ವರ್ಕ್ ಫ್ರಮ್ ಹೋಮ್: ಸಿಬ್ಬಂದಿಗಳಿಗೆ ಎಸ್‌ಒಪಿ,ವರ್ಗೀಕೃತ ಕಡತಗಳ ನಿಯಮಗಳನ್ನು ರೂಪಿಸುತ್ತಿರುವ ಸರಕಾರ

Update: 2020-05-14 15:51 GMT

ಹೊಸದಿಲ್ಲಿ,ಮೇ 14: ಕೊರೋನ ಲಾಕ್‌ಡೌನ್ ಅವಧಿಯಲ್ಲಿ ಈಗಾಗಲೇ ಸರಕಾರಿ ಕಚೇರಿಗಳು ಮತ್ತು ಸಚಿವಾಲಯಗಳಲ್ಲಿ ಕೇವಲ ಶೇ.33ರಷ್ಟು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ಇತರರು ತಮ್ಮ ಮನೆಗಳಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಸರಕಾರಿ ಕಚೇರಿಗಳಲ್ಲಿ ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಕಾಯಂ ಆಗಿ ಬೇರೂರುವ ಸಾಧ್ಯತೆಗಳಿವೆ.

ಸರಕಾರವು ತನ್ನ 48.34 ಲಕ್ಷ ಉದ್ಯೋಗಿಗಳು ಮತ್ತು ಹಲವಾರು ಕಚೇರಿಗಳಿಗಾಗಿ ವರ್ಕ್ ಫ್ರಮ್ ಹೋಮ್‌ಗೆ ಸಂಬಂಧಿಸಿದ ನಿಯಮಗಳ ಕರಡು ಪ್ರಸ್ತಾವನೆ ಬಿಡುಗಡೆಗೊಳಿಸಿದೆ. ಸಮಾಲೋಚನೆ ಮತ್ತು ಮರುಮಾಹಿತಿಗಾಗಿ ಈ ಪ್ರಸಾವವಯನ್ನು ಎಲ್ಲ ಸಚಿವಾಲಯಗಳಿಗೆ ರವಾನಿಸಲಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಮಾರ್ಗಸೂಚಿಗಳು ಅಂತಿಮಗೊಳ್ಳುವ ನಿರೀಕ್ಷೆಯಿದೆ.

ಕೇಂದ್ರ ಸಚಿವಾಲಯವು ಎಲ್ಲ ಸಮಯದಲ್ಲಿಯೂ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ತನ್ನ ಕಚೇರಿಗಳಲ್ಲಿ ಪ್ರತ್ಯೇಕ ಪಾಳಿಗಳಲ್ಲಿ ಸಿಬ್ಬಂದಿಗಳ ಹಾಜರಾತಿ ಮತ್ತು ಬೇರೆ ಬೇರೆ ಕೆಲಸದ ಅವಧಿಗಳನ್ನು ಮುಂದುವರಿಸಲಿದೆ. ಹೀಗಾಗಿ ವರ್ಕ್ ಫ್ರಮ್ ಹೋಮ್ ಕಾರ್ಯವಿಧಾನಕ್ಕಾಗಿ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಅನ್ನು ರೂಪಿಸಲಾಗುತ್ತಿದೆ ಎಂದು ಸಿಬ್ಬಂದಿ ಸಚಿವಾಲಯವು ಟಿಪ್ಪಣಿಯಲ್ಲಿ ತಿಳಿಸಿದೆ.

