ವಿನಾ ಕಾರಣ ಮದ್ರಸಾ, ಮಸೀದಿ ಸಿಬ್ಬಂದಿಗಳನ್ನು ಕೈ ಬಿಡುವ ಆಡಳಿತ ಸಮಿತಿಯ ವಿರುದ್ಧ ಕ್ರಮ : ಶಾಫಿ ಸಅದಿ
ಬೆಂಗಳೂರು : ಯಾವುದೇ ಕಾರಣವಿಲ್ಲದೆ ಮಾಸಿಕ ವೇತನದ ನೆಪವೊಡ್ಡಿ ವರ್ಷಗಳ ಕಾಲ ಸೇವೆ ಮಾಡುತ್ತಿದ್ದ ಮಸೀದಿ ಮತ್ತು ಮದ್ರಸಾ ಸಿಬ್ಬಂದಿಗಳನ್ನು ಸೇವೆಯಿಂದ ಬಲವಂತವಾಗಿ ಮುಕ್ತಗೊಳಿಸುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದು ಅಕ್ಷಮ್ಯ ಮತ್ತು ಅಮಾನವೀಯವೆಂದು ರಾಜ್ಯ ವಕ್ಫ್ ಮಂಡಳಿ ಸದಸ್ಯ ಮೌಲಾನ ಎನ್.ಕೆ.ಎಂ ಶಾಫಿ ಸಅದಿ ತಿಳಿಸಿದ್ದಾರೆ.
ಇಡೀ ದೇಶವೇ ಲಾಕ್ ಡೌನ್ ನಲ್ಲಿ ದುಸ್ತರ ಜೀವನ ದೂಡುತ್ತಿರುವಾಗ ಬಡವರಿಗೆ ನೆರವಾಗಬೇಕಾದ ಸದ್ರಿ ಪರಿಸ್ಥಿತಿಯಲ್ಲಿ, ಕನಿಷ್ಠ ವೇತನವನ್ನು ಪಡೆದು ಸಮುದಾಯ ಮತ್ತು ಸಮಾಜಕ್ಕೆ ಒಳಿತಿನ ಹಾದಿಯನ್ನು ತೋರಿಸುವ ಉಲಮಾಗಳನ್ನು ಮದ್ರಸಾ, ಮಸೀದಿಯ ಸೇವೆಯಿಂದ ಕೈಬಿಡುವ ಪ್ರಕ್ರಿಯೆ ಸರಿಯಲ್ಲ. ಸಿಬ್ಬಂದಿಗಳ ವೇತನದಿಂದಲೇ ಜೀವನ ಸಾಗಿಸುವ ಕುಟುಂಬ ಬೀದಿಗೆ ಬರುವ ಸಾಧ್ಯತೆ ಇದೆ.
ಈಗಾಗಲೇ ಹಲವು ದೂರುಗಳು ಕೇಳಿಬಂದಿದ್ದು, ಲಿಖಿತವಾಗಿ ಯಾರೂ ದೂರು ಕೊಟ್ಟಿಲ್ಲ. ಒಂದು ವೇಳೆ ದೂರು ಕೊಟ್ಟರೆ ಅಂತಹ ಆಡಳಿತ ಸಮಿತಿಯ ವಿರುದ್ಧ ವಕ್ಫ್ ಮಂಡಳಿ ಕ್ರಮ ಕೈಗೊಳ್ಳಲಿದೆ. ಈ ವಿಚಾರವಾಗಿ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದೇನೆ ಎಂದು ಮೌಲಾನ ಶಾಫಿ ಸಅದಿ ತಿಳಿಸಿದರು.