ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ವಿಶೇಷ ಆರ್ಥಿಕ ಯೋಜನೆ ರೂಪಿಸಲಿ: ಸಿದ್ದರಾಮಯ್ಯ ಆಗ್ರಹ
ಬೆಂಗಳೂರು, ಮೇ 2: ಲಾಕ್‍ಡೌನ್ ಪರಿಣಾಮದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಸಣ್ಣ ಕೈಗಾರಿಕೆಗಳ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ವಿಶೇಷ ಆರ್ಥಿಕ ಯೋಜನೆಯನ್ನು ರೂಪಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಶನಿವಾರ ನಗ್ರದಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಪೀಣ್ಯ ಕೈಗಾರಿಕೆಗಳ ಸಂಘಗಳ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಕಳೆದ 40 ದಿನಗಳಿಂದ ಸಣ್ಣ ಕೈಗಾರಿಕೆಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಸಾವಿರಾರು ಕೋಟಿ ರೂ.ನಷ್ಟ ಅನುಭವಿಸಿವೆ. ಇಂತಹ ಸಂದರ್ಭದಲ್ಲಿ ಪುನಃ ಸಣ್ಣ ಕೈಗಾರಿಕೆಗಳು ಕಾರ್ಯನಿರ್ವಹಿಸಬೇಕಾದರೆ ಸರಕಾರದ ನೆರವು ಅತ್ಯಗತ್ಯವಾಗಿದೆ ಎಂದರು.
ಸಣ್ಣ ಕೈಗಾರಿಕೆಗಳ ಬಗ್ಗೆ ಸರಕಾರಕ್ಕೆ ಕಾಳಜಿ ಇದ್ದಂತಿಲ್ಲ. ಇದುವರೆಗೂ ಸಂಘಗಳ ಪದಾಧಿಕಾರಿಗಳ ಜತೆ ಸರಕಾರ ಮಾತುಕತೆ ನಡೆಸಿಲ್ಲ. ನಷ್ಟದಲ್ಲಿರುವ ಸಣ್ಣ ಕೈಗಾರಿಕೆಗಳು ಚೇತರಿಸಿಕೊಳ್ಳಬೇಕಾದರೆ ಕೆಲವೊಂದು ರಿಯಾಯಿತಿಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಘೋಷಣೆ ಮಾಡಬೇಕು. ಕಾರ್ಖಾನೆ ಮಾಲಕರು ಬ್ಯಾಂಕ್‍ಗಳ ಮೂಲಕ ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ, ಮಾಸಿಕ ಕಂತು ಪಾವತಿಗೆ ವಿನಾಯಿತಿ, ಉತ್ಪನ್ನಗಳ ರಫ್ತಿಗೆ ಉತ್ತೇಜನ ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಒದಗಿಸಿದರೆ ಮಾತ್ರ ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ನಷ್ಟ ಅನುಭವಿಸುತ್ತಿರುವ ಕೆಲ ಕಾರ್ಖಾನೆಗಳು ಮತ್ತೆ ಉತ್ಪಾದನೆ ಆರಂಭಿಸಬೇಕಾದರೆ ಬಂಡವಾಳ ಅಗತ್ಯ. ಅದರ ಕಡೆಗೂ ಸರಕಾರ ಗಮನ ಹರಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಸರಕಾರ ನಿರ್ಲಕ್ಷ್ಯ ವಹಿಸಿದರೆ ಸಾವಿರಾರು ಕಾರ್ಖಾನೆಗಳು ಮುಚ್ಚಲಿವೆ ಹಾಗೂ ಅದನ್ನೇ ನಂಬಿಕೊಂಡಿರುವ ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಭೆಯಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್.ರಾಜು, ಪೀಣ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶ್ರೀನಿವಾಸ್ ಹಾಗೂ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಕ್ಕೊತ್ತಾಯಗಳು
-ಎಫ್‍ಐಆರ್‍ಸಿ ಬಿಲ್ಲುಗಳನ್ನು ಪಾವತಿ ಮಾಡಲು ಅವಧಿ ವಿಸ್ತರಣೆ
-ಮಾಸಿಕ ವಿದ್ಯುತ್ ಶುಲ್ಕ ಪಾವತಿ ಒಂದು ವರ್ಷದವರೆಗೆ ಮನ್ನಾ
-ಕಾರ್ಮಿಕರ ಇಎಸ್‍ಐ, ಪಿಎಫ್ ವಂತಿಗೆ ಪಾವತಿ ಆರು ತಿಂಗಳವರೆಗೆ ಮನ್ನಾ
-ಬಡ್ತಿ ಮತ್ತು ದಂಡ ಬಡ್ಡಿ ಕೈ ಬಿಡುವುದು,
-ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ವೇತನವನ್ನು ರಾಜ್ಯ ಸರಕಾರ ಶೇ.50ರಷ್ಟು ಭರಿಸುವುದು