ಮುಂದಿನ ದಿನಗಳಲ್ಲಿ ತರಕಾರಿ ಹಣ್ಣು ಬೆಳೆಗಾರರಿಗೆ‌ ಪ್ಯಾಕೇಜ್: ಬಿ.ಸಿ.ಪಾಟೀಲ್

Update: 2020-05-07 08:26 GMT

ಬೆಂಗಳೂರು, ಮೇ 7: ಕಳೆದ ಒಂದು ತಿಂಗಳಿನಿಂದ ರಾಜ್ಯದ ಎಲ್ಲ 30 ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ರೈತರ ನೆರವಿಗೆ ಬರುವಂತೆ ಮುಖ್ಯಮಂತ್ರಿಗೆ ವರದಿ ರೂಪದಲ್ಲಿ ಮನವಿ ಮಾಡಿದ್ದು, ಮುಖ್ಯಮಂತ್ರಿ ಕೊರೋನ ಲಾಕ್ಡೌನ್ ವಿಶೇಷ ಪ್ಯಾಕೇಜ್‌ನಲ್ಲಿ ಮುಖ್ಯವಾಗಿ ಹೂ ಬೆಳೆಗಾರರಿಗೆ ಪ್ಯಾಕೇಜ್ ನೀಡಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ವಿಕಾಸ ಸೌಧದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸದ್ಯದಲ್ಲಿಯೇ ತರಕಾರಿ ಮತ್ತು ಹಣ್ಣು ಬೆಳೆಗಾರರಿಗೂ ಪ್ಯಾಕೇಜ್ ಪ್ರಕಟವಾಗಲಿದೆ. ಆರ್ಥಿಕ ಸಂಕಷ್ಟದಲ್ಲಿಯೂ ಮುಖ್ಯಮಂತ್ರಿ ರೈತರ ಬಗ್ಗೆ ಕಾಳಜಿಯಿಂದಾಗಿ ಪ್ಯಾಕೇಜ್ ಪ್ರಕಟ ಮಾಡಲಿದ್ದಾರೆ.

ಹೀಗಾಗಿ ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ ಇಂತಿಷ್ಟೇ ಪರಿಹಾರ ಕೊಡಿ ಎಂದು ಒತ್ತಾಯಿಸುವುದಿಲ್ಲ. ಪರಿಹಾರ ಎನ್ನುವುದು ಸಾವಿನ ಸಂದರ್ಭದಲ್ಲಿ ಬಾಯಿಗೆ ನೀರು ಬಿಟ್ಟಂತೆ ಸಹಾಯಕವಾಗಲಿದೆ ಎಂದರು.

ಕಳಪೆ ಬಿತ್ತನೆ ಬೀಜದ ಮಾಫಿಯಾಯನ್ನು ಬಯಲು ಮಾಡಲಾಗಿದ್ದು ಆಂಧ್ರದ ಮೂಲವನ್ನು ಪತ್ತೆ ಮಾಡಲಾಗಿದೆ. ಆಂಧ್ರದಲ್ಲಿ ತಿರಸ್ಕೃತವಾಗಿರುವ ಬೀಜಗಳನ್ನು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಮುಸುಕಿನ ಜೋಳ, ಸೂರ್ಯಕಾಂತಿ, ಹತ್ತಿ ಇತ್ಯಾದಿ ಕಳಪೆ ಬೀಜಗಳು ಸೇರಿದಂತೆ ಅಂದಾಜು ಹತ್ತು ಸಾವಿರಕ್ಕೂ ಹೆಚ್ಚು ಕ್ವಿಂಟಾಲ್ ಕಳಪೆ ಬೀಜ ವಶಕ್ಕೆ ಪಡೆದು ಎಂಟು ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದರು.

ಕೇಂದ್ರದ ಮಟ್ಟದಲ್ಲಿಯೂ ನಮ್ಮ ರಾಜ್ಯದ ಅಗ್ರಿವಾರ್ ರೂಮ್ ಸದ್ದು ಮಾಡಿದ್ದು, ಕೇಂದ್ರದಿಂದಲೂ ಸಹ ಮೆಚ್ಚುಗೆ ವ್ಯಕ್ತವಾಗಿದೆ. ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆಯೇ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕಾರ್ಯಪ್ರವೃತ್ತವಾಗಿ ಕೆಲಸ ನಿರ್ವಹಿಸಿದೆ‌ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News