×
Ad

ಪುನಃ ಉದ್ಯೋಗ ದೊರೆಯಲಿದೆ, ಕಾರ್ಮಿಕರು ಆತಂಕಪಡುವ ಅಗತ್ಯವಿಲ್ಲ: ಸಿಎಂ ಯಡಿಯೂರಪ್ಪ ಅಭಯ

Update: 2020-05-02 17:30 IST

ಬೆಂಗಳೂರು, ಮೇ 2: ರಾಜ್ಯದಲ್ಲಿ ನೆಲೆಸಿರುವ ಒಡಿಶಾ ರಾಜ್ಯದ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳುಹಿಸುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ವಿಡಿಯೋ ಸಂವಾದದ ಮೂಲಕ ಸಮಾಲೋಚನೆ ನಡೆಸಿದರು.

ಶನಿವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಸಂವಾದ ನಡೆಸಿದ ಸಿಎಂ, ಕೊರೋನ ವೈರಸ್ ಸೋಂಕು ತಡೆಗಟ್ಟಲು ರಾಜ್ಯದಲ್ಲಿ ಹೇರಿರುವ ಲಾಕ್‍ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಲ್ಲದೆ, ಯಾವೊಬ್ಬ ಕಾರ್ಮಿಕನೂ ಹಸಿವಿನಿಂದ ಬಳಲದಂತೆ ಎಚ್ಚರ ವಹಿಸಲಾಗಿದೆ ಎಂದರು.

ಉದ್ಯೋಗ ದೊರೆಯಲಿದೆ: ಕೇಂದ್ರ ಸರಕಾರ ಪ್ರಸ್ತುತ ಮಾರ್ಗಸೂಚಿಗಳಂತೆ ವಿವಿಧ ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಮರು ಪ್ರಾರಂಭ ಮಾಡಲಾಗುತ್ತಿದೆ. ಇದರಿಂದ ಬಹುತೇಕ ಕಾರ್ಮಿಕರಿಗೆ ಪುನಃ ಉದ್ಯೋಗ ದೊರೆಯಲಿದೆ. ಹೀಗಾಗಿ ಕಾರ್ಮಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ಹೊರ ರಾಜ್ಯಗಳಿಗೆ ಕಾರ್ಮಿಕರನ್ನು ಕಳುಹಿಸುವ ಸಂಬಂಧ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ಒಡಿಶಾ ರಾಜ್ಯದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಡಿಶಾ ರಾಜ್ಯಕ್ಕೆ ಹಿಂದಿರುಗುವ ಕಾರ್ಮಿಕರ ವಿವರ, ಅವರ ಆರೋಗ್ಯ ತಪಾಸಣೆ ಹಾಗೂ ಅವರ ಕ್ವಾರಂಟೈನ್ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಸಂವಾದದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಒಡಿಶಾ ಸರಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News