ಭಾರತದಿಂದ 1.2 ಲಕ್ಷ ಕೋಟಿ ರೂ. ವಿದೇಶಿ ಹೂಡಿಕೆ ಹಿಂದೆಗೆತ: ವರದಿ

Update: 2020-05-20 16:11 GMT

ಹೊಸದಿಲ್ಲಿ, ಮೇ 20: ಮಾರಕ ಕೊರೋನ ವೈರಸ್ ಸೋಂಕಿನ ಮಧ್ಯೆಯೇ ವಿದೇಶಿ ಹೂಡಿಕೆದಾರರು ಏಶ್ಯಾ ಖಂಡದಲ್ಲಿ ಹೂಡಿಕೆ ಮಾಡಿದ್ದ ಸುಮಾರು 1.9 ಲಕ್ಷ ಕೋಟಿ ರೂ. ಬಂಡವಾಳ ಹಿಂಪಡೆದಿದ್ದು, ಇದರಲ್ಲಿ ಭಾರತದಿಂದ ಹಿಂಪಡೆದ ಹೂಡಿಕೆಯ ಮೊತ್ತ ಸುಮಾರು 1.2 ಲಕ್ಷ ಕೋಟಿ ರೂ. ಎಂದು ಅಮೆರಿಕದ ಕಾಂಗ್ರೆಷನಲ್ ರಿಸರ್ಚ್ ಸೆಂಟರ್ ವರದಿ ಮಾಡಿದೆ.

ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡುವ ವಿತ್ತೀಯ ಮತ್ತು ಹಣಕಾಸಿನ ನೀತಿಗಳನ್ನು ಜಾರಿಗೊಳಿಸಲು ಸರಕಾರಗಳಿಗೆ ಕೊರೋನ ವೈರಸ್ ಸೋಂಕು ಬಹುದೊಡ್ಡ ಸವಾಲಾಗಿದೆ ಎಂದು ‘ಜಾಗತಿಕ ಅರ್ಥವ್ಯವಸ್ಥೆಯ ಮೇಲೆ ಕೋವಿಡ್-19ರ ಪ್ರಭಾವ’ ಎಂಬ ಶೀರ್ಷಿಕೆಯ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಈ ನೀತಿ, ವಿಧಾನಗಳು ರಾಷ್ಟ್ರೀಯತೆಯನ್ನು ಉತ್ತೇಜಿಸುವ ದೇಶ ಹಾಗೂ ಸಂಘಟಿತ ಅಂತರಾಷ್ಟ್ರೀಯ ಪ್ರತಿವರ್ತನೆಯ ಪರವಿರುವ ದೇಶಗಳ ನಡುವಿನ ವ್ಯತ್ಯಾಸವನ್ನು ಪ್ರಕಟಿಸುತ್ತವೆ. ಅಲ್ಲದೆ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳ ಕಾರ್ಯನೀತಿಗಳಲ್ಲಿ ಇರುವ ವ್ಯತ್ಯಾಸಗಳನ್ನು ಪ್ರದರ್ಶಿಸುತ್ತದೆ ಎಂದು ವರದಿ ತಿಳಿಸಿದೆ.

ತುಸು ವಿಳಂಬವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಬ್ಯಾಂಕ್‌ಗಳು ಹಣಕಾಸು ಮಾರುಕಟ್ಟೆಗಳಲ್ಲಿ ಸರಣಿ ಉಪಕ್ರಮಗಳನ್ನು ಜಾರಿಗೊಳಿಸಿವೆ. ಸರಕಾರಗಳೂ ಅರ್ಥವ್ಯವಸ್ಥೆಗೆ ಉತ್ತೇಜನ ನೀಡಲು ಹಣಕಾಸು ನೀತಿ ಉಪಕ್ರಮಗಳಿಗೆ ಚಾಲನೆ ನೀಡಿವೆ. ಆದರೆ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿರುವ ಅನಿಶ್ಚಿತತೆ, ಜಾಗತಿಕವಾಗಿ ಹಬ್ಬಿರುವ ಕೊರೋನ ಸೋಂಕು, ಮತ್ತು ಸೋಂಕು ನಿಯಂತ್ರಣಕ್ಕೆ ಜಾರಿಗೊಳಿಸಿರುವ ನಿರ್ಬಂಧಗಳು ಮಾರುಕಟ್ಟೆಯ ಚಂಚಲತೆಗೆ ಕೊಡುಗೆ ನೀಡುತ್ತಿವೆ. ಇದರ ಜೊತೆಗೆ ಕಚ್ಛಾತೈಲದ ಬೆಲೆಯಲ್ಲಿ ಐತಿಹಾಸಿಕ ಕುಸಿತವಾಗಿದೆ. ಈ ಪ್ರವೃತ್ತಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತವನ್ನು ಪ್ರತಿಬಿಂಬಿಸುತ್ತಿದೆ ಎಂದು ವರದಿ ತಿಳಿಸಿದೆ.

