‘ಆತ್ಮ ನಿರ್ಭರತೆ-ನಡೆವ ಕಾಲುಗಳ ಮೇಲೆ ಮಾತ್ರ ವಿಶ್ವಾಸ’

Update: 2020-05-21 17:36 GMT

‘ಬಸ್, ಟ್ರೈನ್, ರೇಶನ್ನು, 20 ಲಕ್ಷ ಕೋಟಿಯ ನಿಮ್ಮ ಆಶ್ವಾಸನೆಗಳೆಲ್ಲದರಲ್ಲೂ ನಂಬಿಕೆ ಹೋಗಿದೆ ನಮಗೆ, ನಮಗಿರುವ ವಿಶ್ವಾಸ ಕೇವಲ ನಮ್ಮ ಕಾಲುಗಳ ಮೇಲೆ’ ಎನ್ನುತ್ತ ಕಾರ್ಮಿಕರು ಹೊರಟೇಬಿಟ್ಟಿದ್ದಾರೆ. ಅವರನ್ನು ನಿಲ್ಲಿಸುವ ಹಿತಚಿಂತಕರ ಪ್ರಯತ್ನ ಫಲಗೊಡುತ್ತಿಲ್ಲ. ಕಾರ್ಮಿಕರೂ, ಸಂಘಟನೆಗಳೂ ಈ ದಿಶೆಯಲ್ಲಿ ಮಗ್ನರಾಗಿರುವಾಗ ಅತ್ತ ಸರಕಾರ ಅವರೆಲ್ಲರನ್ನೂ ಶಾಶ್ವತವಾಗಿ ಮೇಲೇಳದಂತೆ ಮಾಡುವ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ಯಾವೊಂದು ಶಾಸನ ಸಭೆಯ, ಸಂಸತ್ತಿನ, ಸಂಘಟನೆಗಳ ಜೊತೆಗೆ ಚರ್ಚೆಯಿಲ್ಲದೆಯೇ ಮಾಡಹೊರಟಿದೆ.


ಬ್ರಿಟಿಷರ ಕಾಲದಲ್ಲಿ ಫಟಗಿ ಶಿಕ್ಷೆ ಎಂಬುದೊಂದಿತ್ತು. ಧಾರವಾಡದ ಸ್ವಾತಂತ್ರ ಹೋರಾಟಗಾರ ವಿಜಿ ಅಂಗಡಿಯವರು ಇಂಥ ಶಿಕ್ಷೆಗೆ ತಾನು ಒಳಪಟ್ಟಿದ್ದೆ ಎಂದು ಆ ಶಿಕ್ಷೆಯ ಬಗ್ಗೆ ವಿವರಿಸುತ್ತಿದ್ದರು. ಬೆತ್ತಲೆಯಾಗಿ ನಿಲ್ಲಿಸಿ ಒಂದು ನೂರು ಬಾರಿ ಬಾರುಕೋಲಿನಿಂದ ಹೊಡೆಯುವುದು. ರಕ್ತ ಹರಿದು ಆ ವ್ಯಕ್ತಿ ಮೂರ್ಛೆ ಹೋಗಿ ಬಿದ್ದರೂ ನೂರಾಗುವವರೆಗೆ ಬಾರಿಸುತ್ತಲೇ ಇರುತ್ತಿದ್ದರಂತೆ.

