×
Ad

ವೈದ್ಯಕೀಯ ಕೋರ್ಸ್‍ಗಳ ಮೇಲಿನ ಶುಲ್ಕ ಹೆಚ್ಚಳಕ್ಕೆ ಫ್ರೆಟರ್ನಿಟಿ ಮೂಮೆಂಟ್ ಕರ್ನಾಟಕ ವತಿಯಿಂದ ಖಂಡನೆ

Update: 2020-05-04 18:06 IST

ಬೆಂಗಳೂರು, ಮೇ 4: ರಾಜ್ಯ ಸರಕಾರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‍ಗಳ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿರುವ ಫ್ರೆಟರ್ನಿಟಿ ಮೂಮೆಂಟ್ ಕರ್ನಾಟಕವು ಕೂಡಲೇ ಆದೇಶವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಫ್ರೆಟರ್ನಿಟಿ ಮೂಮೆಂಟ್ ಕರ್ನಾಟಕ, ಸರಕಾರ ಹೊಸ ಆದೇಶದಿಂದಾಗಿ ಖಾಸಗಿ ಕೋಟಾದಡಿಯಲ್ಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಪದವಿ ಸೀಟುಗಳಿಗೆ 8.7ಲಕ್ಷ ರೂ.ನಿಂದ 11.5ಲಕ್ಷ ರೂ.ವರೆಗೆ(ಶೇ.30ರಷ್ಟು) ಹೆಚ್ಚಿಸಲಾಗುತ್ತದೆ. ಮತ್ತು ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಕೋಟಾ ಸೀಟಿನ ಶುಲ್ಕವನ್ನು 5.8ಲಕ್ಷ ರೂ.ನಿಂದ 7.13ಲಕ್ಷ ರೂ.ವರೆಗೆ ಹೆಚ್ಚಳವಾಗಲಿದೆ.

ರಾಜ್ಯದ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳ ಶಿಷ್ಯ ವೇತನ ಇತರೆ ರಾಜ್ಯಗಳಿಗೆ ಹೋಲಿಸಿದರೆ ತುಂಬಾ ಕಡಿಮೆಯಿದೆ. ಈ ಕಡಿಮೆ ಶಿಷ್ಯ ವೇತನವೂ ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ವೈದ್ಯಕೀಯ ಶಿಕ್ಷಣದ ಶುಲ್ಕಗಳನ್ನು ಭರಿಸಲು ಶಿಕ್ಷಣದ ಸಾಲಗಳನ್ನು ಪಡೆದುಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಪ್ರತಿವರ್ಷವೂ ವೈದ್ಯಕೀಯ ಶಿಕ್ಷಣದ ಶುಲ್ಕಗಳನ್ನು ಏರಿಕೆ ಮಾಡುತ್ತಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಶುಲ್ಕಗಳನ್ನು ಭರಿಸಲು ಆರ್ಥಿಕ ಶಕ್ತಿ ಇಲ್ಲದೆ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಉಳ್ಳವರಿಗೆ ಮಾತ್ರ ಸೀಮಿತಗೊಳಿಸುವ ನೀತಿಯನ್ನು ಅನುಸರಿಸುತ್ತಿರುವುದು ದೇಶದ ಭವಿಷ್ಯಕ್ಕೆ ಅಪಾಯಕಾರಿ ಬೆಳವಣಿಯಾಗಿದೆ.

ಭಾರತವು ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಬೇಕಾದರೆ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಬರುವಂತಾಗಬೇಕು. ಇದು ಸಾಧ್ಯವಾಗಬೇಕಾದರೆ ಕೈಗೆಟಕುವ ದರದಲ್ಲಿ ವೈದ್ಯಕೀಯ ಶಿಕ್ಷಣ ಸಿಗುವಂತಾಗಬೇಕು. ಹಾಗೂ ಸರಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸರಕಾರಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಫ್ರೆಟರ್ನಿಟಿ ಮೂಮೆಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಝಾಮುದ್ಧೀನ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News