ಮದ್ಯದ ಅಮಲಿನಲ್ಲಿ ಗಲಾಟೆ: ಪ್ರತ್ಯೇಕ ಘಟನೆಯಲ್ಲಿ ಬೆಂಗಳೂರಿನಲ್ಲಿ ಮೂವರ ಕೊಲೆ
ಬೆಂಗಳೂರು, ಮೇ.7: ಮದ್ಯದ ಅಮಲಿನಲ್ಲಿ ಪತ್ನಿಯನ್ನು ಕೊಲೆಗೈದಿರುವ ಘಟನೆ ಇಲ್ಲಿನ ಮಾದನಾಯ್ಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾದನಾಯ್ಕನಹಳ್ಳಿಯ ಸಿದ್ಧೇಶ್ವರ ಬಡಾವಣೆಯ ದಿವ್ಯಾ(24) ಕೊಲೆಯಾದ ಮಹಿಳೆಯಾಗಿದ್ದು, ಕೃತ್ಯವೆಸಗಿರುವ ಪತಿ ತೀರ್ಥಪ್ರಸಾದ್ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತೀರ್ಥಪ್ರಸಾದ್ ಪತ್ನಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದ. ಬುಧವಾರ ರಾತ್ರಿ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಆಕ್ರೋಶಗೊಂಡ ತೀರ್ಥಪ್ರಸಾದ್, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಪರಾರಿಯಾಗಿರುವ ತೀರ್ಥಪ್ರಸಾದ್ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ.
ಸ್ನೇಹಿತನ ಕೊಲೆ
ಕ್ಷುಲ್ಲಕ ಕಾರಣಕ್ಕೆ ಮದ್ಯದ ಅಮಲಿನಲ್ಲಿ ಸ್ನೇಹಿತರಿಬ್ಬರ ನಡುವೆ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಮಠದಹಳ್ಳಿಯ ಕಿಶೋರ್(28) ಕೊಲೆಯಾದ ಯುವಕನಾಗಿದ್ದು, ಕೃತ್ಯವೆಸಗಿ ಪರಾರಿಯಾಗಿರುವ ಆತನ ಸ್ನೇಹಿತ ರಾಜೇಶ್ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಮಠದಹಳ್ಳಿಯ ಕಿಶೋರ್ ಮನೆಗೆ ಬುಧವಾರ ರಾತ್ರಿ ಮದ್ಯ ತೆಗೆದುಕೊಂಡು ಬಂದಿದ್ದು, ರಾಜೇಶ್ ಜೊತೆ ಸೇವನೆ ಮಾಡಿದ್ದ. ಮದ್ಯದ ಅಮಲಿನಲ್ಲಿ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಆರಂಭವಾಗಿದೆ. ಜಗಳ ತಾರಕಕ್ಕೇರಿದ ಪರಿಣಾಮ ಕಿಶೋರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ರಾಜೇಶ್ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಘಟನೆ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಆರ್‍ಟಿ ನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮದ್ಯದ ಅಮಲಿನಲ್ಲಿ ಕೊಲೆ
ಮದ್ಯದ ಅಮಲಿನಲ್ಲಿ ಸ್ನೇಹಿತನ ತಲೆಯನ್ನು ಗೋಡೆಗೆ ಗುದ್ದಿ ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೋವಿ ಕಾಲನಿಯ ರಾಜೇಶ್(40) ಕೊಲೆಯಾಗಿದ್ದು, ಕೃತ್ಯವೆಸಗಿ ಪರಾರಿಯಾಗಿರುವ ನೇತ ಎಂಬಾತನಿಗೆ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ.
ಕೊಲೆಯಾದ ರಾಜೇಶ್ ಹಾಗೂ ಕೃತ್ಯವೆಸಗಿದ ನೇತ ಜೊತೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಹಲವು ವರ್ಷಗಳ ಸ್ನೇಹಿತರಾಗಿದ್ದರು. ಬುಧವಾರ ರಾತ್ರಿ ಇಬ್ಬರು ಮದ್ಯ ಸೇವಿಸುವಾಗ ಹೆಚ್ಚು ಮದ್ಯ ಕುಡಿದ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ರಾಜೇಶ್ ತಲೆಯನ್ನು ಗೋಡೆಗೆ ಗುದ್ದಿ ನೇತ ಪರಾರಿಯಾಗಿದ್ದು, ಗಂಭೀರವಾಗಿ ಗಾಯಗೊಂಡ ರಾಜೇಶ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.