ರೈತರಿಗೆ ಬೀಜ-ಗೊಬ್ಬರ ಪೂರೈಕೆಯಾಗುವಂತೆ ಎಚ್ಚರಿಕೆ ವಹಿಸಬೇಕು: ಸಿದ್ದರಾಮಯ್ಯ ಆಗ್ರಹ
ಬೆಂಗಳೂರು, ಮೇ 2: 'ಪ್ರಾರಂಭಿಕ ಮುಂಗಾರು ಮಳೆಯಿಂದ ಉತ್ತೇಜಿತರಾಗಿರುವ ರೈತರು ಕೊರೋನ ಮಾರಿಯ ಹಿನ್ನೆಡೆಯನ್ನು ಮರೆತು ಕೃಷಿ ಚಟುವಟಿಕೆ ಪ್ರಾರಂಭಿಸುವ ಉತ್ಸಾಹದಲ್ಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ತಕ್ಷಣ ರೈತರತ್ತ ಗಮನಹರಿಸಿ ಅವರಿಗೆ ಸುಗಮವಾಗಿ ಬೀಜ ಮತ್ತು ಗೊಬ್ಬರ ಪೂರೈಕೆಯಾಗುವಂತೆ ಎಚ್ಚರಿಕೆ ವಹಿಸಬೇಕು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಲಾಕ್‍ಡೌನ್‍ನಿಂದಾಗಿ ರಾಜ್ಯ-ಹೊರರಾಜ್ಯಗಳ ನಗರ-ಪಟ್ಟಣಗಳಲ್ಲಿ ಉಳಿದುಕೊಂಡಿರುವ ಕಾರ್ಮಿಕರನ್ನು ಊರಿಗೆ ಕರೆತರುವ ಮುಖ್ಯಮಂತ್ರಿ ಯಡಿಯೂರಪ್ಪರ ನಿರ್ಧಾರ ಸ್ವಾಗತಾರ್ಹ. ಆದರೆ, ಬೇರೆ ರಾಜ್ಯಗಳಿಂದ ಬರುವ ಕಾರ್ಮಿಕರನ್ನು ಕಡ್ಡಾಯವಾಗಿ ಕೊರೋನ ಪರೀಕ್ಷೆಗೆ ಒಳಪಡಿಸಬೇಕು, ನಿರ್ಲಕ್ಷ್ಯ ಸಲ್ಲದು. ಮಂಡ್ಯದ ಪ್ರಕರಣ ಎಚ್ಚರಿಕೆಯ ಗಂಟೆ' ಎಂದು ಎಚ್ಚರಿಸಿದ್ದಾರೆ.
'ಕ್ಷೀರಭಾಗ್ಯ ಹಾಲು ಪೂರೈಕೆಯಾಗದೆ ಉಳಿಯುತ್ತಿರುವ ಹಾಲಿನಿಂದಾಗಿ ಆಗುತ್ತಿರುವ ನಷ್ಟ ತಪ್ಪಿಸಲು ಕೆಎಂಎಫ್, ರೈತರಿಂದ ಹಾಲು ಖರೀದಿ ನಿಲ್ಲಿಸಬಾರದು. ನಷ್ಟವನ್ನು ತಪ್ಪಿಸಲು ಲಾಕ್‍ಡೌನ್ ನ ಪ್ರಾರಂಭದ ದಿನಗಳಲ್ಲಿ ಶುರು ಮಾಡಿದ್ದ ಉಚಿತ ಹಾಲು ಪೂರೈಕೆಯನ್ನು ರಾಜ್ಯ ಸರಕಾರ ಪುನರಾರಂಭಿಸಬೇಕು' ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.