ಸರಕಾರಿ ಗೌರವಗಳೊಂದಿಗೆ ಕವಿ ನಿಸಾರ್ ಅಹಮದ್ ಅಂತ್ಯಕ್ರಿಯೆ
ಬೆಂಗಳೂರು, ಮೇ 4: ಕವಿ ನಿಸಾರ್ ಅಹಮದ್ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವ ಹಾಗೂ ಮುಸ್ಲಿಮ್ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸೋಮವಾರ ನೆರವೇರಿಸಲಾಯಿತು.
ಸೋಮವಾರ ಬೆಳಗ್ಗೆ 11ರ ವೇಳೆಗೆ ಪದ್ಮನಾಭನಗರದ ಮೃತರ ನಿವಾಸದ ಮುಂದೆ ಸಾಮಾಜಿಕ ಅಂತರದೊಂದಿಗೆ ಪೊಲೀಸರು ಕುಶಾಲತೋಪು ಹಾರಿಸುವ ಮೂಲಕ ಸಕಲ ಸರಕಾರಿ ಗೌರವ ಸಲ್ಲಿಸಿದರು. ಬಳಿಕ ಮಧ್ಯಾಹ್ನ 2.20ರ ಸುಮಾರಿಗೆ ಜೆಸಿ ನಗರದ ಹಝ್ರತ್ ಖುದ್ದೂಸ್ ಸಾಹೇಬ್ ಖಬರಸ್ಥಾನ್‍ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕೋವಿಡ್-19ರ ಶಿಷ್ಟಾಚಾರದಂತೆ ಕೆಲವೇ ಪೊಲೀಸರು ಪಾಲ್ಗೊಂಡು ಸರಕಾರಿ ಗೌರವ ಸಲ್ಲಿಸಿದರು. ಈ ವೇಳೆ ನಿಸಾರ್ ಅಹಮದ್‍ರವರ ಬಂಧುಗಳು, ಅಭಿಮಾನಿಗಳು ಸೇರಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಯು.ಟಿ.ಖಾದರ್, ರೋಷನ್ ಬೇಗ್, ಝಮಿರ್ ಅಹ್ಮದ್‍ಖಾನ್, ರಿಝ್ವಾನ್ ಅರ್ಷದ್ ಹಾಗೂ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಸಾಹಿತ್ಯಾಸಕ್ತರು ನಿಸಾರ್ ಅಹಮದ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.