ಸಂಪತ್ತನ್ನು ಸಮಾನವಾಗಿ ಹಂಚದವರು ಕೋವಿಡ್ ಹೊರೆಯನ್ನು ಮಾತ್ರ ಹಂಚುತ್ತಿರುವುದೇಕೆ?

Update: 2020-05-25 08:59 GMT

ಆತ್ಮೀಯರೇ, 

ಕರ್ನಾಟಕದ ಯಡಿಯೂರಪ್ಪನವರ ಸರ್ಕಾರವು ಸಹ ಕಾರ್ಮಿಕರ ದುಡಿಮೆಯ ಅವಧಿಯನ್ನು 10 ಗಂಟೆಗೆ ಹೆಚ್ಚಿಸಿದೆ. ಹಾಗು ಆ ಮೂಲಕ ಕೋವಿಡ್ ಸಂಕಷ್ಟದ ಅವಧಿಯಲ್ಲೂ ಕಾರ್ಮಿಕರನ್ನೇ ಸುಲಿಯಲು ನಿರ್ಧರಿಸಿರುವ ಇತರ ಬಿಜೆಪಿ ಸರ್ಕಾರಗಳ ಸಾಲಿಗೆ ಸೇರಿಕೊಂಡಿದೆ.

ಕೋವಿಡ್ ಬಿಕ್ಕಟ್ಟು ದೇಶವನ್ನು ಅಸಾಧಾರಣವಾದ ಆರ್ಥಿಕ ಸಂಕಷ್ಟಕ್ಕೆ ದೂಡಿರುವುದು ನಿಜ. ಆದರೆ ಅದರ ಭಾರ ಹಾಗು ಯಾತನೆಗಳನ್ನು ದೇಶದಲ್ಲಿರುವ ಬಡ-ಮಧ್ಯಮ ವರ್ಗಗಳು ಹೆಚ್ಚಿಗೆ ಅನುಭವಿಸುತ್ತಿವೆಯೇ ವಿನಾ ಈ ದೇಶದಲ್ಲಿರುವ ಕೋಟ್ಯಾಧಿಪತಿಗಳಲ್ಲ.

ವಾಸ್ತವವಾಗಿ ಈ ದೇಶದ ಕೋಟ್ಯಾಧಿಪತಿಗಳು ಈ ಬಿಕ್ಕಟ್ಟಿನ ಅವಧಿಯಲ್ಲೂ ಲಾಭ ಮಾಡುತ್ತಿದ್ದಾರೆ. ಅವರ ನೇತಾರನಾದ  ಅಂಬಾನಿಗೆ ಈ ಕಷ್ಟ ಕಾಲದಲ್ಲೂ ಹತ್ತಾರು ಸಾವಿರ ಕೋಟಿಗಳ ಹೂಡಿಕೆ ಹರಿದು ಬರುತ್ತಲೇ ಇದೆ. ಇತ್ತೀಚೆಗೆ ಬಿಡುಗಡೆ ಆದ ಏಷಿಯಾದ ಶ್ರೀಮಂತರ ಪಟ್ಟಿಯಲ್ಲೂ ಅವರ ಮೊದಲ ಸ್ಥಾನಕ್ಕೆ ಯಾವುದೇ ಮುಕ್ಕಾಗಿಲ್ಲ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಯದ್ದು ಒಂಭತ್ತನೇ ಸ್ಥಾನ.

ಆದರೆ ಮತ್ತೊಂದು ತುದಿಯಲ್ಲಿ ಈ ದೇಶದ ವಲಸೆ ಕಾರ್ಮಿಕರು, ರೈತಾಪಿಗಳು, ದಿನಗೂಲಿಗಳು, ಸಣ್ಣ-ಅತಿಸಣ್ಣ ಉದ್ದಿಮೆದಾರರು ಜೀವನವನ್ನು, ಜೀವನೋಪಾಯಗಳನ್ನು,  ಆದಾಯ ಮೂಲಗಳನ್ನು, ಉಳಿತಾಯಗಳನ್ನು ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿದ್ದಾರೆ.