ಈಗೇತಕ್ಕೆ ಬ್ರಿಟಿಷರ ಕಾಲದ ಫಟಗಿ ಶಿಕ್ಷೆಯ ನೆನಪು? ಪ್ರತಿ ನಿತ್ಯ ನಮ್ಮ ವಲಸೆ ಕಾರ್ಮಿಕರನ್ನು ಈ ದೇಶದ ಸರಕಾರ ನಡೆಸಿಕೊಳ್ಳುವ ರೀತಿಯಾವ ಫಟಗಿ ಶಿಕ್ಷೆಗೂ ಕಮ್ಮಿ ಇಲ್ಲದ್ದೆನಿಸುತ್ತದೆ. ಇವರ ನೂರು ಹೊಡೆತಗಳು ಇನ್ನೂ ಮುಗಿದಿಲ್ಲವೇ ಎಂದು ಮತ್ತೆ ಮತ್ತೆ ಕೇಳುವಂತಾಗುತ್ತದೆ.
ಕಳೆದ ತಿಂಗಳು ಉತ್ತರ ಪ್ರದೇಶದ 12 ವರ್ಷದ ಒಬ್ಬಳು ಪುಟ್ಟ ಹುಡುಗಿ ನಡೆದು ಕೊಂಡೇ ಮನೆಗೆ ಹೋಗುತ್ತಿದ್ದವಳು ಇನ್ನೇನು ಊರು ಹತ್ತಿರವಿದೆ ಎನ್ನುವಾಗತಲೇ ತಿರುಗಿ ಬಿದ್ದು ಸತ್ತೇ ಹೋದ ವಿಷಯದ ಮೇಲೆ ಒಂದು ಕಾರ್ಟೂನ್ ಇತ್ತು. ದೇವರು ಬಂದು ಆಕೆಯನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಆಕೆ ದೇವರಿಗೆ ಹೇಳುತ್ತಾಳೆ, ‘ದೇವರೇ, ನನಗೆ ಸ್ವರ್ಗಕ್ಕಲ್ಲ, ಮನೆಗೆ ಹೋಗಬೇಕು. ಪ್ಲೀಸ್, ಮನೆಗೆ ಕರೆದುಕೊಂಡು ಹೋಗುತ್ತೀರಾ?’ ಈ ಕಾರ್ಟೂನ್ ಬರೆದ ಕಲಾವಿದರಿಗೆ ಸಲಾಂ.
ಈ ಎರಡು ಉದಾಹರಣೆಗಳ ಮಧ್ಯೆ ಇದೆ ನಮ್ಮ ವಲಸೆ ಕಾರ್ಮಿಕರ ತಿರುಗು ವಲಸೆಯ ಕತೆಗಳು.
ಬೆಂಗಳೂರೆಂಬುದು ಈಗ ಕೂಲಿಕಾರರ ಸಮುದ್ರವಾಗಿದೆ. ಒಬ್ಬೊಬ್ಬ ವಲಸೆ ಕಾರ್ಮಿಕರ ಕತೆಯೂ ಹೃದಯವನ್ನು ಹಿಂಡಿ ಹಿಪ್ಪೆ ಮಾಡುವಂತಹದ್ದು. ‘ನಾನೆಂದೂ ಇನ್ನೊಬ್ಬರ ಎದುರು ಕೈ ಚಾಚಿಲ್ಲ. ಆದರೆ ಇಂದು ಅಂಥ ಪರಿಸ್ಥಿತಿ ಬಂದಿದೆ. ಒಂದು ಊಟ ಬೇಕೆಂದರೆ ಒಂದು ಸಾರೆ ಫೋನ್ ಮಾಡಬೇಕು. ದೇಹವೇ ನಾಚಿಕೆಯಿಂದ ಮುದುರಿಹೋಗುತ್ತಿದೆ.’ ಲಕ್ಷ ಲಕ್ಷಗಟ್ಟಲೆ ಜನರು ‘ಏನಾದರೂ ಮಾಡಿ ನಮಗೆ ಊಟ ಕೊಡಿ’ ಎಂದು ಕೇಳುತ್ತಿರಬೇಕಾದರೆ ಅವರ ಪರಿಸ್ಥಿತಿಯನ್ನು ಊಹಿಸಲು ನಮಗೆಂದಾದರೂ ಸಾಧ್ಯವೇ?

