ಬಡವರಿಗೆ ನೆರವಾಗುವ ಮೂಲಕ ಈದ್ ಆಚರಿಸೋಣ: ಝಮೀರ್ ಅಹ್ಮದ್ ಖಾನ್

Update: 2020-05-18 17:19 GMT

ಬೆಂಗಳೂರು, ಮೇ 18: ಕೋವಿಡ್-19 ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಪ್ರತಿಯೊಬ್ಬರೂ ಸಂಕಷ್ಟದಲ್ಲಿದ್ದಾರೆ. ಹಲವಾರು ಮಂದಿ ಬಡವರು, ನಿರ್ಗತಿಕರು ಊಟಕ್ಕೂ ಪರದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವೆಲ್ಲರೂ ಬಡವರಿಗೆ ನೆರವಾಗುವ ಮೂಲಕ ಈದ್ ಆಚರಿಸೋಣ ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಕರೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಈದ್ ನಮಾಝ್ ಮಸೀದಿ ಅಥವಾ ಈದ್ಗಾದಲ್ಲಿ ನೆರವೇರಿಸುತ್ತಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿಯೆ ನಮಾಝ್ ನಿರ್ವಹಿಸಿಕೊಳ್ಳುವಂತೆ ಉಲಮಾಗಳು ತೀರ್ಮಾನಿಸಿ, ನಿರ್ದೇಶನ ನೀಡಿದ್ದಾರೆ ಎಂದರು.

ದಿನಗೂಲಿ ನೌಕರರು, ಆಟೋ ಚಾಲಕರು, ಕೂಲಿ ಕಾರ್ಮಿಕರು ಪ್ರತಿದಿನ ದುಡಿದರೆ ಮಾತ್ರ ಅವರ ಕುಟುಂಬ ಒಂದು ಹೊತ್ತಿನ ಊಟ ಮಾಡಲು ಸಾಧ್ಯವಾಗುತ್ತದೆ. ಇಂತಹ ಸಂಕಷ್ಟದಲ್ಲಿರುವವರನ್ನು ಗುರುತಿಸಿ ನಾವು ನೆರವು ನೀಡೋಣ. ಈದ್ಗಾದಲ್ಲಿ ನಮಗೆ ನಮಾಝ್ ನಿರ್ವಹಿಸಲು ಅವಕಾಶವಿಲ್ಲದೆ ಇದ್ದಾಗ ಹೊಸಬಟ್ಟೆಗಳನ್ನು ತೊಟ್ಟು ಸಂಭ್ರಮಿಸುವುದಾದರೂ ಏಕೆ? ಬಟ್ಟೆಗಳಿಗೆ ಖರ್ಚು ಮಾಡುವ ಹಣವನ್ನೆ ನಮ್ಮ ನೆರೆಹೊರೆಯಲ್ಲಿರುವ ಬಡವರಿಗೆ ಹಂಚಿ ಸಂಭ್ರಮಿಸೋಣ ಎಂದು ಅವರು ಹೇಳಿದರು.

ಸೌದಿ ಅರೇಬಿಯಾದಲ್ಲಿಯೂ ಈದ್ ನಮಾಝ್ ಅನ್ನು ಮನೆಗಳಲ್ಲಿ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ನಮ್ಮ ದೇಶದಲ್ಲಿ ಲಾಕ್‍ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಆದರೆ, ಸೌದಿ ಅರೇಬಿಯಾದಲ್ಲಿ ಮೇ 20 ರಿಂದ 26ರವರೆಗೆ ಕರ್ಫ್ಯೂ ಘೋಷಿಸಲಾಗಿದ್ದು, ಯಾರಾದರೂ ಮನೆಗಳಿಂದ ಹೊರಗೆ ಬಂದರೆ ಭಾರತೀಯ ರೂಪಾಯಿ ಮೌಲ್ಯದ 2 ಲಕ್ಷ ರೂ.ದಂಡ ವಿಧಿಸಲಾಗುತ್ತದೆ ಎಂದು ಅವರು ಹೇಳಿದರು.

