ಮಿನಿ ಬಸ್, ಕಾರುಗಳಲ್ಲಿ ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸಿದ ರಾಹುಲ್ ಗಾಂಧಿ: ವಿಡಿಯೋ

Update: 2020-05-23 08:52 GMT

ಹೊಸದಿಲ್ಲಿ : ರಾಜಧಾನಿ ದಿಲ್ಲಿಯ ಸುಖದೇವ್ ವಿಹಾರ್ ಪ್ರದೇಶದಲ್ಲಿ ತಾವು ಇತ್ತೀಚೆಗೆ ವಲಸಿಗ ಕಾರ್ಮಿಕರ ಜತೆ ನಡೆಸಿದ  ಮಾತುಕತೆಗಳ ವೀಡಿಯೋವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಶೇರ್ ಮಾಡಿದ್ದಾರೆ.

ಹರ್ಯಾಣದ ತಮ್ಮ ಕೆಲಸದ ಸ್ಥಳದಿಂದ  ನೂರಾರು ಕಿಮೀ ದೂರವಿರುವ ಉತ್ತರ ಪ್ರದೇಶದ ಝಾನ್ಸಿಯತ್ತ ತೆರಳುತ್ತಿದ್ದ ಸುಮಾರು 20 ವಲಸಿಗ ಕಾರ್ಮಿಕರ ತಂಡದ ಜತೆ  ರಾಹುಲ್ ಮಾತನಾಡಿದ್ದರು. “ಭಾರತದ ತೆರೆಮರೆಯ ಹೀರೋಗಳು, ಕಳೆದ ಕೆಲ ವಾರಗಳಲ್ಲಿ ಬಹಳಷ್ಟು ಅನ್ಯಾಯ ಹಾಗೂ ಕಷ್ಟ ಎದುರಿಸಿದ ವಲಸಿಗ ಸೋದರರು ಹಾಗೂ ಸೋದರಿಯರ  ಜತೆ ಒಂದು ಸಂವಾದ'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

“ಕೊರೋನವೈರಸ್ ಬಹಳಷ್ಟು ಜನರಿಗೆ ನೋವು ತಂದಿದೆ. ನಮ್ಮ ವಲಸಿಗ ಸೋದರರು ಹಾಗೂ ಸೋದರಿಯರಿಗೆ ಕೂಡ ಅದರಿಂದ ತೊಂದರೆಯಾಗಿದೆ. ಅವರು  ಸಾವಿರಾರು ಕಿಮೀ ದೂರ ಆಹಾರವಿಲ್ಲದೆ ನಡೆದಿದ್ದಾರೆ. ಅವರನ್ನು ನಿಲ್ಲಿಸಲಾಯಿತು, ಬೆದರಿಸಲಾಯಿತು ಆದರೂ ಅವರು ತಮ್ಮ ಮನೆಗಳತ್ತ ನಡೆದುಕೊಂಡು ಸಾಗಿದ್ದಾರೆ. ಅವರೇನು ಯೋಚಿಸುತ್ತಿದ್ದಾರೆ ಅವರೇನು ನಿರೀಕ್ಷಿಸುತ್ತಾರೆ ಹಾಗೂ ಅವರೆಷ್ಟು ಹೆದರಿದ್ದಾರೆಂದು ನಾನು ನಿಮಗೆ ತೋರಿಸುತ್ತೇನೆ'' ಎಂದು ವೀಡಿಯೋದಲ್ಲಿ ರಾಹುಲ್ ಹೇಳುತ್ತಾರೆ.

