ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 20 ಕೋಟಿ ಫಲಾನುಭವಿಗಳಿಗೆ ತಲುಪಿಲ್ಲ ಪಡಿತರ

Update: 2020-05-07 18:01 GMT

ಹೊಸದಿಲ್ಲಿ,ಮೇ 7: ಕೊರೋನ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಹೇರಲಾದ ಲಾಕ್‌ಡೌನ್‌ನಿಂದ ತತ್ತರಿಸಿರುವ ದೇಶದ ಬಡಜನತೆ ಸಮಾಧಾನದ ನಿಟ್ಟುಸಿರೆಳೆಯುವಂತೆ ಮಾಡಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್‌ನ್ನು ಮಾರ್ಚ್ 26ರಂದು ಪ್ರಕಟಿಸಿದ್ದರು.

ಈ ಪ್ಯಾಕೇಜ್‌ನಡಿ ರಾಷ್ಟ್ರೀಯ ಆಹಾರಭದ್ರತಾ ಕಾಯ್ದೆಯ ( ಎನ್‌ಎಫ್‌ಎಸ್‌ಎ) 80 ಕೋಟಿಗೂ ಅಧಿಕ ಫಲಾನುಭವಿಗಳು,ಮುಂದಿನ ಮೂರು ತಿಂಗಳುಗಳವರೆಗೆ ಎಂದಿನಂತೆ ದೊರೆಯುವ 5 ಕೆ.ಜಿ. ಅಕ್ಕಿ ಅಥವಾ ಗೋಧಿಯ ಜೊತೆ 5 ಕೆ.ಜಿ. ಅಕ್ಕಿ ಅಥವಾ ಗೋಧಿಯನ್ನು ಹೆಚ್ಚುವರಿಯಾಗಿ ಪಡೆಯಲಿದ್ದಾರೆಂದು ಅವರು ತಿಳಿಸಿದ್ದರು.

ಆದರೆ ಎಪ್ರಿಲ್‌ನಲ್ಲಿ ದೇಶಾದ್ಯಂತ 20 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆ.ಜಿ. ಧಾನ್ಯ (ಗೋಧಿ ಅಥವಾ ಅಕ್ಕಿ) ದೊರೆತಿಲ್ಲವೆಂದು ಕೇಂದ್ರ ಸರಕಾರವು ಬುಧವಾರ ಬಿಡುಗಡೆಗೊಳಿಸಿದ ದತ್ತಾಂಶವೊಂದು ಬಹಿರಂಗಪಡಿಸಿದೆ.

ಎಪ್ರಿಲ್‌ನಲ್ಲಿ ಪಿಎಂಜಿಕೆಪಿ ಪ್ಯಾಕೇಜ್‌ನಡಿ 80.30 ಕೋಟಿ ಫಲಾನುಭವಿಗಳ ಪೈಕಿ ಕೇವಲ 60.30 ಕೋಟಿ ಮಂದಿಗೆ ಮಾತ್ರವೇ ಹೆಚ್ಚುವರಿ ಆಹಾರ ಧಾನ್ಯವನ್ನು ಒದಗಿಸಲಾಗಿದೆ.

ಒಂದು ವೇಳೆ ಎಲ್ಲಾ 80.30 ಕೋಟಿ ಫಲಾನುಭವಿಗಳಿಗೆ ಪಿಎಂಜಿಕೆಪಿ ಯೋಜನೆಯಡಿ ಹೆಚ್ಚುವರಿ ಧಾನ್ಯವನ್ನು ಒದಗಿಸಿದಲ್ಲಿ ಎಪ್ರಿಲ್ ವೇಳೆಗೆ 40.15 ಕೋಟಿ ಲಕ್ಷ ಮೆಟ್ರಿಕ್ ಟನ್ ಧಾನ್ಯವನ್ನು ಎಪ್ರಿಲ್‌ನಲ್ಲಿ ವಿತರಿಸಬಹುದಾಗಿತ್ತು. ಆದರೆ ಸರಕಾರದ ದತ್ತಾಂಶಗಳ ಪ್ರಕಾರ ಕೇವಲ 30.16 ಲಕ್ಷ ಟನ್ ಧಾನ್ಯಗಳನ್ನು ಮಾತ್ರವೇ ವಿತರಿಸಲಾಗಿದೆ. ಹೀಗಾಗಿ ಶೇ.25ರಷ್ಟು ಫಲಾನುಭವಿಗಳಿಗೆ ಎಪ್ರಿಲ್ ತಿಂಗಳಲ್ಲಿ ಪಿಎಂಜಿಕೆಪಿ ಪ್ಯಾಕೇಜ್‌ನಡಿ ಹೆಚ್ಚುವರಿ ಆಹಾರಧಾನ್ಯ ವಿತರಣೆ ಯಾಗಿಲ್ಲವೆಂದಾಯಿತು.