ಮೊದಲು ಲಾಕ್‌ಡೌನ್ ಮಾಡಿ ಕಾರ್ಮಿಕರನ್ನು ಅಕ್ಷರಶಃ ಬೀದಿಗೆ ಬೀಳಿಸಲಾಯಿತು. ಸರಿ ನಡೆದೇ ಹೋಗುತ್ತೇವೆ ಎಂದು ಹೊರಟವರನ್ನು ಅರ್ಧ ದಾರಿಯಲ್ಲಿ40 ದಿನಗಳ ಕಾಲ ನಿಲ್ಲಿಸಲಾಯಿತು. ಅಂತೂ ಇಂತೂ ಮುಂದೆ ಸಾಗಲು ಪರವಾನಿಗೆ ಸಿಕ್ಕಿ, ಕುಳಿತಿದ್ದವರು ಎದ್ದು ತಮ್ಮ ಚೀಲ, ಹಾಸಿಗೆಗಳನ್ನು ಕಟ್ಟಿ ಹೊಂದಿಸಿಕೊಳ್ಳುವ ಹೊತ್ತಿಗೆ ‘ನೀವು ನಮಗೆ ಬೇಕು, ಹೋಗಬೇಡಿ’ ಎನ್ನುತ್ತ, ಟ್ರೈನ್ ಬೇಡವೆಂದು ರೈಲ್ವೆ ಇಲಾಖೆಗೆ ಹೇಳಿ ಪ್ರಯಾಣವನ್ನುತಡೆಯಲಾಯಿತು. ‘ನಮಗೆ ಮನೆಗೆ ಹೋಗಬೇಕು’ ಆಂದೋಲನದ ಪ್ರತಿಫಲವಾಗಿ ಮತ್ತೆ ಟ್ರೈನನ್ನು ಪ್ರಾರಂಭಿಸಲಾಗಿದ್ದರೂ ಪ್ರಯಾಣದ ದರ ಮತ್ತೊಂದು ಫಟಗಿಗೆ ಸಮ! ಮತ್ತೆ ‘ಉಚಿತ ಪ್ರಯಾಣ ಮಾಡಿಸಿ’ ಎಂದು ಆಂದೋಲನ ಆರಂಭವಾದ ಪರಿಣಾಮವಾಗಿ ಪ್ರಯಾಣ ಉಚಿತ ಎಂದು ಸರಕಾರ ಸಾರಿದ್ದು ಪತ್ರಿಕೆಗಳಲ್ಲಷ್ಟೇ ಉಳಿಯಿತು. ಈಗಾಗಲೇ 40 ದಿನಗಳ ಕಾಲ ಉದ್ಯೋಗವಿಲ್ಲದೆ, ಸಂಬಳವಿಲ್ಲದೆ ಕೈಯಲ್ಲಿದ್ದುದನ್ನೆಲ್ಲ ಖಾಲಿ ಮಾಡಿಕೊಂಡ ಕಾರ್ಮಿಕರು ಈಗ ರೈಲು ಪ್ರಯಾಣಕ್ಕೆ ಹಣ ಹೊಂದಿಸಲೇ ಬೇಕು.

