ರಾಜ್ಯದಲ್ಲಿ ಮತ್ತೆ ಎಂಟು ಕೊರೋನ ಪ್ರಕರಣ ಪತ್ತೆ; ಓರ್ವ ಮಹಿಳೆ ಬಲಿ
ಬೆಂಗಳೂರು, ಮೇ 7: ರಾಜ್ಯದಲ್ಲಿ ಮತ್ತೆ 8 ಮಂದಿಯಲ್ಲಿ ಹೊಸದಾಗಿ ಕೋವಿಡ್-19 ಸೋಂಕು ಪತ್ತೆಯಾಗಿದ್ದು, ಓರ್ವ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬುಧವಾರ ಸಂಜೆ 5ರಿಂದ ಇಂದು ಮಧ್ಯಾಹ್ನ 12 ಗಂಟೆಯೊಳಗೆ 8 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 701ಕ್ಕೆ ಏರಿಕೆಯಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಕೊರೋನ ಸೋಂಕಿತ 55 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮಧುಮೇಹ ರೋಗಿಯಾಗಿದ್ದ ಈ ಮಹಿಳೆಯನ್ನು ಉಸಿರಾಟದ ತೀವ್ರ ತೊಂದರೆಯ ಹಿನ್ನೆಲೆಯಲ್ಲಿ ದಾವಣಗೆರೆಯ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಂದು ದಾವಣಗೆರೆ ಮತ್ತು ಕಲಬುರಗಿಯಲ್ಲಿ ತಲಾ ಮೂರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೆ, ಬೆಳಗಾವಿ ಮತ್ತು ಬೆಂಗಳೂರು ನಗರದಲ್ಲಿ ತಲಾ ಒಂದೊಂದು ಪ್ರಕರಣಗಳು ದೃಢಗೊಂಡಿದೆ. ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ 13 ವರ್ಷದ ಬಾಲಕಿಯೊಬ್ಬಳಲ್ಲಿ ಸೋಂಕು ಕಂಡುಬಂದಿದೆ.
ರಾಜ್ಯದ ಒಟ್ಟು ಸೋಂಕಿತ 701 ಪ್ರಕರಣಗಳಲ್ಲಿ 363 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ 30 ಮಂದಿ ಮೃತಪಟ್ಟಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.