ವೈರಸ್ ಇನ್ನೊಮ್ಮೆ ಹರಡುವ ಅಪಾಯ ಅಧಿಕ: ಡಬ್ಲ್ಯುಎಚ್‌ಒ

Update: 2020-05-12 19:10 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮೇ 12: ನೂತನ-ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಜಗತ್ತಿನಾದ್ಯಂತ ವಿಧಿಸಲಾಗಿರುವ ಬೀಗಮುದ್ರೆಯನ್ನು ತೆರವುಗೊಳಿಸಲು ಹಲವು ದೇಶಗಳು ಮುಂದಾಗಿರುವ ಹಿನ್ನೆಲೆಯಲ್ಲಿ, ಗರಿಷ್ಠ ಜಾಗರೂಕತೆಯಿಂದ ವ್ಯವಹರಿಸುವುದು ಅಗತ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸೋಮವಾರ ತಿಳಿಸಿದೆ. ಲಾಕ್‌ಡೌನ್ ಸಡಿಲಿಕೆ ಅವಧಿಯಲ್ಲಿ ಎರಡನೇ ಸುತ್ತಿನ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಅದು ಎಚ್ಚರಿಸಿದೆ.

ಬೀಗಮುದ್ರೆ ನಿರ್ಬಂಧಗಳನ್ನು ಸಡಿಲಿಸಲು ಜರ್ಮನಿಯು ಎಲ್ಲರಿಗಿಂತ ಮೊದಲು ಕ್ರಮಗಳನ್ನು ತೆಗೆದುಕೊಂಡಿತ್ತು. ಈಗ ಅಲ್ಲಿ ಹೊಸ ಕೊರೋನ ವೈರಸ್ ಸೋಂಕುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ವರದಿಗಳು ತಿಳಿಸಿವೆ. ಅದೇ ರೀತಿ, ಆರಂಭದಲ್ಲಿ ವೈರಸ್ ಹರಡುವಿಕೆಯನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದ್ದ ದಕ್ಷಿಣ ಕೊರಿಯದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.

ಬೀಗಮುದ್ರೆಗಳಿಂದ ಹೊರಬರಲು ಹೆಚ್ಚಿನ ದೇಶಗಳು ಮುಂದಾಗಿದ್ದು, ನಾವು ಕೊಂಚ ಭರವಸೆಯನ್ನು ಎದುರು ನೋಡುತ್ತಿದ್ದೇವೆ ಎಂದು ಡಬ್ಲ್ಯುಎಚ್‌ಒದ ತುರ್ತು ಪರಿಸ್ಥಿತಿ ಕಾರ್ಯಕ್ರಮದ ಮುಖ್ಯಸ್ಥ ಡಾ. ಮೈಖ್ ರಯಾನ್ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಆದರೆ ಗರಿಷ್ಠ ಎಚ್ಚರಿಕೆ ಅಗತ್ಯವಾಗಿದೆ ಎಂದರು.

ಸಾಂಕ್ರಾಮಿಕವು ಸಣ್ಣ ಮಟ್ಟದಲ್ಲಿ ಚಾಲ್ತಿಯಲ್ಲಿದ್ದರೆ ಹಾಗೂ ಇಡೀ ಸಮುದಾಯಗಳನ್ನೇ ಪರೀಕ್ಷೆಗೊಳಪಡಿಸುವ ಸಾಮರ್ಥ್ಯ ನಮ್ಮಲ್ಲಿಲ್ಲದಿದ್ದರೆ, ವೈರಸ್ ಮತ್ತೊಮ್ಮೆ ದಾಳಿ ನಡೆಸುವ ಅಪಾಯ ಯಾವತ್ತೂ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಬೀಗಮುದ್ರೆ ಸಡಿಲಿಕೆ ಸಂಕೀರ್ಣ ಕೆಲಸ: ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್

ಬೀಗಮುದ್ರೆ ನಿರ್ಬಂಧಗಳನ್ನು ತೆರವುಗೊಳಿಸುವುದು ಸಂಕೀರ್ಣ ಮತ್ತು ಕಷ್ಟದ ಕೆಲಸವಾಗಿದೆ ಹಾಗೂ ಜನರ ಪ್ರಾಣಗಳು ಮತ್ತು ಜೀವನೋಪಾಯಗಳನ್ನು ರಕ್ಷಿಸಲು ನಿಧಾನವಾಗಿ ಹಾಗೂ ಸ್ಥಿರವಾಗಿ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸುವುದು ಅಗತ್ಯವಾಗಿದೆ ಎಂದು ಇದೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದರು.

ಸಾಂಕ್ರಾಮಿಕಕ್ಕೆ ಲಸಿಕೆ ಸಿದ್ಧವಾಗುವವರೆಗೆ ವಿಷಯಗಳನ್ನು ಸಮಗ್ರವಾಗಿ ಗ್ರಹಿಹಿ ಕ್ರಮಗಳನ್ನು ತೆಗೆದುಕೊಳ್ಳುವುದು ವೈರಸನ್ನು ಮಣಿಸಲು ನಮ್ಮಲ್ಲಿ ಇರುವ ಅತ್ಯಂತ ಪರಿಣಾಮಕಾರಿ ಆಯುಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News