ಆದರೆ ಆ ಪ್ರಯಾಣದ ವಿವರಗಳನ್ನು ನೋಡಿದರೆ ಅವು ಒಂದೊಂದೂ ಒಂದೊಂದು ನೂರು ಫಟಗಿ ಹೊಡೆತಗಳು! ಈ ಟ್ರೈನ್‌ಗಳನ್ನು ಎಲ್ಲಾ ಸ್ಟೇಷನ್‌ಗಳಿಂದ ಬಿಡುತ್ತಿಲ್ಲ. ರೈಲು ಇರುವಲ್ಲಿಗೆ ಜನರು ಬಸ್‌ನಲ್ಲಿ ಹೋಗಬೇಕು. ಕಾರ್ಮಿಕರು ಸಮೀಪದ ಪೊಲೀಸ್ ಸ್ಟೇಷನ್ನಿಗೆ ಹೋಗಿ ಸೇವಾ ಸಿಂಧುವಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಆಗಲೇ ಗೊತ್ತಾಗುತ್ತದೆ ಒಂದೊಂದು ಟಿಕೆಟಿಗೆ ದರ ಎಷ್ಟು ಎಂದು. ಜಾರ್ಖಂಡ್, ಬಿಹಾರದ ರಾಂಚಿ, ಲಕ್ನೊಗಳಿಗೆ ಟಿಕೆಟ್ ರೂ. 800, 900, 1,000 ಕೊಟ್ಟು ಖರೀದಿಸಬೇಕು. ಬೇರೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರ ಕತೆಯೂ ಇದೆಯೇ. ದಿನಕ್ಕೊಂದು ಕಾನೂನು, ನೀತಿ. ಇದೀಗ ಮುಖ್ಯಮಂತ್ರಿಗಳು ಗುಜರಾತ್, ಮಹಾರಾಷ್ಟ್ರ, ತಮಿಳುನಾಡಿನಿಂದ ಬರುವವರಿಗೆ ಪ್ರವೇಶವಿಲ್ಲ ಎಂದಿದ್ದಾರೆ. ಅತ್ತ ಉತ್ತರ ಪ್ರದೇಶಕ್ಕೆ ಯಾರೂ ಬರಬೇಡಿ ಎಂದಿದೆ ಅಲ್ಲಿನ ಸರಕಾರ. ಪಶ್ಚಿಮ ಬಂಗಾಳ, ಬಿಹಾರದಲ್ಲೂ ಅದೇ ನೀತಿ! ಕೋವಿಡ್-19ಕ್ಕಿಂತ ವಲಸೆ ಕಾರ್ಮಿಕರ ಕತೆಗಳೇ ದೊಡ್ಡದಾಗಿದೆ ನಮ್ಮ ದೇಶದಲ್ಲಿ. ಒಂದೊಂದು ವರದಿಯೂ ಒಂದೊಂದು ಕತೆ.

ತನ್ನನ್ನು ಎತ್ತಿ ನಿಲ್ಲಿಸುವವರನ್ನು, ತನ್ನ ಹೊಟ್ಟೆಗೆ ಹಾಕಿ ಸಾಕುವವರನ್ನು, ಅಭಿವೃದ್ಧಿಯನ್ನು ವಾಸ್ತವಕ್ಕೆ ತರುವವರನ್ನು ಈ ಭಾರತವು ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದನ್ನು ಕೋವಿಡ್ ಸಾಂಕ್ರಾಮಿಕ ರೋಗವು ಬಟಾಬಯಲಾಗಿಸಿದೆ. ಈ ಎರಡು ತಿಂಗಳು ಮತ್ತು ಇಂದಿನ ದಿನ ಕೂಡ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಯೇ ಬರಲಿರುವ ಕಾನೂನು ತಿದ್ದುಪಡಿಗಳ ಬಗ್ಗೆ ನಮಗೆ ಎಚ್ಚರಿಕೆ ನೀಡಬೇಕಾಗಿತ್ತು. ಕೋವಿಡ್‌ಗಿಂತ ಸ್ವಲ್ಪ ದಿನ ಮೊದಲೇ 48 ಕಾರ್ಮಿಕ ಕಾನೂನುಗಳನ್ನೆಲ್ಲ ಬಲಿಗೊಟ್ಟು ಕೈಗಾರಿಕಾ ಸಂಬಂಧಗಳು, ಕೂಲಿ, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ, ಸುರಕ್ಷತೆ ಎಂಬ ಯಾವ ನೀತಿ ಸಂಹಿತೆಗೂ ನಿಲುಕದ 4 ಕೋಡ್‌ಗಳನ್ನು ಸರಕಾರ ತಂದಿಟ್ಟಿರುವುದನ್ನೂ ನಾವು ಮರೆಯಬಾರದು. 1348ರಲ್ಲಿ ಮಹಾ ಪ್ಲೇಗು ಮಾರಿರೋಗದಿಂದ, ಇಂಗ್ಲೆಂಡ್‌ನ ಜನಸಂಖ್ಯೆ ತೀವ್ರತರದಲ್ಲಿ ಕುಸಿದು, ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿ, ಅವರು ವಿಪರೀತ ಕೂಲಿ ಕೇಳುತ್ತಿದ್ದ ಸಮಯದಲ್ಲಿ ಇಂಗ್ಲೆಂಡಿನ ರಾಜ ಮೂರನೇ ಎಡ್ವರ್ಡನು ನಿಗದಿತ ಗರಿಷ್ಠ ಕೂಲಿಗಿಂತ ಹೆಚ್ಚು ಪಾವತಿಸುವ ಮಾಲಕನು ಕಾನೂನಿನ ಪ್ರಕಾರ ಶಿಕ್ಷೆ ಅನುಭವಿಸಬೇಕು ಎಂಬ ಕಟ್ಟಪ್ಪಣೆ ಹೊರಡಿಸಿದ. ಈ ಹಿನ್ನೆಲೆಯಲ್ಲಿ, ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸಲಾಯಿತು.

