ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪಂಜಿಗದ್ದೆ ಕೃಷ್ಣ ಭಟ್ ನೇಮಕ

Update: 2020-05-20 12:27 GMT

ಬೆಂಗಳೂರು, ಮೇ 20: ಕರ್ನಾಟಕ ಹೈಕೋರ್ಟ್ ನೂತನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪಂಜಿಗದ್ದೆ ಕೃಷ್ಣ ಭಟ್ ಅವರನ್ನು ನೇಮಕ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಈ ಕುರಿತು ಕೇಂದ್ರ ನ್ಯಾಯ ಮತ್ತು ಕಾನೂನು ಸಚಿವಾಲಯದ ಜಂಟಿ ಕಾರ್ಯದರ್ಶಿ ರಜಿಂದರ್ ಕಶ್ಯಪ್ ಅವರು ಆದೇಶ ಹೊರಡಿಸಿದ್ದಾರೆ. ನ್ಯಾ.ಪಿ.ಕೃಷ್ಣ ಭಟ್ ಅವರ ಅಧಿಕಾರಾವಧಿಯು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಎರಡು ವರ್ಷ ಆಗಿರುತ್ತದೆ.

ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ಪ್ರಾಧಿಕಾರದ ನ್ಯಾಯಾಧೀಶ ಮತ್ತು ಬೆಂಗಳೂರು ಗ್ರಾಮಾಂತರ, ತುಮಕೂರು, ಬೆಳಗಾವಿ, ಬೀದರ್ ಮತ್ತು ರಾಯಚೂರಿನ ಜಿಲ್ಲಾ ನ್ಯಾಯಲಯಗಳಲ್ಲಿ ನ್ಯಾಯಾಧೀಶರಾಗಿ ಪಿ.ಕೃಷ್ಣ ಭಟ್ ಅವರು ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಸುಪ್ರೀಂಕೋರ್ಟ್ ಕೋಲಿಜಿಯಂ, ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ನ್ಯಾ.ಪಿ.ಕೃಷ್ಣ ಭಟ್ ಅವರ ಹೆಸರನ್ನು ಈ ಹಿಂದೆ ಮೂರು ಬಾರಿ ಶಿಫಾರಸು ಮಾಡಿತ್ತು. ಪ್ರತಿ ಬಾರಿಯೂ ಕೇಂದ್ರ ಸರಕಾರ, ಪಿ.ಕೃಷ್ಣ ಭಟ್ ಅವರ ಹೆಸರು ಮರು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು. 2016ರ ಆಗಸ್ಟ್ ನಲ್ಲಿ ಮೊದಲ ಬಾರಿಗೆ ಮಾಡಿದ್ದ ಶಿಫಾರಸು ತಿರಸ್ಕರಿಸಿದ್ದ ಕೇಂದ್ರ ಸರಕಾರವು 2017ರ ಎ.16ರಂದು ಸುಪ್ರೀಂಕೋರ್ಟ್ ಗೆ ಪತ್ರ ಬರೆದು, ಪಿ.ಕೃಷ್ಣ ಭಟ್ ಅವರ ಹೆಸರು ಮರು ಪರಿಶೀಲಿಸುವಂತೆ ತಿಳಿಸಿತ್ತು.

ಇದರಿಂದ, ಅಸಮಾಧಾನಗೊಂಡಿದ್ದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಯಾಗಿದ್ದ ಜೆ.ಚಲಮೇಶ್ವರ ಅವರು 2018ರಲ್ಲಿ ಕೇಂದ್ರ ಸರಕಾರವು ನ್ಯಾಯಾಂಗದಲ್ಲಿ ಮಧ್ಯ ಪ್ರವೇಶ ಮಾಡುತ್ತಿದೆ ಎಂದು ಬಹಿರಂಗ ಪತ್ರ ಬರೆದ ಕಾರಣ ಪಿ.ಕೃಷ್ಣ ಭಟ್ ಅವರ ನೇಮಕಾತಿ ವಿಚಾರವು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಆ ನಂತರ 2019ರ ಅ.15ರಂದು ಸುಪ್ರೀಂಕೋರ್ಟ್ ಕೋಲಿಜಿಯಂ ಎರಡನೆ ಬಾರಿಗೆ ನ್ಯಾ.ಪಿ.ಕೃಷ್ಣ ಭಟ್ ಅವರ ಹಸರು ಶಿಫಾರಸು ಮಾಡಿತ್ತು.

ಇದೀಗ ಕೇಂದ್ರ ಸರಕಾರ ನ್ಯಾ.ಪಿ.ಕೃಷ್ಣ ಭಟ್ ಅವರನ್ನು ಹೈಕೋರ್ಟ್ ಗೆ ನೇಮಕ ಮಾಡಿದೆ. ಒಂದೊಮ್ಮೆ ಕೇಂದ್ರ ಸರಕಾರವು ಪಿ.ಕೃಷ್ಣ ಭಟ್ ಅವರ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡದೇ ಹೋಗಿದ್ದರೆ, ಅವರು 2020ರ ಆ.8ರಂದು ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾಗಿಯೇ ನಿವೃತ್ತಿಯಾಗಬೇಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News