ಕೊರೋನ ವೈರಸ್‌ನ ಪ್ರಭಾವದಿಂದಾಗಿ ಬಹುತೇಕ ಪ್ರಮುಖ ದೇಶಗಳ ಅರ್ಥವ್ಯವಸ್ಥೆ ಕುಸಿತದ ಹಾದಿಯಲ್ಲಿದ್ದರೂ 2020ರಲ್ಲಿ ಚೀನಾ, ಭಾರತ ಮತ್ತು ಇಂಡೋನೇಶ್ಯಾ ದೇಶಗಳ ಅರ್ಥವ್ಯವಸ್ಥೆ ಮಾತ್ರ ಸಣ್ಣಪ್ರಮಾಣದಲ್ಲಿ ಆದರೂ ಸಕಾರಾತ್ಮಕ ರೀತಿಯ ಅಭಿವೃದ್ಧಿ ದಾಖಲಿಸಲಿದೆ ಎಂದು ವರದಿ ತಿಳಿಸಿದೆ. ಯುರೋಪ್‌ನಲ್ಲಿ ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಸ್ಪೇನ್ ಮತ್ತು ಇಟಲಿ ಮುಂತಾದ ದೇಶಗಳ 30 ಮಿಲಿಯನ್ ಜನತೆ ಸರಕಾರದ ನೆರವಿಗೆ ಅರ್ಜಿ ಸಲ್ಲಿಸಿದ್ದಾರೆ. 2020ರ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಯುರೋ ವಲಯದ ಅರ್ಥವ್ಯವಸ್ಥೆ 3.8% ಕುಗ್ಗಿದ್ದು 1995ರ ಬಳಿಕದ ಅತೀ ದೊಡ್ಡ ತ್ರೈಮಾಸಿಕ ಕುಸಿತವಾಗಿದೆ. ಪ್ರಾಥಮಿಕ ಮಾಹಿತಿಯಂತೆ ಈ ವಿತ್ತವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಅಮೆರಿಕದ ಜಿಡಿಪಿ 4.8% ಕುಗ್ಗಿದ್ದು, 2008ರ ಬಳಿಕದ ಅತೀ ದೊಡ್ಡ ತ್ರೈಮಾಸಿಕ ಕುಸಿತವಾಗಿದೆ.

ಮಾರ್ಚ್ ಮಧ್ಯಭಾಗದಿಂದ ಎಪ್ರಿಲ್ ಅಂತ್ಯದವರೆಗಿನ 5 ವಾರಗಳ ಅವಧಿಯಲ್ಲಿ 30 ಮಿಲಿಯನ್‌ಗೂ ಹೆಚ್ಚಿನ ಅಮೆರಿಕನ್ನರು ನಿರುದ್ಯೋಗ ವಿಮೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ. ಕೊರೋನ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭಾರತದಲ್ಲಿ ಜಾರಿಗೊಳಿಸಿದ ಲಾಕ್‌ಡೌನ್‌ನಿಂದ ಭಾರತದ ಅರ್ಥವ್ಯವಸ್ಥೆ ಅತೀ ಕೆಟ್ಟ ಆರ್ಥಿಕ ಹಿಂಜರಿತ ದಾಖಲಿಸಲಿದೆ ಎಂದು ಅಮೆರಿಕ ಮೂಲದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಗೋಲ್ಡ್‌ಮನ್ ಸ್ಯಾಚ್ಸ್ ಇತ್ತೀಚೆಗೆ ಅಂದಾಜಿಸಿದೆ. ವಿಶ್ವದ ಅರ್ಥವ್ಯವಸ್ಥೆಯ ಪುನಶ್ಚೇತನದ ಪ್ರಮಾಣ ಈ ಹಿಂದೆ ಅಂದಾಜಿಸಿದ್ದಕ್ಕಿಂತ ಕಡಿಮೆಯಾಗಲಿದೆ ಎಂಬ ಅಂತರಾಷ್ಟ್ರೀಯ ಹಣಕಾಸು ಸಂಘಟನೆಯ ವರದಿಯನ್ನು ಕಾಂಗ್ರೆಷನಲ್ ರಿಸರ್ಚ್ ಸೆಂಟರ್‌ನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಾಗತಿಕ ಅರ್ಥವ್ಯವಸ್ಥೆಯ ಯೋಜಿತ ಕುಸಿತವನ್ನು ‘ಮಹಾನ್ ಲಾಕ್‌ಡೌನ್’ ಎಂದು ಬಣ್ಣಿಸಲಾಗಿದ್ದು, ಜಾಗತಿಕ ಅರ್ಥವ್ಯವಸ್ಥೆಯು ದಶಕಗಳ ಹಿಂದೆ ಕಂಡುಬಂದಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟಿಗಿಂತಲೂ ಹೆಚ್ಚಿನ ಹಿಂಜರಿತಕ್ಕೆ ಸಾಕ್ಷಿಯಾಗಲಿದೆ ಎಂದು ವರದಿ ಹೇಳಿದೆ.

ಭಾರತದ ಜಿಡಿಪಿ ದರ ಕುಸಿತ

ಐಎಂಎಫ್ ಭಾರತದ ಅಭಿವೃದ್ಧಿ ದರ ಈ ಹಿಂದೆ ಅಂದಾಜಿಸಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇರಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ತಿಳಿಸಿದೆ. 2020-21ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ದರ 5.8%ರ ಪ್ರಮಾಣದಲ್ಲಿ ಇರಲಿದೆ ಎಂದು ಈ ಹಿಂದೆ ತಿಳಿಸಿದ್ದ ಐಎಂಎಫ್, ಇದೀಗ ಕೊರೋನ ವೈರಸ್ ಮತ್ತು ಲಾಕ್‌ಡೌನ್‌ನಿಂದಾಗಿ ಈ ಪ್ರಮಾಣ 1.9%ಕ್ಕೆ ಇಳಿಯಲಿದೆ ಎಂದು ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News