ವಾಣಿವಿಲಾಸ್ ಆಸ್ಪತ್ರೆ ಕಾರ್ಯಾರಂಭ: ಪಾದರಾಯನಪುರದ ಕೋವಿಡ್-19 ಸೋಂಕಿತ ಗರ್ಭಿಣಿ ಮಹಿಳೆಯೊಬ್ಬರು ಹೆರಿಗೆಗಾಗಿ ಭೇಟಿ ನೀಡಿದ್ದ ಕಾರಣಕ್ಕಾಗಿ ಸೀಲ್‍ಡೌನ್ ಮಾಡಲಾಗಿದ್ದ ವಾಣಿವಿಲಾಸ್ ಆಸ್ಪತ್ರೆ ಹಾಗೂ ಸಿರ್ಸಿ ವೃತ್ತದಲ್ಲಿರುವ ಕಲ್ಲಿನ ಕಟ್ಟಡದಲ್ಲಿರುವ ಆರೋಗ್ಯ ಕೇಂದ್ರ ಪುನಃ ಕಾರ್ಯಾರಂಭ ಮಾಡಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ನನ್ನ ಕ್ಷೇತ್ರದ ತುಂಬು ಗರ್ಭಿಣಿಯೊಬ್ಬರು ಮೇ 12ರಂದು ಹೆರಿಗೆಗಾಗಿ ವಾಣಿವಿಲಾಸ್ ಆಸ್ಪತ್ರೆಗೆ ಹೋಗಿದ್ದಾಗ ಆಸ್ಪತ್ರೆ ಸೀಲ್ ಮಾಡಿದ್ದರಿಂದ ಆಕೆಯನ್ನು ಭರ್ತಿ ಮಾಡಿಕೊಳ್ಳದೆ, ಕೊರೋನ ಪರೀಕ್ಷೆಯ ಪ್ರಮಾಣಪತ್ರ ತರುವಂತೆ ಹೇಳಿ ವಾಪಸ್ ಕಳುಹಿಸಿದ್ದಾರೆ. ಆನಂತರ ಅವರು ಬೇರೆ ಬೇರೆ ಆಸ್ಪತ್ರೆಗಳಿಗೆ ಹೋಗಿದ್ದಾರೆ. ಪಾದರಾಯನಪುರ ಕಂಟೈನ್ಮೆಂಟ್ ಝೋನ್ ಆಗಿರುವ ಕಾರಣಕ್ಕಾಗಿ ಯಾರೊಬ್ಬರೂ ಆಕೆಯನ್ನು ಭರ್ತಿ ಮಾಡಿಕೊಳ್ಳಲಿಲ್ಲ. ಅಂತಿಮವಾಗಿ ಆಟೋದಲ್ಲೆ ಆಕೆಗೆ ಹೆರಿಗೆ ಆಗಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಕೊರೋನ ಲಾಕ್‍ಡೌನ್ ಜಾರಿಯಾದ ದಿನದಿಂದ ವಾಣಿವಿಲಾಸ್ ಆಸ್ಪತ್ರೆಯಲ್ಲಿ 1326 ಹೆರಿಗೆಗಳು ಆಗಿವೆ. ಪ್ರತಿದಿನ ಸರಾಸರಿ 60-70 ಹೆರಿಗೆಗಳು ಆಗಿವೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಂಟಿ ಆಯುಕ್ತರೊಂದಿಗೆ ಸಭೆ ಮಾಡಿ, ಬಡವರಿಗೆ ಯಾವುದೆ ಕಾರಣಕ್ಕೂ ಹೊರಗೆ ಕಳುಹಿಸದೆ ಪಿಪಿಇ ಕಿಟ್‍ಗಳನ್ನು ತೊಟ್ಟು ಹೆರಿಗೆ ಮಾಡಿಸುವಂತೆ ವೈದ್ಯರಿಗೆ ನಿರ್ದೇಶನ ನೀಡಿದೆ. ಈಗ ಪುನಃ ವಾಣಿವಿಲಾಸ್ ಆಸ್ಪತ್ರೆ ಹಾಗೂ ಕಲ್ಲಿನ ಕಟ್ಟಡದ ಆರೋಗ್ಯ ಕೇಂದ್ರ ಆರಂಭವಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News