ಈ ಮಹತ್ವಾಕಾಂಕ್ಷಿ ಪ್ಯಾಕೇಜ್‌ನಡಿ ದಿಲ್ಲಿ ಹಾಗೂ ಪಂಜಾಬ್ ರಾಜ್ಯಗಳು ಅತ್ಯಂತ ಕಳಪೆ ಸಾಧನೆಯನ್ನು ಪ್ರದರ್ಶಿಸಿದ್ದು, ಅಲ್ಲಿ ಕೇವಲ ಶೇ.1ರಷ್ಟು ಮಾತ್ರ ಹೆಚ್ಚುವರಿ ಆಹಾರಧಾನ್ಯ ವಿತರಣೆಯಾಗಿದೆ ಎಂಬುದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಟ್ವಿಟರ್‌ನಲ್ಲಿ ಪ್ರಕಟಿಸಿದ ದತ್ತಾಂಶವೊಂದು ಬಹಿರಂಗಪಡಿಸಿದೆ.

ಪಂಜಾಬ್‌ನಲ್ಲಿ 70 ಸಾವಿರ ಟನ್ ಆಹಾರಧಾನ್ಯ ವಿತರಣೆಯಾಗಬೇಕಿತ್ತಾದರೂ, ಅಲ್ಲಿ ಕೇವಲ 688 ಟನ್ ಆಹಾರಧಾನ್ಯ ಮಾತ್ರವೇ ಹಂಚಿಕೆಯಾಗಿದೆ. ಇತ್ತ 36 ಸಾವಿರ ಟನ್ ಆಹಾರಧಾನ್ಯ ವಿತರಿಸಬೇಕಿದ್ದ ದಿಲ್ಲಿಯು ಕೇವಲ 63 ಟನ್ ಮಾತ್ರವೇ ಹಂಚಿದೆ.

ಆದರೆ ಉತ್ತರಪ್ರದೇಶ, ಕೇರಳ, ಆಂಧ್ರಪ್ರದೇಶ, ಅಸ್ಸಾಂ, ಚತ್ತೀಸ್‌ಗಢ ಹಾಗೂ ರಾಜಸ್ಥಾನ ಸರಕಾರಗಳು, ತಮ್ಮ ರಾಜ್ಯಗಳಲ್ಲಿರುವ ರಾಷ್ಟ್ರೀಯ ಆಹಾರ ಸುರಕ್ಷತಾ ಯೋಜನೆಯ ಫಲಾನುಭವಿಗಳಲ್ಲಿ ಶೇ.95ಕ್ಕೂ ಅಧಿಕ ಮಂದಿಗೆ ಪಿಎಂಜಿಕೆಪಿ ಯೋಜನೆಯಡಿ ಹೆಚ್ಚುವರಿ ಖೋಟಾದ ಆಹಾರಧಾನ್ಯ ವಿತರಿಸಲು ಸಫಲವಾಗಿವೆ.

ಕರ್ನಾಟಕದಲ್ಲಿ ಶೇ. 48 ಮಂದಿಗೆ ಮಾತ್ರ ಹೆಚ್ಚುವರಿ ಆಹಾರಧಾನ್ಯ ಲಭ್ಯ

ಪಶ್ಚಿಮಬಂಗಾಳ, ಮಧ್ಯಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳೂ ಕೂಡಾ ಪಿಎಂಜಿಕೆಪಿ ಪ್ಯಾಕೇಜ್‌ನಡಿ ಹೆಚ್ಚುವರಿ ಆಹಾರಧಾನ್ಯ ವಿತರಣೆಯಲ್ಲಿ ಕಳಪೆ ಸಾಧನೆಯನ್ನು ಪ್ರದರ್ಶಿಸಿವೆ. ಪಶ್ಚಿಮ ಬಂಗಾಳವು ರಾಜ್ಯದ 6 ಕೋಟಿ ಫಲಾನುಭವಿಗಳ ಪೈಕಿ ಮೂರನೆ ಒಂದಂಶದಷ್ಟು ಮಂದಿಗೆ ಮಾತ್ರವೇ ಹೆಚ್ಚುವರಿ ಧಾನ್ಯ ವಿತರಿಸಿದೆ. ಕರ್ನಾಟಕ ಕೂಡಾ ತನ್ನ ಮೂರನೆ ಒಂದು ಫಲಾನುಭವಿಗಳಿಗೆ ಮಾತ್ರವೇ ಹೆಚ್ಚುವರಿ ಆಹಾರಧಾನ್ಯ ವಿತರಿಸಿದೆ. ಮಧ್ಯಪ್ರದೇಶವು ತನ್ನ ಫಲಾನುಭವಿಗಳ ಪೈಕಿ ಶೇ. 48ರಷ್ಟು ಮಂದಿಗೆ 1.3 ಲಕ್ಷ ಟನ್ ಹೆಚ್ಚುವರಿ ಆಹಾರಧಾನ್ಯ ವಿತರಿಸಿದೆ. ವಾಸ್ತವವಾಗಿ ಅದು 2.73 ಲಕ್ಷ ಟನ್ ಫಲಾನುಭವಿಗಳಿಗೆ ವಿತರಣೆ ಮಾಡಬೇಕಾಗಿತ್ತಾದರೂ, ಅವರಲ್ಲಿ ಅರ್ಧಾಂಶಕ್ಕಿಂತಲೂ ಕಡಿಮೆ ಮಂದಿಗೆ ಮಾತ್ರವೇ ಈ ಯೋಜನೆಯ ಪ್ರಯೋಜನ ದೊರೆತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News