ಅನಿವಾಸಿ ಕನ್ನಡಿಗರ ಕುರಿತು ಕರ್ನಾಟಕ ಸರಕಾರ ಅಸಡ್ಡೆ: ಇಂಡಿಯನ್ ಸೋಶಿಯಲ್ ಫೋರಂ ಖಂಡನೆ

Update: 2020-05-15 03:26 GMT

ದಮ್ಮಾಮ್, ಮೇ 15: ವಿದೇಶದಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರನ್ನು ಕರೆದೊಯ್ಯುವುದಕ್ಕಾಗಿ ಭಾರತ ಸರಕಾರ ಆರಂಭಿಸಿದ 'ವಂದೇ ಭಾರತ್ ಮಿಶನ್' ಕಾರ್ಯಾಚರಣೆಯ ಭಾಗವಾಗಿ ನೆರೆಯ ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಅನಿವಾಸಿಗರನ್ನು ಸೌದಿ ಅರೇಬಿಯಾದಿಂದ ಕರೆದೊಯ್ಯಲಾಗುತ್ತಿದೆ. ಆದರೆ ಕರ್ನಾಟಕ ಸರಕಾರ ಈ ಕುರಿತು ಯಾವುದೇ ಕ್ರಮವನ್ನು ಇದುವರೆಗೆ ಆರಂಭಿಸದಿರುವುದು ಅನಿವಾಸಿ ಕನ್ನಡಿಗರ ಕುರಿತು ಅದಕ್ಕಿರುವ ಅಸಡ್ಡೆ ಮತ್ತು ತಿರಸ್ಕಾರದ ಮನೋಭಾವವನ್ನು ತೋರಿಸುತ್ತದೆ ಎಂದು ಇಂಡಿಯನ್ ಸೋಶಿಯಲ್ ಫೋರಂ ಸೌದಿ ಅರೇಬಿಯಾ ಹೇಳಿದೆ.

ಲಾಕ್ ಡೌನ್ ನಿಂದಾಗಿ ಆರೋಗ್ಯ ವಿಮೆ ಹೊಂದಿರದ ಗರ್ಭಿಣಿಯರು, ಹಿರಿಯ ನಾಗರಿಕರು, ಉದ್ಯೋಗ ಕಳೆದುಕೊಂಡ ಕಾರ್ಮಿಕರು ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ಕೇರಳದಂತಹ ರಾಜ್ಯಗಳು ಇಂತಹವರನ್ನು ಕರೆಸಿಕೊಳ್ಳಲು ಈಗಾಗಲೇ ವಿಮಾನ ಸೇವೆಯನ್ನು ಆರಂಭಿಸಿದೆ. ಆದರೆ ಕರ್ನಾಟಕ ಇದುವರೆಗೂ  ವಿಮಾನ ವ್ಯವಸ್ಥೆ ಆರಂಭಿಸದಿರುವುದು ದುರದೃಷ್ಟಕರ. ಕರ್ನಾಟಕದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರಗಳಿಗೆ ಅತ್ಯುತ್ತಮ ಕೊಡುಗೆಯನ್ನು ನೀಡುತ್ತಾ ಬಂದಿರುವ ಅನಿವಾಸಿ ಕನ್ನಡಿಗರನ್ನು ಸರಕಾರ ಅವರ ಸಂಕಷ್ಟದ ಸಮಯದಲ್ಲಿ ಕಡೆಗಣಿಸುತ್ತಿರುವುದು ಖಂಡನೀಯ ಎಂದು ಇಂಡಿಯನ್ ಸೋಶಿಯಲ್ ಫೋರಂ, ದಮ್ಮಾಮ್, ಕರ್ನಾಟಕ ಇದರ ರಾಜ್ಯಾಧ್ಯಕ್ಷ ಮುಹಮ್ಮದ್ ಶರೀಫ಼್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರಕಾರವು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕನ್ನಡಿಗರನ್ನು ಕರೆದೊಯ್ಯಲು ಏರ್ಪಾಡು ಮಾಡಿದ್ದರೂ ಇದಕ್ಕಾಗಿ ಕೇವಲ ಎರಡು ವಿಮಾನಗಳನ್ನಷ್ಟೇ ಹಾರಾಟ ನಡೆಸಲು  ನಿರ್ಧರಿಸಿದೆಯೆಂಬ ಮಾಹಿತಿಗಳು ಲಭಿಸಿವೆ. ಸುಮಾರು 2.5 ಲಕ್ಷದಷ್ಟು ಕನ್ನಡಿಗರು ಸೌದಿ ಅರೇಬಿಯಾದಲ್ಲಿದ್ದು ಅವರಲ್ಲಿ ಹೆಚ್ಚಿನವರು ದಕ್ಷಿಣ ಕರ್ನಾಟಕ ಭಾಗದವರು. ಆದರೂ ಕರ್ನಾಟಕ ಸರಕಾರ ಕಾಟಾಚಾರಕ್ಕಾಗಿ ಮಂಗಳೂರಿನಿಂದ ಕೇವಲ ಎರಡು ವಿಮಾನ ಏರ್ಪಾಡು ಮಾಡಲು ಮುಂದಾಗಿದೆ ಎನ್ನಲಾಗಿದೆ. ಉಳಿದವರು ಕೇರಳದ ಮೂಲಕ ಬರುವಂತೆ ಸಲಹೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಅತ್ಯಂತ ಖೇದಕರ. ರಾಯಭಾರಿ ಕಚೇರಿಯು ತನ್ನ ವೆಬ್ ಸೈಟ್ ನಲ್ಲಿ ನೋಂದಣಿಗೊಂಡ ಆಯಾ ರಾಜ್ಯಗಳ ಸರಕಾರದ ಜನರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದರಿಂದ ಕನ್ನಡಿಗರು ವಂಚಿತರಾಗಲಿದ್ದಾರೆ ಎಂದು ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ.

