ಫೇಸ್ ಬುಕ್ "ಸುಪ್ರೀಂ ಕೋರ್ಟ್''ನಲ್ಲಿ ನೋಬೆಲ್ ಪುರಸ್ಕೃತೆ ತವಕ್ಕಲ್ ಕರ್ಮನ್

Update: 2020-05-07 06:40 GMT

ಸ್ಯಾನ್ ಫ್ರಾನ್ಸಿಸ್ಕೋ: ಫೇಸ್ಬುಕ್ ಸಂಸ್ಥೆಯ 'ಸುಪ್ರೀಂ ಕೋರ್ಟ್' ಎಂದೇ ಬಣ್ಣಿತವಾಗಿರುವ ಅದರ ಹೊಸ ಕಂಟೆಂಟ್ ಓವರ್‍ಸೈಟ್ ಬೋರ್ಡ್‍ನಲ್ಲಿ  ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ತವಕ್ಕಲ್ ಕರ್ಮನ್  ಹಾಗೂ ಡೆನ್ಮಾರ್ಕ್ ದೇಶದ ಮಾಜಿ ಪ್ರಧಾನಿ ಹೆಲ್ಲೆ ಥಾರ್ನಿಂಗ್ ಸ್ಚಿಮಿಡ್ಟ್ ಅವರೂ ಸ್ಥಾನ ಪಡೆದಿದ್ದಾರೆ.

ಬುಧವಾರ ಘೋಷಿತವಾದ ಈ ಸಮಿತಿಯ 20 ಸದಸ್ಯರಲ್ಲಿ ಹಲವಾರು ಮಂದಿ ಸಾಂವಿಧಾನಿಕ ಕಾನೂನು ತಜ್ಞರು, ಹಕ್ಕು ಹೋರಾಟಗಾರರು ಸೇರಿದ್ದಾರೆ.

ಈ ಸ್ವಾಯತ್ತ ಮಂಡಳಿಯು ಫೇಸ್ ಬುಕ್ ಹಾಗೂ ಅದರ ಮುಖ್ಯಸ್ಥ ಮಾರ್ಕ್ ಝುಕೆರ್ ಬರ್ಗ್ ಅವರು ಕೈಗೊಳ್ಳುವ ಕೆಲವೊಂದು  ನಿರ್ಧಾರಗಳನ್ನು ತಿರಸ್ಕರಿಸುವ ಹಕ್ಕನ್ನು ಹೊಂದಿದೆ.

ಫೇಸ್ ಬುಕ್ ತನ್ನ ಕಂಟೆಂಟ್ ವಿಚಾರದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವುದರಿಂದ ನೂತನ ಮಂಡಳಿಯು ದ್ವೇಷದ ಭಾಷಣ, ಕಿರುಕುಳ ಹಗೂ ಜನರ ಸುರಕ್ಷತೆಯ ವಿಚಾರ ಕುರಿತಂತೆ ಈ ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಡಲಿದೆ.

ಈ ಮಂಡಳಿಯ ಶೇ 25ರಷ್ಟು  ಸದಸ್ಯರು ಹಾಗೂ ಇಬ್ಬರು ಸಹ ಅಧ್ಯಕ್ಷರು ಅಮೆರಿಕಾದವರೇ ಆಗಿದ್ದರೂ ಸದಸ್ಯರು 27 ದೇಶಗಳಲ್ಲಿ ವಾಸಿಸಿದವರು ಹಾಗೂ ಕನಿಷ್ಠ 29 ಭಾಷೆಗಳನ್ನು ಬಲ್ಲವರು ಎಂದು ಫೇಸ್ ಬುಕ್ ಹೇಳಿಕೊಂಡಿದೆ.

ಸಮಿತಿಯ ಸಹ-ಅಧ್ಯಕ್ಷರಾಗಿ  ಅಮೆರಿಕಾದ ಮಾಜಿ ಫೆಡರಲ್ ಸರ್ಕಿಟ್ ನ್ಯಾಯಾಧೀಶ ಹಾಗೂ ಧಾರ್ಮಿಕ ಸ್ವಾತಂತ್ರ್ಯ ವಿಚಾರಗಳ ಕುರಿತ ತಜ್ಞ ಮೈಕೇಲ್ ಮೆಕ್‍ಕಾನ್ನೆಲ್ ಹಾಗೂ ಸಂವಿಧಾನಿಕ ಕಾನೂನು ತಜ್ಞ ಜಮಾಲ್ ಗ್ರೀನ್, ಕೊಲಂಬಿಯಾದ ಅಟಾರ್ನಿ ಕಟಾಲಿನಾ ಬೊಟೆರೋ-ಮರಿನೊ ಹಾಗೂ ಡೆನ್ಮಾರ್ಕ್ ದೇಶದ ಮಾಜಿ ಪ್ರಧಾನಿ ಹೆಲ್ಲೆ ಥಾರ್ನಿಂಗ್ ಸ್ಚಿಮಿಡ್ಟ್ ಸೇರಿದ್ದಾರೆ.

ಯೆಮೆನಿ ಹೋರಾಟಗಾರ ಹಾಗೂ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ತವಕ್ಕಲ್ ಕರ್ಮನ್, ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಅಂಡ್ರಸ್ ಸಜೊ, ಇಂಟರ್ನೆಟ್ ಸ್ಯಾನ್ಸ್ ಫ್ರಂಟಿಯರ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಜೂಲಿ ಒವೊನೊ, ಗಾರ್ಡಿಯನ್ ಪತ್ರಿಕೆಯ ಮಾಜಿ ಮುಖ್ಯ ಸಂಪಾದಕ ಅಲನ್ ರಸ್ಬ್ರಿಡ್ಜರ್ ಹಾಗೂ ಪಾಕಿಸ್ತಾನಿ ಡಿಜಿಟಲ್ ಹಕ್ಕುಗಳ ವಕೀಲ ನಿಘತ್ ಡಾಡ್ ಸಮಿತಿಯ ಸದಸ್ಯರಾಗಿದ್ದಾರೆ.

ಸಮಿತಿಯಲ್ಲಿ ಭವಿಷ್ಯದಲ್ಲಿ 40 ಸದಸ್ಯರಿರಲಿದ್ದು ಫೇಸ್ ಬುಕ್ ಇದಕ್ಕಾಗಿ 130 ಮಿಲಿಯನ್ ಡಾಲರ್ ಮೀಸಲಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News