ಹೆಚ್ಚಿನ ಕೊರೋನ ರೋಗಿಗಳ ಸಾವಿಗೆ ವಿಟಮಿನ್ ಡಿ ಕೊರತೆ ಕಾರಣ?: ಬ್ರಿಟಿಶ್ ಸಂಶೋಧಕರ ಅಧ್ಯಯನ ವರದಿ

Update: 2020-05-10 17:25 GMT
ಸಾಂದರ್ಭಿಕ ಚಿತ್ರ

ಲಂಡನ್, ಮೇ 10: ವಿಟಮಿನ್ ಡಿ ಮತ್ತು ಕೊರೋನ ವೈರಸ್ ಸಾವಿನ ನಡುವೆ ಸಂಬಂಧವಿದೆ ಎನ್ನುವುದನ್ನು ಬ್ರಿಟಿಶ್ ಸಂಶೋಧಕರ ಅಧ್ಯಯನವೊಂದು ತಿಳಿಸಿದೆ. ವಿಟಮಿನ್ ಡಿ ಕೊರತೆಯಾದಂತೆ ಕೊರೋನ ವೈರಸ್ ಸೋಂಕು ಮತ್ತು ಸಾವಿನ ಪ್ರಮಾಣ ಹೆಚ್ಚುತ್ತದೆ ಎನ್ನುವುದು ಯುರೋಪ್‌ನ 20 ದೇಶಗಳಲ್ಲಿ ನಡೆಸಲಾಗಿರುವ ಅಧ್ಯಯನದಿಂದ ತಿಳಿದು ಬಂದಿದೆ.

ವಿಟಮಿನ್ ಡಿ ಕೊರತೆ ಮತ್ತು ಶ್ವಾಸಕೋಶದ ಸೋಂಕು ರೋಗಗಳ ನಡುವೆ ಸಂಬಂಧ ಇರುವುದನ್ನು ಈ ಹಿಂದಿನ ಅಧ್ಯಯನಗಳೂ ತಿಳಿಸಿದ್ದವು.

ಸರಾಸರಿ ವಿಟಮಿನ್ ಡಿ ಮಟ್ಟ ಮತ್ತು ಕೋವಿಡ್-19 ಸೋಂಕು ಪ್ರಕರಣಗಳು, ಅದರಲ್ಲೂ ಮುಖ್ಯವಾಗಿ ಕೋವಿಡ್-19 ಸಾವಿನ ನಡುವೆ ಗಮನಾರ್ಹ ಸಂಬಂಧ ಇರುವುದನ್ನು ಯುರೋಪ್‌ನ 20 ದೇಶಗಳಲ್ಲಿ ನಡೆಸಿದ ಅಧ್ಯಯನಗಳ ಮೂಲಕ ನಾವು ಕಂಡುಕೊಂಡಿದ್ದೇವೆ ಎಂದು ಬ್ರಿಟನ್‌ನ ಆ್ಯಂಗ್ಲಿಯ ರಸ್ಕಿನ್ ವಿಶ್ವವಿದ್ಯಾನಿಲಯದ ಅಧ್ಯಯನ ಸಂಶೋಧಕ ಡಾ. ಲೀ ಸ್ಮಿತ್ ಹೇಳಿದ್ದಾರೆ.

ಕೊರೋನ ವೈರಸ್‌ಗೆ ಬಿಳಿ ರಕ್ತಕಣಗಳ ಪ್ರತಿಕ್ರಿಯೆಯನ್ನು ವಿಟಮಿನ್ ಡಿ ನಿಯಂತ್ರಿಸುತ್ತದೆ ಹಾಗೂ ಅಧಿಕ ಪ್ರಮಾಣದಲ್ಲಿ ಬಾವುಕಾರಕ ಸೈಟೊಕೈನ್‌ಗಳು ಬಿಡುಗಡೆಯಾಗುವುದನ್ನು ತಡೆಯುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ನೂತನ-ಕೊರೋನ ವೈರಸ್ ಸೈಟೊಕೈನ್‌ಗಳು ಅಧಿಕ ಪ್ರಮಾಣದಲ್ಲಿ ಬಿಡುಗಡೆಯಾಗುವಂತೆ ಮಾಡುತ್ತದೆ ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News