ಹೀಗಾಗಿ ಒಂದು ಪ್ರಜಾತಾಂತ್ರಿಕ ಸರ್ಕಾರವು ಈ ಆರ್ಥಿಕ ಸಂಕಷ್ಟದ ಭಾರವನ್ನು ಶ್ರೀಮಂತವರ್ಗದ ಮೇಲೆ ಹೊರಿಸಬೇಕೇ ವಿನಾ ಈಗಾಗಲೇ ಮೂಳೆ ಚಕ್ಕಳವಾಗಿ ಬೀದಿಪಾಲಾಗಿರುವ ಜನಸಾಮಾನ್ಯರ ಮೇಲಲ್ಲ.

ಆದರೆ ಸರ್ಕಾರ ಮಾಡುತ್ತಿರುವುದೇನು?

ಮೊದಲಿಗೆ ಅವಿವೇಕದ ಲಾಕ್ ಡೌನ್ ಘೋಷಿಸಿ ಭರ್ತಿ 50 ದಿನಗಳಾದ ನಂತರದಲ್ಲಿ ಅತ್ಯಂತ ತಡವಾಗಿ 20 ಲಕ್ಷ ಕೋಟಿ ರೂ.ಗಳ ಒಂದು ಪ್ಯಾಕೇಜ್ ಘೋಷಿಸಿದೆ. ಆ ಪ್ಯಾಕೇಜು ಜನರ ಗಾಯಕ್ಕೆ ಉಪ್ಪು ಸವರುವ, ಮತ್ತಷ್ಟು ಅಪಮಾನ ಮಾಡುವ ಮಹಾದ್ರೋಹದ ಪ್ಯಾಕೇಜೆಂಬುದು ಸ್ಪಷ್ಟವಾಗಿದೆ.

ಕೋವಿಡ್ ಸಂಕಷ್ಟಗಳಿಗೆ ಯಾವ ರೀತಿಯಿಂದಲೂ ಪರಿಹಾರ ಒದಗಿಸಿಕೊಡದ ಹಾಗೂ ದೇಶದ ಸಂಪತ್ತನ್ನು ಹರಾಜು ಹಾಕಲು ಕಲ್ಲಿದ್ದಲು, ಬಾಹ್ಯಾಕಾಶ, ಇನ್ನಿತರ ಕೀಲಕ ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಿದೆ. ಇದು ಈಗಾಗಲೇ ಈ ವಲಯದಲ್ಲಿ ಲೂಟಿ ಮಾಡುತ್ತಿರುವ ಅದಾನಿ, ಅಂಬಾನಿ, ಟಾಟಾ, ವೇದಾಂತದಂತಹ ಈ ದೇಶದ ಹಾಗು ವಿದೇಶಿ ಕಂಪನಿಗಳಿಗೆ ಮುಗಿಲು ಮುಟ್ಟುವಷ್ಟು ಲಾಭವನ್ನು ಮಾಡಿಕೊಡುತ್ತದೆ. ಅಕಸ್ಮಾತ್ ನಷ್ಟವಾದರೆ ಅದರ ಭಾರವನ್ನು ದೇಶದ ಜನರ ಮೇಲೆ ಹಾಕುವ "ದಿವಾಳಿ"ಕೋರ ಕಾಯಿದೆಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ.

ಹೀಗಿರುವಾಗ ಕೋವಿಡ್ ಬಿಕ್ಕಟ್ಟಿಗೆ ಮುಂಚೆಯೂ ಅಥವಾ ಕೋವಿಡ್ ಬಿಕ್ಕಟ್ಟಿನ ಕಾಲದಲ್ಲೂ ಬಡಜನರ ಬದುಕನ್ನು ಹರಿದು ತಿನ್ನುತ್ತಿರುವ ರಣಹದ್ದುಗಳು ಭಾರತದ ಈ ಶ್ರೀಮಂತ ವರ್ಗಗಳೇ ಆಗಿವೆ. ಆದ್ದರಿಂದ ಕೋವಿಡ್ ಸಂಕಷ್ಟದ ಭಾರವನ್ನು ಈ ವರ್ಗಗಳೇ ಹೊರಬೇಕಲ್ಲವೇ?

