×
Ad

ಕನ್ನಡದ ಹಿರಿಯ ಸಾಹಿತಿ, ‘ನಿತ್ಯೋತ್ಸವ’ ಕವಿ ನಿಸಾರ್ ಅಹ್ಮದ್ ನಿಧನ

Update: 2020-05-03 14:10 IST

ಬೆಂಗಳೂರು, ಮೇ 3: ನಿತ್ಯೋತ್ಸವ ಕವಿಯೆಂದೇ ಜನಪ್ರಿಯರಾಗಿದ್ದ ಹಿರಿಯ ಸಾಹಿತಿ ಕೆ.ಎಸ್.ನಿಸಾರ್ ಅಹ್ಮದ್‍ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಕ್ಯಾನ್ಸರ್ ಹಾಗೂ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ರವಿವಾರ ಬನಶಂಕರಿಯ ಪದ್ಮನಾಭ ನಗರದಲ್ಲಿರುವ ಅವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಅಭಿಮಾನಿಗಳು ಅಗಲಿದ್ದಾರೆ. ಅಮೇರಿಕಾದಲ್ಲಿ ವಾಸವಾಗಿದ್ದ ಅವರ ಒಬ್ಬ ಮಗ ಇತ್ತೀಚೆಗಷ್ಟೆ ಮೃತಪಟ್ಟಿದ್ದರು.

ಕವಿಯ ಪರಿಚಯ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಫೆ.5, 1936ರಲ್ಲಿ ಜನಸಿದ ಕವಿ ನಿಸಾರ್ ಅಹ್ಮದ್, 1959ರಲ್ಲಿ ಭೂ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಮತ್ತು ಪ್ರಾಧ್ಯಾಪಕರಾಗಿ ಅಪಾರ ಶಿಷ್ಯ ವೃಂದವನ್ನು ಹೊಂದಿದ್ದರು. ತಮ್ಮ ವಿಶಿಷ್ಟವಾದ ಶೈಲಿಯಲ್ಲಿ ಕವಿತೆಗಳನ್ನು ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರು.

ಶಿಸ್ತಿಗೆ ಮಾದರಿ: ಕವಿ, ಲೇಖಕರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪೈಜಾಮ ಧರಿಸಿಕೊಂಡು ಭಾಗವಹಿಸಿವುದು ಸಾಮಾನ್ಯ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ಜನಿಸಿದ ನಿಸಾರ್ ಅಹ್ಮದ್ ಸದಾ ಸೂಟು, ಬೂಟಿನ ದಿರಿಸಿನಲ್ಲೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅದು ದೊಡ್ಡ ಕಾರ್ಯಕ್ರಮವಾಗಿರಲಿ, ಸಾಮಾನ್ಯ ಕಾರ್ಯಕ್ರಮವಾಗಿರಲಿ ಅವರು ಅತ್ಯಂತ ಶಿಸ್ತಿನಿಂದ ಭಾಗವಹಿಸುವ ಮೂಲಕ ನೋಡುಗರಿಗೆ ಮಾದರಿಯಾಗಿ ಕಾಣುತ್ತಿದ್ದರು.

ಕವಿ ನಿಸಾರ್ ಅಹ್ಮದ್‍ರ ಕವಿ ಹೃದಯ ಬಾಲ್ಯದಲ್ಲಿಯೇ ಮೊಳಕೆ ಒಡೆದಿತ್ತು. ಹೀಗಾಗಿಯೇ ಅವರು, ವಿಜ್ಞಾನದ ವಿದ್ಯಾರ್ಥಿ ಆದರೂ, 30-40 ವರ್ಷಗಳ ಕಾಲ ದಿನದ ಬಹುತೇಕ ಸಮಯ ವಿಜ್ಞಾನವನ್ನೇ ಬೋಧಿಸುತ್ತಿದ್ದರೂ ಅವರ ಉಸಿರು, ನೋಟ, ಆಲೋಚನೆಗಳೆಲ್ಲವೂ ಸಾಹಿತ್ಯವೇ ಆಗಿತ್ತು. ಹೀಗಾಗಿ 10 ವರ್ಷದಲ್ಲಿ ಪ್ರಾರಂಭಗೊಂಡ ಸಾಹಿತ್ಯ ಚಟುವಟಿಕೆ ಕೊನೆಗಾಲದವರೆಗೆ ಅವರನ್ನು ಮುನ್ನೆಡೆಸಿಕೊಂಡು ಬಂದಿತ್ತು.

ಕವನ ಸಂಕಲನ ಕುರಿತು: ಮನಸು ಗಾಂಧಿ ಬಝಾರ್, ನಿತ್ಯೋತ್ಸವ, ಇವರೆಡೂ ನಿಸಾರ್ ಅಹ್ಮದ್‍ರವರ ಪ್ರಸಿದ್ಧ ಕವನ ಸಂಕಲನಗಳಾಗಿವೆ. 1978ರಲ್ಲಿ ಇವರ ಮೊದಲ ಭಾವಗೀತೆಗಳ ನಿತ್ಯೋತ್ಸವ ಧ್ವನಿ ಮುದ್ರಿಕೆ ಬಿಡುಗಡೆಗೊಂಡು ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿತು. ನಿತ್ಯೋತ್ಸವ ಗೀತೆ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು.

ಮನಸು ಗಾಂಧಿ ಬಝಾರ್, ನೆನೆದವರ ಮನದಲ್ಲಿ, ಸುಮಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಿಕೀಯ, ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ನವೋಲ್ಲಾಸ, ಅರವತ್ತೈದರ ಐಸಿರಿ ಸೇರಿ 21 ಕವನ ಸಂಕಲನಗಳು ಹಾಗೂ ಷೇಕ್ಸ್ ಪಿಯರ್ ನ ಒಥೆಲ್ಲೊದ ಕನ್ನಡಾನುವಾದ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್ ಕೃತಿ ಸೇರಿದಂತೆ14 ವೈಚಾರಿಕ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪದನಾ ಕೃತಿಗಳು ಪ್ರಕಟವಾಗಿವೆ.

ಪ್ರಶಸ್ತಿ, ಗೌರವಗಳು: 2006ರಲ್ಲಿ ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿ, 1981ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2003ರಲ್ಲಿ ನಾಡೋಜ ಪ್ರಶಸ್ತಿ, 2006ರಲ್ಲಿ ಅರಸು ಪ್ರಶಸ್ತಿ, 2006ರಲ್ಲಿ ಡಿಸೆಂಬರ್‍ನಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News