ನಮ್ಮ ದೇಶದ ಸಂವಿಧಾನವನ್ನು ಅಂಗೀಕರಿಸುವಾಗ ಅದರ 43ನೇ ಅನುಚ್ಛೇದದಲ್ಲಿ ದೇಶವು ಎಲ್ಲಾ ಕಾರ್ಮಿಕರಿಗೆ ಬದುಕಲು ಬೇಕಾದಷ್ಟು ಕೂಲಿಯ ಭದ್ರತೆ ದೊರಕಿಸಿಕೊಡಬೇಕು ಎಂದು ಹೇಳಿದೆ. ನೂರು ವರ್ಷಗಳ ಕಾಲ ಮಾಡಿದ ಹೋರಾಟಗಳ ಫಲವಾಗಿ 8 ತಾಸು ಮಾತ್ರ ದುಡಿಯುವ ನಿಯಮಿತ ಅವಧಿ ದೊರೆತಿದೆ. ಒಬ್ಬ ಕಾರ್ಮಿಕನ ಅವಶ್ಯಕತೆಗಳೇನೇನು ಎಂದು ಪಟ್ಟಿ ಮಾಡಿ ಅದಕ್ಕೆ ತಕ್ಕಂತೆ ಕನಿಷ್ಠ ಕೂಲಿ ನಿರ್ಧಾರವಾಯಿತು. ಉದ್ದಿಮೆಗಳು, ದುಡಿಯುವವರು ಮತ್ತು ಅವರ ಸಂಬಳದ ಅವಶ್ಯಕತೆಗಳನ್ನು ಅಭ್ಯಸಿಸಿ ಕಾರ್ಮಿಕರನ್ನು ರಕ್ಷಿಸುವುದರ ಸಲುವಾಗಿ ಕಾಯ್ದೆಗಳು ಕಾಲಕಾಲಕ್ಕೆ ನವೀಕರಣಗೊಂಡವು. ಆದರೆ ಪ್ರಭುತ್ವದ ಮೇಲೆ ಉದ್ದಿಮೆಗಳ ಪ್ರಭಾವ ಹೆಚ್ಚುತ್ತ ಹೋದಂತೆ ಮಾಲಕರ ಪರವಾಗಿ ಕಾನೂನುಗಳನ್ನು ತಿದ್ದುಪಡಿ ಮಾಡುವ ಪ್ರಯತ್ನವೂ ಸತತ ನಡೆಯುತ್ತಲೇ ಇದೆ. ಕನಿಷ್ಠ ಕೂಲಿಯ ಕುರಿತು ಅದೆಷ್ಟೇ ಆಯೋಗಗಳು ಬಂದು ವೈಜ್ಞಾನಿಕವಾದ ಶಿಫಾರಸುಗಳನ್ನು ಕೊಟ್ಟರೂ ಸ್ವೀಕರಿಸದಿರುವುದು, ಕೆಲಸದ ಅವಧಿಯನ್ನು ಎಂಟುಗಂಟೆಯಿಂದ ಹನ್ನೆರಡು ಗಂಟೆಗೆ ಏರಿಸುವುದು, ಮುಷ್ಕರಗಳನ್ನು ನಿಷೇಧಿಸುವುದು ಮುಂತಾದ ತಿದ್ದುಪಡಿಗಳನ್ನು ತರಲು ಪ್ರಯತ್ನಗಳು ನಡೆದೇ ಇವೆ.

