ಹಾಕಿ ಆಟಗಾರರಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯಗೊಳಿಸಿದ ಹಾಕಿ ಇಂಡಿಯಾ

Update: 2020-05-15 05:14 GMT

ಹೊಸದಿಲ್ಲಿ, ಮೇ 14: ಟೂರ್ನಮೆಂಟ್‌ಗಳಿಗೆ ಅರ್ಹತೆ ಪಡೆಯಬೇಕಾದರೆ ಭಾರತದ ಹಾಕಿ ಆಟಗಾರರು ಮೊದಲಿಗೆ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್ ಅಳವಡಿಸಿಕೊಳ್ಳಬೇಕು. ಗೌಪ್ಯತೆಗೆ ಸಂಬಂಧಿಸಿದ ವಿಚಾರಗಳ ಪರಿಶೀಲನೆಗೆ ಒಳಪಟ್ಟಿರುವ ಸರಕಾರದ ಕೋವಿಡ್-19 ಸಾಧನವನ್ನು ಎಲ್ಲ ಆಟಗಾರರು ಹಾಗೂ ತನ್ನ ಸದಸ್ಯ ಸಂಸ್ಥೆಗಳ ಎಲ್ಲ ಸಿಬ್ಬಂದಿ ಡೌನ್‌ಲೋಡ್ ಮಾಡಿಕೊಳ್ಳುವುದನ್ನು ಕ್ರೀಡಾ ಆಡಳಿತ ಮಂಡಳಿ ಹಾಕಿ ಇಂಡಿಯಾ ಕಡ್ಡಾಯಗೊಳಿಸಿದೆ. ಭಾಗವಹಿಸುವವರ ಆರೋಗ್ಯ ಸ್ಥಿತಿಗತಿ ತಪಾಸಣೆ ನಡೆಸಲು ಆ್ಯಪ್‌ನ್ನು ಬಳಸಲಾಗುತ್ತದೆ. ಯಾರೆಲ್ಲ ‘ಸುರಕ್ಷಿತ’ ಅಥವಾ ‘ಕಡಿಮೆ ಅಪಾಯದಲ್ಲಿ’ ಇರುತ್ತಾರೋ ಅವರಿಗೆ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದು ರಾಜ್ಯ ಹಾಕಿ ಘಟಕಗಳಿಗೆ ಹಾಕಿ ಇಂಡಿಯಾ ಕಳುಹಿಸಿಕೊಟ್ಟಿರುವ 20 ಪುಟಗಳ ಮಾರ್ಗಸೂಚಿಗಳಲ್ಲಿ ತಿಳಿಸಿದೆ.

‘‘ಮುಂಬರುವ ಟೂರ್ನಿಗಳಿಗೆ ತೆರಳುವ ಮೊದಲು ಎಲ್ಲ ಆಟಗಾರರು ಹಾಗೂ ಸಿಬ್ಬಂದಿ ‘ಆರೋಗ್ಯ ಸೇತು’ವಿನಲ್ಲಿ ತಮ್ಮ ಸ್ಥಿತಿಗತಿ ಪರಿಶೀಲಿಸಬೇಕು. ಆ್ಯಪ್‌ನಲ್ಲಿ ‘ಸುರಕ್ಷಿತ’ ಅಥವಾ ‘ಕಡಿಮೆ ಅಪಾಯ’ಎಂದು ಕಂಡುಬಂದರೆ ಮಾತ್ರ ಅವರಿಗೆ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಬ್ಲೂಟೂತ್ ಸಾಮೀಪ್ಯದ ಆಧಾರದ ಮೇಲೆ ವ್ಯಕ್ತಿಯು ‘ಮಧ್ಯಮ’ ಹಾಗೂ ‘ಹೆಚ್ಚಿನ ಅಪಾಯ’ ಹೊಂದಿದ್ದಾನೆ ಎಂಬ ಸಂದೇಶವನ್ನು ಅಪ್ಲಿಕೇಶನ್‌ನಲ್ಲಿ ತೋರಿಸಿದರೆ, ಅವನು/ಅವಳು ಈವೆಂಟ್‌ಗೆ ಹಾಜರಾಗಲು ಪ್ರಯಾಣಿಸಬಾರದು ಎಂದು ಸದಸ್ಯ ಘಟಕಗಳಿಗೆ ಸೂಚಿಸಲಾಗುತ್ತದೆ’’ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News