ಕುರಿ, ಮೇಕೆ ಸಾಕಾಣಿಕೆದಾರರಿಗೆ 5 ಸಾವಿರ ರೂ. ಪರಿಹಾರ: ಸಚಿವ ಬಿ.ಎ.ಬಸವರಾಜ

Update: 2020-05-15 11:27 GMT

ಬೆಂಗಳೂರು, ಮೇ 15: ನೈಸರ್ಗಿಕ ವಿಕೋಪ ಮತ್ತು ಅಪಘಾತದಲ್ಲಿ ಮೃತಪಡುವ ಕುರಿ, ಮೇಕೆ, ಆಡುಗಳಿಗೆ ಪರಿಹಾರಾರ್ಥವಾಗಿ ಅದರ ಸಾಕಾಣಿಕೆದಾರರಿಗೆ ರಾಜ್ಯ ಸರಕಾರ ತಲಾ 5 ಸಾವಿರ ರೂ.ಗಳನ್ನು ನೀಡುವ ಆದೇಶವನ್ನು ಮುಂದುವರೆಸಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ತಿಳಿಸಿದ್ದಾರೆ.

ಕೊರೋನ ವೈರಸ್ ತಡೆಗಟ್ಟಲು ಲಾಕ್‍ಡೌನ್ ಪರಿಣಾಮದಿಂದಾಗಿ ಸಂಕಷ್ಟ ಎದುರಿಸುತ್ತಿರುವವರಿಗೆ ನೆರವು ಮುಂದುವರೆಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಹಲವು ಪ್ಯಾಕೇಜ್ ಘೋಷಣೆ ಮಾಡಿದರು ಎಂದು ಅವರು ಹೇಳಿದ್ದಾರೆ.

ಅದರಲ್ಲೂ ಕುರಿ ಸಾಕಾಣಿಕೆದಾರರಿಗೆ ಈ ಹಿಂದೆ ರಾಜ್ಯ ಸರಕಾರ ನೈಸರ್ಗಿಕ ವಿಕೋಪ, ಅಪಘಾತ ಹಾಗೂ ಕೆಲ ರೋಗಗಳಿಗೆ ತುತ್ತಾಗಿ ಅಕಾಲಿಕವಾಗಿ ಮೃತಪಡುವ ಕುರಿ, ಮೇಕೆ, ಆಡುಗಳಿಗೆ ನೀಡುತ್ತಿದ್ದ ತಲಾ 5 ಸಾವಿರ ರೂ.ಗಳ ಪರಿಹಾರವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಬಸವರಾಜ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕುರಿ ಸಾಕಾಣಿಕೆದಾರರ, ರೈತರ ಸಂಕಷ್ಟವನ್ನು ಮುಖ್ಯಮಂತ್ರಿಗೆ ವಿವರಿಸಿ, ಅವರ ಹಿತದೃಷ್ಟಿಯಿಂದ ಪರಿಹಾರ ಮುಂದುವರೆಸಬೇಕೆಂದು ಮನವಿ ಮಾಡಲಾಗಿತ್ತು. ಇಂದು ಕುರಿ ಸಾಕಾಣಿಕೆದಾರರಿಗೆ ಪರಿಹಾರ ಮುಂದುವರೆಸುವುದಾಗಿ ಮುಖ್ಯಮಂತ್ರಿ ಪ್ರಕಟಿಸಿರುವುದಕ್ಕೆ ಅವರಿಗೆ ಬಸವರಾಜ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News