ಮಹಾರಾಷ್ಟ್ರ: ಖಾಸಗಿ ಆಸ್ಪತ್ರೆ ಮೇಲೆ ಶೇ 80ರಷ್ಟು ಹಿಡಿತ ಸಾಧಿಸಿದ ರಾಜ್ಯ ಸರಕಾರ

Update: 2020-05-22 18:35 GMT

ಮುಂಬೈ, ಮೇ. 22: ಮಹಾರಾಷ್ಟ್ರ ಸರಕಾರವು ಆಗಸ್ಟ್ 31ರವರೆಗೆ ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆ ಹಾಸಿಗೆಗಳಲ್ಲಿ ಶೇ 80 ರಷ್ಟು ಹಿಡಿತ ಸಾಧಿಸಿದೆ. ಆಸ್ಪತ್ರೆಗಳು ವಿಧಿಸುವ ಅತಿಯಾದ ದರಗಳ ದೂರುಗಳನ್ನು ಎದುರಿಸುತ್ತಿರುವ ಉದ್ಧವ್ ಠಾಕ್ರೆ ಸರಕಾರವು ಚಿಕಿತ್ಸೆಗೆ ಬೆಲೆ ನಿಗದಿಪಡಿಸಿದೆ.

ಕಳೆದ ತಡರಾತ್ರಿಯ ಆದೇಶವು ಖಾಸಗಿ ಆಸ್ಪತ್ರೆಯ ಹಾಸಿಗೆಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ರೋಗಿಗಳಿಗೆ ಎಷ್ಟು ಬಿಲ್ ಮಾಡಬಹುದೆಂದು ನಿರ್ಧರಿಸಲು ಸರಕಾರವನ್ನು ಶಕ್ತಗೊಳಿಸುತ್ತದೆ. ಉಳಿದ 20 ಶೇಕಡಾ ಹಾಸಿಗೆಗಳಲ್ಲಿ ಆಸ್ಪತ್ರೆಗಳಿಗೆ ತಮ್ಮದೇ ಆದ ದರವನ್ನು ವಿಧಿಸಲು ಅವಕಾಶವಿದೆ.

ವಾರ್ಡ್ ಮತ್ತು ಐಸೊಲೇಷನ್ ಬೆಡ್ ದರವನ್ನು 4,000 ರೂ. ವೆಂಟಿಲೇಟರ್‌ಗಳಿಲ್ಲದ ಐಸಿಯು ಹಾಸಿಗೆಗಳಿಗೆ ದಿನಕ್ಕೆ 7,500 ರೂ., ವೆಂಟಿಲೇಟರ್‌ರುವ ಐಸಿಯು ಹಾಸಿಗೆಗೆ 9,000 ರೂ. ನಿಗದಿಪಡಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ಸುಮಾರು 270 ಕಾಯಿಲೆಗಳ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳ ದರವನ್ನು ಸರಕಾರ ನಿಗದಿಪಡಿಸಿದೆ. ಪ್ಯಾಕೇಜ್ ದರದಲ್ಲಿ ವೈದ್ಯರ ಶುಲ್ಕ ಇರುತ್ತದೆ. ಅವರು ಜಾಸ್ತಿ ಶುಲ್ಕ ಬಯಸಿದರೆ ಆಸ್ಪತ್ರೆಗಳು ಹೆಚ್ಚು ಪಾವತಿಸಬಹುದು.

ಚಾರಿಟೇಬಲ್ ಟ್ರಸ್ಟ್‌ಗಳು ನಡೆಸುವ ನರ್ಸಿಂಗ್ ಹೋಂಗಳು ಸೇರಿದಂತೆ ಆಸ್ಪತ್ರೆಗಳು ಸರಕಾರದ ಹಿಡಿತಕ್ಕೆ ಒಳಪಟ್ಟಿದೆ. ಜಸ್ಲೋಕ್ ಆಸ್ಪತ್ರೆ, ಲೀಲಾವತಿ ಆಸ್ಪತ್ರೆ ಮತ್ತು ನಾನಾವತಿ ಆಸ್ಪತ್ರೆಯಂತಹ ಹಲವಾರು ಪ್ರಸಿದ್ಧ ಆಸ್ಪತ್ರೆಗಳು ಸರಕಾರದ ಆದೇಶಕ್ಕೆ ತಲೆಬಾಗಬೇಕಾಗಿದೆ.

ಆಸ್ಪತ್ರೆಗಳು ಸಾಮಾನ್ಯ ಹೆರಿಗೆಗೆ 75,000 ರೂ.ಗಿಂತ ಹೆಚ್ಚಿನ ಶುಲ್ಕ ವಿಧಿಸಲು ಸಾಧ್ಯವಿಲ್ಲ ಮತ್ತು ಸಿಸೇರಿಯನ್‌ಗೆ 86,250 ರೂ. , ಮೊಣಕಾಲು ಚಿಕಿತ್ಸೆಗೆ 1,60,000 ರೂ. ನಿಗದಿಪಡಿಸಲಾಗಿದೆ. ಆಂಜಿಯೋಗ್ರಫಿಗೆ 12,000 ರೂ. ಮತ್ತು ಆಂಜಿಯೋಪ್ಲಾಸ್ಟಿ ಶುಲ್ಕ 1.2 ಲಕ್ಷ ರೂ.ಗಿಂತ ಹೆಚ್ಚು ವಿಧಿಸುವಂತಿಲ್ಲ ಎಂದು ಸರಕಾರದ ಆದೇಶ ತಿಳಿಸಿದೆ.

ನಿಯಂತ್ರಿತ ಮತ್ತು ಅನಿಯಂತ್ರಿತ ಹಾಸಿಗೆಗಳಲ್ಲಿ ರೋಗಿಗಳ ಚಿಕಿತ್ಸೆಯ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸ ಇರಬಾರದು ಎಂದು ರಾಜ್ಯ ಸರಕಾರ ಆದೇಶಿಸಿದೆ.

ಮಹಾರಾಷ್ಟ್ರದಲ್ಲಿ 41,642 ಕೋವಿಡ್ -19 ಪ್ರಕರಣಳು ದಾಖಲಾಗಿದ್ದು, ಮುಂಬೈನಲ್ಲಿ 25 ಸಾವಿರ ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News