“ನಾವೀಗಾಗಲೇ ಸುಮಾರು 150 ಕಿಮೀ ದೂರ ನಡೆದಿದ್ದೇವೆ. ನಾವು ಇನ್ನೂ ನಡೆಯಬೇಕಿದೆ'' ಎಂದು ಝಾನ್ಸಿಯ ವಲಸಿಗ ಕಾರ್ಮಿಕ ಮಹೇಶ್ ಕುಮಾರ್ ಎಂಬಾತ ರಾಹುಲ್ ಜತೆ ಮತನಾಡುತ್ತಾ ಹೇಳಿದರೆ, ``ಶ್ರೀಮಂತರು ಕಷ್ಟದಲ್ಲಿಲ್ಲ,  ನಿಜವಾದ ಕಷ್ಟ ಎದುರಿಸುತ್ತಿರುವವರು ನಾವು ಬಡವರು. ನಾವು ಹಾಗೂ ನಮ್ಮ ಮಕ್ಕಳು ಕೂಡ ಕಳೆದ ಮೂರು ದಿನಗಳಿಂದ ಹಸಿದಿದ್ದೇವೆ'' ಎಂದು ಮಹಿಳೆಯೊಬ್ಬಳು ಹೇಳುತ್ತಾಳೆ.

ಲಾಕ್‍ಡೌನ್ ಬಗ್ಗೆ ನಿಮಗೆ ಹೇಗೆ ತಿಳಿಯಿತು ಎಂದು ರಾಹುಲ್ ಕೇಳಿದಾಗ ``ದಿಢೀರನೇ ಸುದ್ದಿ ಬಂತು. ಮಾರ್ಚ್ 22ರಂದು ಕರ್ಫ್ಯೂ ಇದೆ ಎಂದು ಮಾರ್ಚ್ 21ರಂದು ತಿಳಿಯಿತು. ನಂತರ ಒಮ್ಮೆಗೇ ಲಾಕ್‍ಡೌನ್ ಜಾರಿಗೆ ಬಂತು. ನಮಗೆ ಸರಕಾರ ಕನಿಷ್ಠ ನಾಲ್ಕು ದಿನ ಸಮಯ ನೀಡಬೇಕಿತ್ತು. ಎರಡು ತಿಂಗಳು ಕಾದು ನಮಗೆ ಇಲ್ಲಿ ಏನೂ ಇಲ್ಲದೇ ಇರುವುದರಿಂದ ಹಾಗೂ ಲಾಕ್ ಡೌನ್ ವಿಸ್ತರಿಸಲಾಗಿರುವುದರಿಂದ ಮನೆಯತ್ತ ನಡೆದಿದ್ದೇವೆ. ನಮ್ಮ ಬಾಡಿಗೆ ತಿಂಗಳಿಗೆ ರೂ 2500 ಆಗಿತ್ತು. ನಮ್ಮಲ್ಲಿ ಒಂದು ನಯಾ ಪೈಸೆ ಇಲ್ಲ, ಕೇವಲ ನಡೆಯುತ್ತಿದ್ದೇವೆ. ಯಾರಾದರೂ ಏನಾದರೂ  ಕೊಟ್ಟರೆ ನಾವು ತಿನ್ನುತ್ತೇವೆ. ನಮಗೆ ನಮ್ಮ ಜೀವ  ಉಳಿಸಬೇಕಷ್ಟೇ,'' ಎಂದು ಅವರು ಹೇಳುತ್ತಾರೆ.

``ಕೊರೋನವೈರಸ್ ನಮಗೆ ನೋವು ಕೊಡುತ್ತಿಲ್ಲ ಆದರೆ ಬಡತನ ನೋವು ಕೊಡುತ್ತಿದೆ,''ಎಂದು ಇನ್ನೊಬ್ಬಾತ ಹೇಳುತ್ತಾನೆ. ಕೊನೆಗೆ ವಲಸಿಗ ಕಾರ್ಮಿಕರ ಮನವಿಯಂತೆ ಅವರಿಗೆ ಮಿನಿ ಬಸ್ ಮತ್ತು ಕಾರುಗಳಲ್ಲಿ ಝಾನ್ಸಿಗೆ ತೆರಳಲು ರಾಹುಲ್ ಏರ್ಪಾಟು ಮಾಡುತ್ತಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News