ಬಿಲ್ಡರ್ ಗಳ ಜತೆ ಸಭೆ ನಂತರ ವಲಸೆ ಕಾರ್ಮಿಕರ ವಿಶೇಷ ರೈಲು ರದ್ದುಗೊಳಿಸಿದ ಕರ್ನಾಟಕ ಸರಕಾರ
ಬೆಂಗಳೂರು : ಲಾಕ್ ಡೌನ್‍ನಿಂದ ರಾಜ್ಯದ ಹಲವೆಡೆ ಅತಂತ್ರರಾಗಿರುವ ಇತರ ರಾಜ್ಯದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಇನ್ನು ಯಾವುದೇ ರೈಲಿನ ಏರ್ಪಾಟು ಮಾಡಲಾಗುವುದಿಲ್ಲ ಎಂದು ಕರ್ನಾಟಕ ಸರಕಾರ ಹೇಳಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪ್ರಮುಖ ಬಿಲ್ಡರುಗಳು ಹಾಗೂ ರಿಯಲ್ ಎಸ್ಟೇಟ್ ಸಂಸ್ಥೆಗಳೊಂದಿಗೆ ನಡೆಸಿದ ಮಾತುಕತೆ ವೇಳೆ ಸಂಸ್ಥೆಗಳು ಕಾರ್ಮಿಕರ ಸಾಮೂಹಿಕ ವಲಸೆಯ ಕುರಿತು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
''ಇತರ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕದಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣದಲ್ಲಿದೆ. ಕೆಂಪು ವಲಯಗಳನ್ನು ಹೊರತುಪಡಿಸಿ ಇತರ ವಲಯಗಳಲ್ಲಿ ಕೈಗಾರಿಕಾ, ಉದ್ಯಮ ಹಾಗೂ ನಿರ್ಮಾಣ ಕಾಮಗಾರಿಗಳು ಆರಂಭಗೊಂಡಿವೆ. ಆದುದರಿಂದ ವಲಸಿಗ ಕಾರ್ಮಿಕರ ಅನಗತ್ಯ ಪ್ರಯಾಣವನ್ನು ನಿಲ್ಲಿಸಬೇಕಿದೆ'' ಎಂದು ಸಭೆಯ ನಂತರ ಸಿಎಂ ಹೇಳಿದ್ದಾರೆ.
ಅಂತರ್-ಜಿಲ್ಲಾ ಪ್ರಯಾಣ ಕುರಿತಂತೆ ರಾಜ್ಯದ ನೋಡಲ್ ಅಧಿಕಾರಿ ಎನ್ ಮಂಜುನಾಥ್ ಪ್ರಸಾದ್ ಅವರು ನೈಋತ್ಯ ರೈಲ್ವೆಗೆ ಪತ್ರ ಬರೆದು ಬುಧವಾರದ ಎಲ್ಲಾ ವಿಶೇಷ ರೈಲುಗಳನ್ನು ರದ್ದುಪಡಿಸುವಂತೆ ಹೇಳಿದ್ದಾರೆ. ಬಿಹಾರಕ್ಕೆ ತೆರಳಲು ಸಿದ್ಧರಾಗಿದ್ದ ಸುಮಾರು 10,000 ಕಾರ್ಮಿಕರನ್ನು ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿರಿಸಲಾಗಿತ್ತು.