಕ್ಕೆ ಶಾಪ.ಕೊರೋನದಂತಹ ಕರಾಳ ಸಮಯದಲ್ಲಿ ಅರೆಕಾಲಿಕ ಶಿಕ್ಷಕರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಸಂಬಳದ ಗ್ಯಾರಂಟಿಯೂ ಇಲ್ಲದೆ ಅಭದ್ರತೆಯಲ್ಲಿ ಲಾಕ್‌ಡೌನ್ ಸಮಯವನ್ನು ಕಳೆಯಬೇಕಿದೆ. ಇವರೂ ಕೂಡ ಒಂದು ತರಹದ ಅಸಂಘಟಿತ ವಲಯದ ಕಾರ್ಮಿಕರೇ ಎನ್ನಬಹುದು. ಶಾಲಾ ಪ್ರವೇಶಾತಿ ಶುಲ್ಕ ಹೆಚ್ಚಿಸುವ ಕುರಿತು ಯೋಚಿಸುತ್ತಿರುವ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ತಮ್ಮ ಶಿಕ್ಷಕರ ಸಂಬಳದ ಕುರಿತೂ ಯೋಚಿಸುವ ಅವಶ್ಯಕತೆ ಇದೆ. 1966ರ ಐ.ಎಲ್.ಒ. ಮತ್ತು ಯುನೆಸ್ಕೋದ ಶಿಫಾರಸಿನ ಮೇರೆಗೆ ಪ್ರಪಂಚದಾದ್ಯಂತ ಎಲ್ಲಾ ದೇಶಗಳ ಸರಕಾರಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರನ್ನು ಗೌರವಯುತವಾಗಿ ನಡೆಸಿಕೊಂಡು ಮೂಲಭೂತವಾದ ಅವಶ್ಯಕತೆಗಳಾದ ವಾರ್ಷಿಕ ಭಡ್ತಿ, ಆರೋಗ್ಯ ಸೇವೆ, ರಜೆಗಳು, ಪೆನ್ಷನ್, ಸಾಮಾಜಿಕ ಭದ್ರತೆ ಮತ್ತು ವೃತ್ತಿ ಬೆಳವಣಿಗೆಗೆ ಅವಕಾಶ ಹಾಗೂ ಕಾರ್ಯ ನಿರ್ವಹಿಸಲು ಉತ್ತಮ ವಾತಾವರಣದಂತಹ ಅಂಶಗಳನ್ನು ಒದಗಿಸುವುದು ಆದ್ಯ ಕರ್ತವ್ಯ.

ರಾಜ್ಯದಲ್ಲಿ ಮತ್ತು ದೇಶದಲ್ಲಿ ಸಾಕಷ್ಟು ಶಿಕ್ಷಕರ ಸಂಘಟನೆಗಳಿದ್ದರೂ ಯಾವ ಸಂಘಟನೆಯೂ ಇಲ್ಲಿಯವರೆಗೆ ಒಂದೂ ಹೇಳಿಕೆಯನ್ನು ನೀಡದಿರುವುದು ವಿಪರ್ಯಾಸವೇ ಸರಿ. ಸಿನೆಮಾ ರಂಗ, ಕಲೆ, ಸಾಹಿತ್ಯ ಪರಿಷತ್ತುಗಳು ಈ ಸಮಯದಲ್ಲಿ ಸಾಕಷ್ಟು ಸಹಾಯ ಹಸ್ತವನ್ನು ತಮ್ಮ ಉದ್ಯೋಗ ಬಾಂಧವರಿಗೆ ನೀಡುತ್ತಿವೆ. ಆದರೆ ಶಿಕ್ಷಕರಿಗೆ ಸಹಾಯ ಹಸ್ತ ಚಾಚುವ ಯಾವ ಸಂಘಟನೆಯು ಇಲ್ಲ ಹಾಗೂ ಯಾವ ಸಂಚಿತ ನಿಧಿಯೂ ಇಲ್ಲ. ಇನ್ನು ಮುಂದಾದರೂ ಇದರ ಕುರಿತು ಚಿಂತಿಸುವ ಮತ್ತು ಈ ತರಹದ ಕಠಿಣ ಪರಿಸ್ಥಿತಿಯಲ್ಲಿ ಅವಶ್ಯಕವಾಗಿರುವ ರಾಜ್ಯ ಮಟ್ಟದ ಸಂಚಿತ ನಿಧಿಯ ಅವಶ್ಯಕತೆಯ ಬಗ್ಗೆ ಯೋಚಿಸಬೇಕಿದೆ. ಎದ್ದು ಕಾಣುತ್ತಿದೆ. ವಿವಿಧ ಶಿಕ್ಷಕರ ಸಂಘಟನೆಗಳು ಕೂಡ ಸಹಾಯದ ನಿರಿಕ್ಷೆಯಲ್ಲಿರುವ ಶಿಕ್ಷಕರಿಗೆ ಸಹಾಯವನ್ನು ಮಾಡುವ ಯೋಜನೆಯನ್ನು ಹಾಕಿಕೊಳ್ಳಬೇಕಾಗಿದೆ. ಶಿಕ್ಷಕರೆಲ್ಲರೂ ಒಂದೇ ಎನ್ನುವ ಭಾವನೆಯಿಂದ ಸಮಾಜದ ಧ್ವನಿಯಾಗುವುದರೊಂದಿಗೆ ತಮ್ಮ ವೃತ್ತಿಯ ಧ್ವನಿಯಾಗಿಯೂ ಮನುಕುಲದ ಬೆಳವಣಿಗೆಗೆ ದುಡಿಯಬೇಕಿದೆ.

