ಮೆಜೆಸ್ಟಿಕ್‍ನಲ್ಲಿ ಬಸ್ ಢಿಕ್ಕಿ: ಗ್ರಾಮಕ್ಕೆ ತೆರಳಬೇಕಿದ್ದ ಕೂಲಿ ಕಾರ್ಮಿಕ ಮೃತ್ಯು
ಬೆಂಗಳೂರು, ಮೇ 4: ರಾಜ್ಯ ಸರಕಾರ ಮೂರು ದಿನಗಳ ಕಾಲ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿರುವ ಹಿನ್ನೆಲೆ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿದ್ದ ಕೂಲಿ ಕಾರ್ಮಿಕರೊಬ್ಬರ ಮೇಲೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕಲಬುರ್ಗಿ ಮೂಲದ ಗಫೂರ್(45) ಮೃತ ಕೂಲಿ ಕಾರ್ಮಿಕ ಎಂದು ತಿಳಿದುಬಂದಿದೆ.
ಬನ್ನೇರುಘಟ್ಟದ ಅಮೃತ ನಗರದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಗಫೂರ್ ಊರಿಗೆ ಹೋಗಲು ಸೋಮವಾರ ಇಲ್ಲಿನ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದ ಪ್ಲಾಟ್ ಫಾರಂ 15ರಲ್ಲಿ ಬಂದಿದ್ದಾಗ ಈ ಘಟನೆ ಸಂಭವಿಸಿದೆ. ಕೊಪ್ಪಳ ಘಟಕ ಬಸ್ಸು ಇದಾಗಿದ್ದು, ಲಾಕ್‍ಡೌನ್ ಸಡಿಲಿಕೆಯಾದ ಪರಿಣಾಮ ಸಾವಿರಾರು ಜನರು ಮೆಜೆಸ್ಟಿಕ್ ಬಸ್ಸು ನಿಲ್ದಾಣದಲ್ಲಿ ಸೇರಿಕೊಂಡಿದ್ದರು. ಹೀಗಾಗಿ, ಜನದಟ್ಟಣೆಯಾದ ಪರಿಣಾಮ ಬಸ್ಸು ನಿಲ್ದಾಣದಲ್ಲಿ ಹೊರಡುತ್ತಿದ್ದಾಗ ವ್ಯಕ್ತಿಗೆ ಬಸ್ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.
ಘಟನೆ ಬಳಿಕ ಚಾಲಕ ಪರಾರಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಉಪ್ಪಾರಪೇಟೆ ಸಂಚಾರ ಪೊಲೀಸರು ದೌಡಾಯಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಿ ಪ್ರಕರಣ ದಾಖಲಿಸಿ ಕೃತ್ಯವೆಸಗಿದ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.