ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆ: ನ್ಯೂಝಿಲೆಂಡ್ ಪ್ರಧಾನಿಗೇ ಪ್ರವೇಶ ನಿರಾಕರಿಸಿದ ಕೆಫೆ!

Update: 2020-05-17 03:51 GMT

ವೆಲ್ಲಿಂಗ್ಟನ್, ಮೇ 17: ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆಗೆ ಮುಂದಾದ ಕೆಫೆಯೊಂದು ನ್ಯೂಝಿಲೆಂಡ್ ಪ್ರಧಾನಿಗೇ ಪ್ರವೇಶ ನಿರಾಕರಿಸಿದ ಸ್ವಾರಸ್ಯಕರ ಪ್ರಸಂಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೊರೋನ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಯಮ ಜಾರಿಯಲ್ಲಿದ್ದು, ನ್ಯೂಝಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಶನಿವಾರ ಕೆಫೆಯೊಂದರ ಬಳಿಗೆ ಹೋದಾಗ, ಕೆಫೆ ಭರ್ತಿಯಾಗಿದೆ ಎಂಬ ಕಾರಣಕ್ಕೆ ಅವರನ್ನು ವಾಪಸ್ ಕಳುಹಿಸಲಾಯಿತು ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಈ ಸ್ವಾರಸ್ಯಕರ ಘಟನೆಯ ವಿವರ ನೀಡಿದ್ದಾರೆ.

ಆರ್ಡೆರ್ನ್ ತಮ್ಮ ಸಂಗಾತಿ ಕ್ಲರ್ಕ್ ಗೇಫೋರ್ಡ್ ಜತೆಗೆ ಓಲಿವ್ ಕೆಫೆಗೆ ಬಂದಿದ್ದರು. ಆದರೆ ಕೆಫೆ ಭರ್ತಿಯಾದ ಕಾರಣಕ್ಕೆ ಅವರಿಗೆ ಪ್ರವೇಶ ನಿರಾಕರಿಸಲಾಯಿತು

ಗೇಫೋರ್ಡ್ ಇದನ್ನು ದೃಢಪಡಿಸಿದ್ದಾರೆ. ಇದು ನನ್ನಿಂದಲೇ ಆದ ತಪ್ಪು; ಕುಟುಂಬದ ಜತೆ ಊಟಕ್ಕೆ ಬೇರೆಲ್ಲೂ ಸ್ಥಳ ಕಾಯ್ದಿರಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಅವರು ಹೊರಹೋಗುತ್ತಿರುವುದನ್ನು ಗಮನಿಸಿದ ಕೆಫೆ ವ್ಯಕ್ತಿ, ಸ್ಥಳಾವಕಾಶ ಮಾಡಿಕೊಟ್ಟು ಊಟಕ್ಕೆ ಅನುವು ಮಾಡಿಕೊಟ್ಟರು.

ಕೊರೋನ ವೈರಸ್ ಸೋಂಕನ್ನು ಯಶಸ್ವಿಯಾಗಿ ಎದುರಿಸಿದ್ದಕ್ಕಾಗಿ ನ್ಯೂಝಿಲೆಂಡ್ ಪ್ರಧಾನಿಗೆ ವಿಶ್ವದ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿಶ್ವದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿರುವ ಈ ಸೋಂಕು ನ್ಯೂಝಿಲೆಂಡ್‌ನಲ್ಲಿ ಕೇವಲ 1,500 ಮಂದಿಯನ್ನು ಬಾಧಿಸಿದೆ. ಈ ಪೈಕಿ 1,400 ಮಂದಿ ಈಗಾಗಲೇ ಸಂಪೂರ್ಣ ಗುಣಮುಖರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News