×
Ad

ನಿಯಮಾವಳಿ ಪ್ರಕಾರ ನೋಟಿಸ್‍ಗೆ ಉತ್ತರಿಸುತ್ತೇನೆ: ಐಎಎಸ್ ಅಧಿಕಾರಿ ಮುಹಮ್ಮದ್ ಮೊಹಸಿನ್

Update: 2020-05-02 19:20 IST

ಬೆಂಗಳೂರು, ಮೇ 2: ಕೊರೋನ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ತಬ್ಲೀಗ್ ಜಮಾಅತ್ ಸದಸ್ಯರು ಪ್ಲಾಸ್ಮಾ ದಾನ ಮಾಡುತ್ತಿರುವ ಕುರಿತು ಪ್ರಶಂಸಿಸಿ ಟ್ವೀಟ್ ಮಾಡಿದ್ದರಿಂದ ರಾಜ್ಯ ಸರಕಾರದಿಂದ ಶೋಕಾಸ್ ನೋಟಿಸ್ ಸ್ವೀಕರಿಸಿರುವ ಐಎಎಸ್ ಅಧಿಕಾರಿ ಮುಹಮ್ಮದ್ ಮೊಹಸಿನ್, ನಿಯಮಾವಳಿ ಪ್ರಕಾರ ನೋಟಿಸ್‍ಗೆ ಉತ್ತರ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದಿಂದ ನನಗೆ ನೋಟಿಸ್ ಬಂದಿದೆ. ನಿಯಮಾವಳಿ ಪ್ರಕಾರ ಆದಷ್ಟು ಶೀಘ್ರವೇ ಅದಕ್ಕೆ ಉತ್ತರ ಕೊಡುತ್ತೇನೆ. ಒಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಸುದ್ದಿಯ ತುಣುಕನ್ನು ನಾನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದೆ. ಅದು ಈ ಮಟ್ಟಿಗೆ ಬೆಳೆಯುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದರು.

"ಹೊಸದಿಲ್ಲಿ ಒಂದರಲ್ಲೇ ದೇಶ ಸೇವೆಗಾಗಿ 300ಕ್ಕೂ ಹೆಚ್ಚು ತಬ್ಲೀಗಿ ಹೀರೋಗಳು ತಮ್ಮ ಪ್ಲಾಸ್ಮಾ ದಾನ ಮಾಡುತ್ತಿದ್ದಾರೆ. ಗೋದಿ ಮೀಡಿಯಾಗೆ ಏನಾಗಿದೆ? ಈ ಹೀರೋಗಳು ಮಾಡುತ್ತಿರುವ ಮಾನವೀಯ ಕೆಲಸಗಳನ್ನು ಅವು ತೋರಿಸುವುದಿಲ್ಲ" ಎಂದು ಎ.27ರಂದು ಮುಹಮ್ಮದ್ ಮೊಹಸಿನ್ ಟ್ವಿಟ್ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಐದು ದಿನಗಳಲ್ಲಿ ಲಿಖಿತ ಸ್ಪಷ್ಟನೆ ನೀಡುವಂತೆ ಸೂಚಿಸಿ ಸರಕಾರ ನೋಟಿಸ್ ಜಾರಿ ಮಾಡಿದೆ.

1996ರ ಬ್ಯಾಚ್‍ನ ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿಯಾಗಿರುವ ಮುಹಮ್ಮದ್ ಮೊಹಸಿನ್, ಮೂಲತಃ ಬಿಹಾರದವರು. ಪ್ರಸ್ತುತ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಡಿಶಾ ರಾಜ್ಯದಲ್ಲಿ ಚುನಾವಣಾ ವೀಕ್ಷಕರಾಗಿ ನಿಯೋಜಿತಗೊಂಡಿದ್ದ ಮುಹಮ್ಮದ್ ಮೊಹಸಿನ್, ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅನ್ನು ಪರಿಶೀಲಿಸಿ ಸುದ್ದಿಯಾಗಿದ್ದರು. ಅಲ್ಲದೆ, ಭಾರತೀಯ ಚುನಾವಣಾ ಆಯೋಗವು ಅವರನ್ನು ಚುನಾವಣಾ ಕಾರ್ಯದಿಂದ ಅಮಾನತ್ತು ಮಾಡಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News