ಯಲಹಂಕ: ಕಂದಾಯ ಇಲಾಖೆ ಅಧಿಕಾರಿಗಳಿಂದ ರಕ್ತದಾನ

Update: 2020-05-07 11:52 GMT

ಬೆಂಗಳೂರು, ಮೇ 7: ಬೆಂಗಳೂರು ಉತ್ತರ ಜಿಲ್ಲೆಯ ಯಲಹಂಕ ತಾಲೂಕು ಕಚೇರಿ ಆವರಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ರಕ್ತದಾನ ಮಾಡಿದರು. 

ಕೊರೋನ ಲಾಕ್‍ಡೌನ್ ಹಿನ್ನೆಲೆ ರಕ್ತದಾನ ಕಡಿಮೆಯಾಗಿರುವುದನ್ನು ಮನಗಂಡ ರಾಜ್ಯದ ಕಂದಾಯ ಇಲಾಖೆ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದರು. ಈ ಸಂದರ್ಭದಲ್ಲಿ 200ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.

ಬೆಂಗಳೂರು ಉತ್ತರ ಯಲಹಂಕ ತಾಲೂಕಿನ ತಹಶೀಲ್ದಾರ್ ರಘುಮೂರ್ತಿ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳು ರಕ್ತದಾನ ಮಾಡಿದ್ದು, ಉಪ ತಹಶೀಲ್ದಾರ್ ಮಹೇಶ್, ಗಂಗಾಧರಪ್ಪ ಸೇರಿದಂತೆ ಮಹಿಳಾ ಸಿಬ್ಬಂದಿ ರಕ್ತದಾನ ಮಾಡಿದರು. 

ಈ ಬಗ್ಗೆ ಮಾತನಾಡಿರುವ ಯಲಹಂಕ ತಹಶೀಲ್ದಾರ್ ರಘುಮೂರ್ತಿ, ಕೊರೋನ ಮಹಾಮಾರಿಯಿಂದ ಎಲ್ಲೂ ರಕ್ತದಾನ ಶಿಬಿರಗಳು ನಡೆಯುತ್ತಿಲ್ಲ. ದಾನಿಗಳು ಆಸ್ಪತ್ರೆ ಕಡೆ ಮುಖ ಮಾಡುತ್ತಿಲ್ಲ. ಇದರಿಂದಾಗಿ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಸಹ ಹೆಚ್ಚಾಗಿದ್ದು ರೋಗಿಗಳು ರಕ್ತಕ್ಕಾಗಿ ಪರದಾಡುವ ದಯನೀಯ ಸ್ಥಿತಿ ಎದುರಾಗಿದೆ. ಆಸ್ಪತ್ರೆಗಳಲ್ಲಿ ರಕ್ತಕ್ಕಾಗಿ ಬೇಡಿಕೆ ಇದ್ದರೂ ದಾನಿಗಳು, ಸ್ವಯಂ ಸೇವಕರು ಮನೆಗಳಿಂದ ಹೊರಬರದ ಸ್ಥಿತಿ ಎದುರಾಗಿದೆ. ಇದರಿಂದಾಗಿ ರಕ್ತದಾನ ಮಾಡುವ ಮನಸ್ಸಿದ್ದರೂ ದಾನ ಮಾಡಲಾಗದೆ ರಕ್ತದ ಅಭಾವ ಎದುರಾಗಿದೆ ಎಂದರು.

ಇಂತಹ ಸ್ಥಿತಿಯಲ್ಲಿ ಆಸ್ಪತ್ರೆಗಳೂ ರಕ್ತ ಸಂಗ್ರಹದಲ್ಲಿ ಹಿಂದೆ ಬಿದ್ದಿವೆ. ರಕ್ತ ಪಡೆಯಲು ಆಸ್ಪತ್ರೆಗಳು ಸಹ ಯೋಚಿಸುವ ಸ್ಥಿತಿ ಬಂದಿದೆ. ನಮ್ಮ ದೇಶದಲ್ಲಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಆಪರೇಷನ್ ಸೇರಿದಂತೆ ವಿವಿಧ ರೋಗಿಗಳಿಗೆ 2.5 ಕೋಟಿ ಯೂನಿಟ್ ರಕ್ತದ ಅವಶ್ಯಕತೆ ಇದ್ದು, ಪ್ರತಿ ದಿನ ದಾನಿಗಳ ಸಂಖ್ಯೆ ಕೇವಲ 37 ಸಾವಿರದಷ್ಟಿದೆ. ರಕ್ತದ ಅಭಾವ ಸಾಮಾನ್ಯ ದಿನಗಳಲ್ಲೇ ಹೆಚ್ಚಾಗಿತ್ತು. ಇದೀಗ ಕೊರೋನದಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ರೋಗಿಗಳು ಜೀವನ್ಮರಣದ ಸ್ಥಿತಿಯಲ್ಲಿ ಕಾಲ ಕಳೆಯುತ್ತಿರುವುದು ದುರದೃಷ್ಟಕರ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News