ಎಲ್ಲ ಇಲಾಖೆಗಳು ಈ ಬಗ್ಗೆ ತಮ್ಮ ಸಲಹೆ-ಸೂಚನೆಗಳನ್ನು ಮೇ 21ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಲಾಕ್‌ಡೌನ್ ಅಂತ್ಯಗೊಂಡ ಬಳಿಕವೂ ವರ್ಕ್ ಫ್ರಮ್ ಹೋಮ್ ಅನ್ನು ಮುಂದುವರಿಸಲು ಹಾಗೂ ತಮ್ಮ ಮನೆಗಳಿಂದ ಆನ್‌ಲೈನ್‌ನಲ್ಲಿ ಸರಕಾರಿ ಕಡತಗಳನ್ನು ಪ್ರವೇಶಿಸುವಾಗ ಜನರ ಸುರಕ್ಷತೆ ಮತ್ತು ಮಾಹಿತಿ ಗೋಪ್ಯತೆನ್ನು ಕಾಯ್ದುಕೊಳ್ಳಲು ವ್ಯಾಪಕ ಮಾರ್ಗಸೂಚಿಯು ಮುಖ್ಯವಾಗಿದೆ ಎಂದು ಕರಡು ಪ್ರಸ್ತಾವವಯಲ್ಲಿ ಹೇಳಲಾಗಿದೆ.

  ಪರಿಷ್ಕೃತ ಎಸ್‌ಒಪಿಗಳಂತೆ ಮನೆಗಳಿಂದಲೇ ಕೆಲಸವನ್ನು ನಿರ್ವಹಿಸುವ ಸರಕಾರಿ ಉದ್ಯೋಗಿಗಳಿಗೆ ಸಂಬಂಧಿತ ಸಚಿವಾಲಯಗಳು ಅಥವಾ ಇಲಾಖೆಗಳು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ಗಳ ರೂಪದಲ್ಲಿ ಎಲ್ಲ ಬೆಂಬಲಗಳನ್ನು ಒದಗಿಸಬೇಕು ಮತ್ತು ಎಲ್ಲ ಸರಕಾರಿ ಕಾರ್ಯಗಳು ಈ ಯಂತ್ರಗಳ ಮೂಲಕವೇ ನಡೆಯಬೇಕು. ಮನೆಗಳಿಂದ ಕೆಲಸ ಮಾಡುವಾಗ ಉದ್ಯೋಗಿಗಳ ಡಾಟಾ ವೆಚ್ಚವನ್ನು ಮರುಪಾವತಿಸಲಾಗುವುದು ಎಂದೂ ಅದು ತಿಳಿಸಿದೆ. ಆದರೆ ಗೃಹಸಚಿವಾಲಯದ ಆದೇಶದಂತೆ ವರ್ಗೀಕೃತ ದಾಖಲೆಗಳು/ಕಡತಗಳನ್ನು ಮನೆಗಳಿಂದ ನಿರ್ವಹಿಸುವಂತಿಲ್ಲ.

ಎಲ್ಲ ವರ್ಕ್ ಫ್ರಮ್ ಕಂಪ್ಯೂಟರ್‌ಗಳು ಮಾಲ್‌ವೇರ್ ಮತ್ತು ದುರುದ್ದೇಶಪೂರ್ಣ ವೆಬ್‌ಸೈಟ್‌ಗಳ ವಿರುದ್ಧ ರಕ್ಷಣೆ ಹೊಂದಿರುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್(ಎನ್‌ಐಸಿ)ಗೆ ವಹಿಸಲಾಗಿದೆ. ಮನೆಯಿಂದ ಕೆಲಸ ಮಾಡುವಾಗ ಮುಖ್ಯ ಸಭೆಗಳನ್ನು ನಡೆಸಲು ವೀಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ಒದಗಿಸುವಂತೆಯೂ ಎನ್‌ಐಸಿಗೆ ಸೂಚಿಸಲಾಗಿದೆ.

ಸದ್ಯ ಸುಮಾರು 75 ಸಚಿವಾಲಯಗಳು/ಇಲಾಖೆಗಳು ಇ-ಆಫೀಸ್ ಸೌಲಭ್ಯಗಳನ್ನು ಬಳಸುತ್ತಿದ್ದು,ಈ ಪೈಕಿ ಶೇ.57ರಷ್ಟು ಕಚೇರಿಗಳು ತಮ್ಮ ಶೇ.80ರಷ್ಟು ಕೆಲಸಗಳನ್ನು ಆನ್‌ಲೈನ್‌ನಲ್ಲಿ ನಿರ್ವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News