ಬೆಂಗಳೂರಿನಲ್ಲಿ ಮಳೆ ಹಾನಿಗೆ ಮೇಯರ್-ಆಯುಕ್ತರು ನೇರ ಹೊಣೆ: ಆಮ್ ಆದ್ಮಿ ಪಕ್ಷ

Update: 2020-05-18 17:22 GMT

ಬೆಂಗಳೂರು, ಮೇ 18: ಕೊರೋನ ಮಹಾ ಭೀತಿಯ ಪರಿಹಾರ ಕಾರ್ಯಗಳಲ್ಲಿ ಮಗ್ನರಾಗಿ ಮುಂಬರುವ ಮುಂಗಾರಿನಿಂದ ಬೆಂಗಳೂರಿನ ಹಲವು ಭಾಗಗಳು ಹಾನಿಯಾಗಿ ಸಾವು ನೋವುಗಳು ಸಂಭವಿಸುವ ಮುನ್ನೆಚ್ಚರಿಕೆ ಗೊತ್ತಿದ್ದರೂ ಬಿಬಿಎಂಪಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೂನ್ 4 ರಿಂದ  ಮುಂಗಾರು  ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೂ ಕೇವಲ ವಿಪತ್ತು ನಿರ್ವಹಣಾ ಪಡೆಯನ್ನು ಸ್ಥಾಪಿಸಿ, ಕೈಚೆಲ್ಲಿ ಕುಳಿತಿರುವ ಬಿಬಿಎಂಪಿಯಿಂದ ಸರ್ಮರ್ಥ ಆಡಳಿತ ನಿರ್ವಹಣೆ ಇದುವರೆವಿಗೂ ಸಾಧ್ಯವಾಗಿಲ್ಲ ಎಂದು ಅವರು ದೂರಿದ್ದಾರೆ.

ನಗರದಲ್ಲಿ ಮಳೆಯಿಂದ ಹಾನಿಗೆ ಒಳಗಾಗುವ ಸುಮಾರು 211 ತಗ್ಗು ಪ್ರದೇಶಗಳಿವೆ ಎಂಬುದು ಒಂದು ಲೆಕ್ಕಾಚಾರವಾದರೆ ಒಂದು ಸಮೀಕ್ಷೆಯ ಪ್ರಕಾರ ಸುಮಾರು 517 ತಗ್ಗು ಪ್ರದೇಶಗಳಿದ್ದು ಪ್ರತಿ ವರ್ಷ ಮಳೆಗಾಲದಲ್ಲಿ ಕಿರಿಕಿರಿ ಅನುಭವಿಸುತ್ತಲೇ ಇವೆ. ಮನೆ ಮುಳುಗಡೆ, ಮನೆ ಕುಸಿತ, ರಸ್ತೆ ಕುಸಿತ, ನೀರು ನುಗ್ಗುವುದು ಹೀಗೆ ನೂರಾರು ತೊಂದರೆಗಳು ಇದ್ದರು ಬಿಬಿಎಂಪಿ ಎನ್ನುವ ಬೃಹತ್ ಭ್ರಷ್ಟಾಚಾರ ಸಂಸ್ಥೆ ಯುದ್ದ ಕಾಲದಲ್ಲಿ ಮತ್ತೆ ಶಸ್ತ್ರಾಭ್ಯಾಸ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಕಾಲರ ರೋಗ ವ್ಯಾಪಕವಾಗಿ ಎಲ್ಲ ಕಡೆ ಹಬ್ಬುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಮಳೆ ನೀರಿನಿಂದ ಉಂಟಾಗುವ ಅವಘಡ ಗಂಭೀರ ಸ್ವರೂಪ ಪಡೆದರೆ ಹರಡಬಹುದಾದ ಸಾಂಕ್ರಮಿಕ ರೋಗಗಳಿಂದ ಜನ ಇನ್ನಷ್ಟು ಬಳಲಬೇಕಾಗುತ್ತದೆ. ಕಳೆದ ವರ್ಷ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಸುಮಾರು 1,380 ಕೋಟಿ ರೂ.ಗಳಷ್ಟು ಬೆಂಗಳೂರು ನಗರ ಒಂದರಲ್ಲೆ ನಷ್ಟ ಉಂಟಾಗಿತ್ತು ಎಂದು ಮೋಹನ್ ದಾಸರಿ ತಿಳಿಸಿದ್ದಾರೆ.

