ಹಿರಿಯ ಛಾಯಾಗ್ರಾಹಕ ಎಸ್.ಸಿ.ಶ್ರೀಕಾಂತ್ ನಿಧನ
ಬೆಂಗಳೂರು, ಮೇ 8: ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕ ಎಸ್.ವಿ. ಶ್ರೀಕಾಂತ್‌ಗುರುವಾರ ಸಂಜೆ ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಶ್ರೀಕಾಂತ್ 1960ರಿಂದ 40 ವರ್ಷಗಳ ಕಾಲ 60ಕ್ಕೂ ಅಧಿಕ ಚಲನಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ಈ ಪೈಕಿ ಡಾ.ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ಬಬ್ರುವಾಹನವೂ ಒಂದು. ಈ ಸಿನೆಮಾದಲ್ಲಿ ಅವರು ಬಳಸಿರುವ ಟ್ರಿಕ್ ಶಾಟ್ಸ್‌ಗಳು ಅದ್ಭುತವಾಗಿವೆ. ಗೆಜ್ಜೆ ಪೂಜೆ, ಉಪಾಸನೆ ಹಾಗೂ ಮಾರ್ಗದರ್ಶಿ ಚಿತ್ರಗಳ ಛಾಯಾಗ್ರಹಣ ಅವರಿಗೆ ರಾಜ್ಯ ಪ್ರಶಸ್ತಿಯನ್ನು ತಂದುಕೊಟ್ಟಿದೆ.
ಸ್ವರ್ಣ ಗೌರಿ, ಪ್ರೇಮಮಯಿ, ಮನಸಿದ್ದರೆ ಮಾರ್ಗ, ಬಹಾದ್ದೂರ್ ಗಂಡು, ನಾ ನಿನ್ನ ಬಿಡಲಾರೆ, ಹಣ್ಣಲೇ ಚಿಗುರಿದಾಗ, ಅದೇ ಕಣ್ಣು, ಶ್ರಾವಣ ಬಂತು, ರಾಣಿ ಮಹಾರಾಣಿ, ವಿಜಯ್ ವಿಕ್ರಮ್, ಎಡಕಲ್ಲು ಗುಡ್ಡದ ಮೇಲೆ ಶ್ರೀಕಾಂತ್ ಛಾಯಾಗ್ರಹಣದ ಕೆಲವು ಯಶಸ್ವಿ ಸಿನೆಮಾಗಳಾಗಿವೆ.
ಶ್ರೀಕಾಂತ್ ಅವರು ಪತ್ನಿ, ಪುತ್ರನ ಸಹಿತ ಅಪಾರ ಬಂಧುಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.