  ಈಗಾಗಲೇ ರಾಯಭಾರಿ ಕಚೇರಿಯ ವೆಬ್ ಸೈಟ್ ಗಳಲ್ಲಿ ನೋಂದಾಯಿಸಿಕೊಂಡಿರುವ ಗರ್ಭಿಣಿಯರು, ಚಿಕಿತ್ಸೆಗಾಗಿ ಹೊರಟು ನಿಂತವರು, ವಿಸಿಟಿಂಗ್ ವಿಸಾಗಳಲ್ಲಿ ಬಂದ ಹಿರಿಯರು ಮತ್ತು ಉದ್ಯೋಗ ಕಳೆದುಕೊಂಡ ಕಾರ್ಮಿಕರು ಸರಕಾರ ವಿಮಾನ ಯಾನ ಪ್ರಾರಂಭಿಸುವುದನ್ನು ಕಾಯುತ್ತಿದ್ದಾರೆ. ನೆರೆಯ ಕೇರಳ ಸರಕಾರ ಈಗಾಗಲೇ ಸೌದಿ ಅರೇಬಿಯಾದಿಂದ ಅನಿವಾಸಿಗಳನ್ನು ಕರೆಸಿಕೊಳ್ಳುವ ಕಾರ್ಯಾಚರಣೆಯನ್ನು ಆರಂಭಿಸಿದ್ದು ಅವರಿಗೆ ಸರಳ ಮತ್ತು ಉತ್ತಮ ಕ್ವಾರಂಟೈನ್ ವ್ಯವಸ್ಥೆಯನ್ನು ಒದಗಿಸುತ್ತಿದೆ. ಕರ್ನಾಟಕ ಸರಕಾರ ಕೂಡಲೇ ಮಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಿಗೆ ವಿಮಾನ ವ್ಯವಸ್ಥೆ ಆರಂಭಿಸಬೇಕು‌. ರಾಯಭಾರಿ ಕಚೇರಿ ವೆಬ್ ಸೈಟ್ ನಲ್ಲಿ ನೋಂದಣಿಯಾದ ಸಂಖ್ಯೆಯ ಆಧಾರದಲ್ಲಿ ಮಂಗಳೂರಿಗೆ ಸಾಕಷ್ಟು  ವಿಮಾನಗಳನ್ನು ಏರ್ಪಾಡು ಮಾಡಬೇಕು ಎಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News