ಇಷ್ಟಾದರೂ ಎಚ್ಚೆತ್ತುಕೊಳ್ಳದ  ಬಿಬಿಎಂಪಿ ಆಡಳಿತ  ಪಕ್ಷ  ತಣ್ಣಗೆ ಎಸಿ ಕೊಠಡಿಯಲ್ಲಿ ಕುಳಿತುಕೊಂಡಿತ್ತು. ಅವಘಡ ಸಂಭವಿಸಿದ ದಿವಸ ಮೇಯರ್ ಹಾಗೂ ಇನ್ನಿತರ ಅಧಿಕಾರಿಗಳು ಕಾಲ್‍ಸೆಂಟರ್‍ನಲ್ಲಿ ಕುಳಿತುಕೊಂಡು ಸಂತ್ರಸ್ತರ ಅಳಲನ್ನು ಕೇಳಿಸಿಕೊಳ್ಳುವ ಕಾರ್ಯದಲ್ಲಿ ಮಾತ್ರ ತೃಪ್ತರಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಮೇ ತಿಂಗಳಲ್ಲಿ ಅಲ್ಲಲ್ಲಿ ಸುರಿದ ಸಣ್ಣ ಪ್ರಮಾಣದ ಮಳೆಯಿಂದಲೇ ಬೆಂಗಳೂರಿನ ಹಲವು ಭಾಗಗಳ ರಸ್ತೆಗಳು, ಚರಂಡಿಗಳಲ್ಲಿ ನೀರು ತುಂಬಿ ರಸ್ತೆಯ ಮೇಲಿದ್ದ ಒಂದೆರಡು ವಾಹನಗಳೇ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಕಸ್ಮಾತ್ ಮನೆಗಳಿಗೆ ನೀರು ನುಗ್ಗಿದರೆ ಜನ ಎಲ್ಲಿಗೆ ಹೋಗಬೇಕು? ಏನು ಮಾಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಕೊರೋನ ಸೋಂಕು ಇನ್ನೂ ತಹಬದಿಗೆ ಬರದ ಈ ಹೊತ್ತಿನಲ್ಲಿ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ಹರಿದರೆ ಅಲ್ಲಿನ ನಿವಾಸಿಗಳ ಗತಿ ಏನು ಹಾಗೂ ಅವರಿಗೆ ಆಹಾರ, ವಸತಿ ಹೀಗೆ ಮೂಲ ಸೌಕರ್ಯಗಳ ಪೂರೈಕೆಗೆ ಹೆಣಗಾಡಬೇಕಾಗುತ್ತದೆ.  ಈ ಸಂದಿಗ್ಧ ಪರಿಸ್ಥಿತಿಗೆ, ಆತಂಕಕ್ಕೆ ಸರಕಾರ ಹಾಗೂ ಬಿಬಿಎಂಪಿಯ ಬೇಜವಾಬ್ದಾರಿತನವೇ ಕಾರಣವಾಗಿದೆ ಎಂದು ಮೋಹನ್ ದಾಸರಿ ಹೇಳಿದ್ದಾರೆ.

ಕೊರೋನ ಕಾರಣವನ್ನು ಮುಂದಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಇದ್ದರೆ, ಮುಂದಾಗುವ ಅವಘಡಗಳಿಗೆ ಬಿಬಿಎಂಪಿಯ ಜವಾಬ್ದಾರಿ ಹೊತ್ತಿರುವ ಮೇಯರ್ ಮತ್ತು ಆಯುಕ್ತರನ್ನೆ ನೇರ ಹೊಣೆ ಮಾಡಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News