ಅಮೆರಿಕ: ಭರವಸೆ ಮೂಡಿಸಿದ ಕೊರೋನ ಲಸಿಕೆ ಪರೀಕ್ಷೆ

Update: 2020-05-19 03:39 GMT

ವಾಷಿಂಗ್ಟನ್, ಮೇ 19: ಇಡೀ ಜಗತ್ತಿನ ಜನಜೀವನವನ್ನೇ ತಲ್ಲಣಗೊಳಿಸಿದ ಕೊರೋನ ವೈರಸ್ ವಿರುದ್ಧದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಮೊಟ್ಟಮೊದಲ ಲಸಿಕೆ ಮನುಷ್ಯರ ಮೇಲೆ ಪ್ರಯೋಗಕ್ಕೆ ಸಜ್ಜಾಗಿದೆ ಎಂದು ಲಸಿಕೆ ಉತ್ಪಾದಕ ಕಂಪೆನಿ ಮಾಡೆರ್ನಾ ಸೋಮವಾರ ಪ್ರಕಟಿಸಿದೆ.

ಇದುವರೆಗೆ ಎಂಟು ಮಂದಿಯ ಮೇಲೆ ಇದನ್ನು ಪ್ರಯೋಗಿಸಲಾಗಿದ್ದು, ಮಾರ್ಚ್‌ನಿಂದ ಆರಂಭಿಸಿ ಇವರು ತಲಾ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಇದರ ಆಧಾರದಲ್ಲಿ ಇದು ಸುರಕ್ಷಿತ ಹಾಗೂ ವೈರಸ್ ವಿರುದ್ಧದ ಪ್ರತಿರೋಧ ಸ್ಪಂದನೆಯನ್ನು ಉತ್ತೇಜಿಸಬಲ್ಲದು ಎನ್ನುವುದು ದೃಢಪಟ್ಟಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಲಸಿಕೆ ನೀಡಿದ ಬಳಿಕ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಗುರಿಪಡಿಸಿದಾಗ, ಈ ಜನರಲ್ಲಿ ವೈರಸ್ ಪುನರುತ್ಪತ್ತಿಯನ್ನು ತಡೆಯುವ ನಿರೋಧಕ ಶಕ್ತಿ ವೃದ್ಧಿಯಾಗಿರುವುದು ಫಲಿತಾಂಶದಿಂದ ದೃಢಪಟ್ಟಿದೆ. ಇದು ಪರಿಣಾಮಕಾರಿ ಲಸಿಕೆಯ ಪ್ರಮುಖ ಅಗತ್ಯತೆಯಾಗಿದೆ. ಈ ವ್ಯಕ್ತಿಗಳಲ್ಲಿನ ತಟಸ್ಥಗೊಳಿಸಬಲ್ಲ ಆ್ಯಂಡಿಬಾಡಿಗಳ ಮಟ್ಟವು, ವೈರಸ್ ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳಲ್ಲಿರುವ ಆ್ಯಂಟಿಬಾಡಿ ಮಟ್ಟಕ್ಕೆ ಸಮಾನವಾಗಿದೆ ಎಂದು ವಿವರಿಸಲಾಗಿದೆ.

ಇದೀಗ ಎರಡನೇ ಹಂತದಲ್ಲಿ 600 ಮಂದಿಗೆ ಈ ಲಸಿಕೆ ನೀಡಿ ಫಲಿತಾಂಶ ಅಧ್ಯಯನ ಮಾಡುವ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ ಎಂದು ಮಾಡೆರ್ನಾ ಹೇಳಿದೆ. ಸಾವಿರಾರು ಮಂದಿ ಆರೋಗ್ಯವಂತರ ಮೇಲೆ ಇದನ್ನು ಪ್ರಯೋಗಿಸುವ ಮೂರನೇ ಹಂತದ ಪ್ರಯೋಗ ಜುಲೈನಲ್ಲಿ ನಡೆಯಲಿದೆ. ಎರಡನೇ ಹಂತದ ಪ್ರಯೋಗಕ್ಕೆ ಎಫ್‌ಡಿಎ ಅನುಮತಿ ನೀಡಿದೆ ಎಂದು ಮಾಡೆರ್ನಾ ಸ್ಪಷ್ಟಪಡಿಸಿದೆ.

ಇದು ಯಶಸ್ವಿಯಾದಲ್ಲಿ ಈ ವರ್ಷದ ಕೊನೆಗೆ ಅಥವಾ 2021ರ ಆರಂಭದಲ್ಲಿ ಸಾರ್ವಜನಿಕರ ಬಳಕೆಗೆ ಲಸಿಕೆ ಲಭ್ಯವಾಗಲಿದೆ ಎಂದು ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ತಲ್ ಝಕ್ಸ್ ಹೇಳಿದ್ದಾರೆ. ಕಡಿಮೆ ಪ್ರಮಾಣದ, ಮಧ್ಯಮ ಪ್ರಮಾಣದ ಹಾಗೂ ಅತ್ಯಧಿಕ ಪ್ರಮಾಣದ ಹೀಗೆ ಮೂರು ಡೋಸ್‌ಗಳನ್ನು ಪರೀಕ್ಷಿಸಲಾಗಿದೆ. ಇದರ ಏಕೈಕ ವ್ಯತಿರಿಕ್ತ ಪರಿಣಾಮವೆಂದರೆ, ಕೈಗಳು ಕೆಂಪಾಗುವುದು ಮತ್ತು ನೋಯುವುದು ಎಂದು ಕಂಪೆನಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News