ಲಾಕ್‌ಡೌನ್ ಸಮಯದ ಸಂಬಳವನ್ನು ಪಾವತಿ ಮಾಡಬೇಕೆಂಬ ಸರಕಾರದ ಆದೇಶವನ್ನು ಹಿಂಪಡೆಯುವಲ್ಲಿ ಕಾರ್ಪೊರೇಟ್ ಶಕ್ತಿಗಳು ಯಶಸ್ವಿಯಾಗಿವೆ. ಕಾರ್ಮಿಕ ಕಾನೂನುಗಳ ಅಸ್ತಿತ್ವವನ್ನೇ ಛಿದ್ರಗೊಳಿಸುವ ಹುನ್ನಾರದಲ್ಲಿಯೂ ಅವರು ಯಶಸ್ವಿಯಾದರೆ, 100 ವರ್ಷಗಳಷ್ಟು ಹಳೆಯ ಹಕ್ಕುರಹಿತ ಸ್ಥಿತಿಗೆ ಕಾರ್ಮಿಕರನ್ನು ದೂಡಲಾಗುತ್ತಿದೆ.

ಇತ್ತ, ‘ಬಸ್, ಟ್ರೈನ್, ರೇಶನ್ನು, 20 ಲಕ್ಷ ಕೋಟಿಯ ನಿಮ್ಮ ಆಶ್ವಾಸನೆಗಳೆಲ್ಲದರಲ್ಲೂ ನಂಬಿಕೆ ಹೋಗಿದೆ ನಮಗೆ, ನಮಗಿರುವ ವಿಶ್ವಾಸ ಕೇವಲ ನಮ್ಮ ಕಾಲುಗಳ ಮೇಲೆ’ ಎನ್ನುತ್ತ ಕಾರ್ಮಿಕರು ಹೊರಟೇಬಿಟ್ಟಿದ್ದಾರೆ. ಅವರನ್ನು ನಿಲ್ಲಿಸುವ ಹಿತಚಿಂತಕರ ಪ್ರಯತ್ನ ಫಲಗೊಡುತ್ತಿಲ್ಲ. ಕಾರ್ಮಿಕರೂ, ಸಂಘಟನೆಗಳೂ ಈ ದಿಶೆಯಲ್ಲಿ ಮಗ್ನರಾಗಿರುವಾಗ ಅತ್ತ ಸರಕಾರ ಅವರೆಲ್ಲರನ್ನೂ ಶಾಶ್ವತವಾಗಿ ಮೇಲೇಳದಂತೆ ಮಾಡುವ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ಯಾವೊಂದು ಶಾಸನ ಸಭೆಯ, ಸಂಸತ್ತಿನ, ಸಂಘಟನೆಗಳ ಜೊತೆಗೆ ಚರ್ಚೆಯಿಲ್ಲದೆಯೇ ಮಾಡಹೊರಟಿದೆ. ಕೊರೋನ ಆಕ್ರಮಣದ ಅತಿದೊಡ್ಡ ಹೊಡೆತ ಬಿದ್ದುದು ಕಾರ್ಮಿಕರು ಮತ್ತು ಅವರ ನಂತರ ರೈತರ ಮೇಲೆ. ಎಪಿಎಂಸಿ ಮತ್ತು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಪ್ರಯತ್ನಗಳು ಈ ಎರಡು ಗುಂಪುಗಳಿಗೂ ಪೆಟ್ಟಿನ ಮೇಲೆ ಪೆಟ್ಟು ಕೊಡುವ ಫಟಗಿ ಶಿಕ್ಷೆಯೇ ಆಗಿದೆ.

Writer - ಶಾರದಾ ಗೋಪಾಲ

contributor

Editor - ಶಾರದಾ ಗೋಪಾಲ

contributor

Similar News