ಈ ಸಮಯದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸುಗ್ರೀವಾಜ್ಞೆಯನ್ನು ಹೊರಡಿಸಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರಿಗೆ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಅವರ ಪೂರ್ಣ ಸಂಬಳವನ್ನು ದೊರಕಿಸಿಕೊಡಬೇಕಿದೆ. ಈ ಕುರಿತು ಸರಕಾರ ಸೂಚನೆ ನೀಡಿದೆ. ಆದರೂ ಶಿಕ್ಷಣ ಸಂಸ್ಥೆಗಳು ಸಂಬಳ ನೀಡುವುದಿಲ್ಲ ಎನ್ನುವ ಮಾಹಿತಿಯನ್ನು ರವಾನಿಸುತ್ತಿವೆ. ಹಾಗಾಗಿ ರಾಜ್ಯ ಸರಕಾರಗಳು ಸೂಕ್ತ ನಿರ್ದೇಶನವನ್ನು ನೀಡಿ ಸಂಬಳ ನೀಡಿರುವ ಕುರಿತು ಮಾಹಿತಿಯನ್ನು ಪಡೆಯುವ ಹಾಗಾದಲ್ಲಿ ಶಿಕ್ಷಕರಿಗೆ ಅನುಕೂಲವಾಗುವುದು. ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿತ್ತಿರುವ ಅರೆಕಾಲಿಕ ಶಿಕ್ಷಕರಿಗೆ ಮತ್ತು ಬೋಧಕೇತರ ಸಿಬ್ಬಂದಿಗೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಸಂಬಳ ಜಮಾ ಮಾಡುವ ಕಾರ್ಯವನ್ನು ನಿರ್ವಹಿಸಬೇಕಾಗಿದೆ. ಮುಂಬರುವ ಶೈಕ್ಷಣಿಕ ವರ್ಷದ ಶುಲ್ಕದಲ್ಲಿ ವಿನಾಯಿತಿಯನ್ನು ನೀಡುವಂತೆಯೂ ಸರಕಾರಗಳು ಆಡಳಿತ ಮಂಡಳಿಯವರಿಗೆ ನಿರ್ದೇಶನವನ್ನು ನೀಡಬೇಕಿದೆ. ವಿದ್ಯಾರ್ಥಿಗಳಿಗೆ ಮಾನವೀಯತೆಯನ್ನು ಬೋಧಿಸುವ ಶಿಕ್ಷಕರಿಗೆ ಈಗ ಸರಕಾರ ಮತ್ತು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಮಾನವೀಯತೆಯನ್ನು ತೋರಬೇಕಿದೆ. ಶಿಕ್ಷಣ ಮಾರಾಟದ ಸರಕಲ್ಲ, ಅದು ಮಾನವೀಯತೆಯನ್ನು ಉಂಟು ಮಾಡುವ ಸಾಧನ ಎಂಬುದನ್ನು ಸಾಬೀತುಪಡಿಸಬೇಕಾಗಿದೆ. ಈ ಸಂದರ್ಭದಲ್ಲಿ ಅವರಿಗೆ ತೋರುವ ಮಾನವೀಯತೆ ಮುಂದಿನ ಮನಕುಲವನ್ನು ನಿರ್ಮಿಸುವ ಶಿಕ್ಷಕರಿಗೆ ಒಂದು ದೊಡ್ಡ ಸ್ಫೂರ್ತಿಯಾಗಬಲ್ಲದು. ದೇಶದ ಅತಿ ಮುಖ್ಯ ಮಾನವ ಸಂಪನ್ಮೂಲವಾದ ಶಿಕ್ಷಕರ ಹಿತ ಕಾಪಾಡುವುದು ಸದ್ಯದ ಅತೀ ಅವಶ್ಯಕವಾದ ಕಾರ್ಯವಾಗಿದೆ.

Writer - ಡಾ. ಜಗನ್ನಾಥ ಕೆ. ಡಾಂಗೆ

contributor

Editor - ಡಾ. ಜಗನ್ನಾಥ ಕೆ. ಡಾಂಗೆ

contributor

Similar News