ವಾಸ್ತವದಲ್ಲಿ ಇಂದಿನ ಕೋವಿಡ್ ಸಂದರ್ಭದಲ್ಲಿ ಜಗತ್ತಿನಾದ್ಯಂತ ಅದರಲ್ಲೂ ವಿಶೇಷವಾಗಿ ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ತಮ್ಮ ತಮ್ಮ ದೇಶಗಳ ಅತಿ ಶ್ರೀಮಂತರ ಮೇಲೆ ಕೋವಿಡ್ ತೆರಿಗೆಯನ್ನು ಹಾಕಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ.

ಲ್ಯಾಟಿನ್ ಅಮೆರಿಕಾದ Solidarity Tax:

ಈಗಾಗಲೇ ಲ್ಯಾಟಿನ್ ಅಮೆರಿಕಾದ ಪೆರು ದೇಶದಲ್ಲಿ ಮಾಸಿಕ 3000 ಡಾಲರ್ ಗಿಂತ ಹೆಚ್ಚಿನ ಆದಾಯವನ್ನು ಗಳಿಸುವ ವರ್ಗದ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪವನ್ನು ಪೆರು ಅಧ್ಯಕ್ಷರು ಮುಂದಿಟ್ಟಿದ್ದಾರೆ. ಅದನ್ನು ಅವರು "Solidarity Tax" ಎಂದು ಕರೆದಿದ್ದಾರೆ.

ಅರ್ಜೆಂಟೀನಾ ದಲ್ಲಿ 3 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ಆದಾಯ /ಲಾಭ ಹೊಂದಿರುವ ಶ್ರೀಮಂತರ ಮೇಲೆ ಕೋವಿಡ್ ಅವಧಿಯಲ್ಲಿ ಶೇ. 2ರಷ್ಟು ಹೆಚ್ಚುವರಿ ತೆರಿಗೆಯನ್ನು ಹಾಗು 3 ಬಿಲಿಯನ್ ಪೆಸೊಗಿಂತಲೂ ಹೆಚ್ಚಿನ ಸಂಪತ್ತನ್ನು ಹೊಂದಿರುವ 12,000 ಜನರ ಮೇಲೆ ಶೆ. 3.5ರಷ್ಟು ಕೋವಿಡ್ ತೆರಿಗೆಯನ್ನು ವಿಧಿಸಲು ಆ ದೇಶದ ಉಪಾಧ್ಯಕ್ಷರು ಮುಂದಿಟ್ಟಿರುವ ಪ್ರಸ್ತಾಪವನ್ನು ಅರ್ಜೆಂಟಿನಾದ ಜನತೆ ಅತ್ಯುತ್ಸಾಹದಿಂದ ಬೆಂಬಲಿಸಿದ್ದಾರೆ.

ಕೊಲಂಬಿಯಾದಲ್ಲಿ 1.3 ಮಿಲಿಯನ್ ಡಾಲರಿಗಿಂತಲೂ ಹೆಚ್ಚಿನ ಸಂಪತ್ತನ್ನು ಹೊಂದಿರುವವರ ಮೇಲೆ ಶೇ. 1ರಷ್ಟು ಆಸ್ತಿ ತೆರಿಗೆಯನ್ನು ವಿಧಿಸಲಾಗಿದೆ. ಮತ್ತು ಮಾಸಿಕ 2500 ಡಾಲರ್ಗಳಿಗಿಂತಲೂ ಹೆಚ್ಚಿನ ಸಂಬಳ ತೆಗೆದುಕೊಳ್ಳುವವರ ಮೇಲೆ ಮೂರೂ ತಿಂಗಳ ಕಾಲ "Solidarity Tax" ಅನ್ನು ವಿಧಿಸಲಾಗಿದೆ.

ಗ್ವಾಟೆಮಾಲಾ ದೇಶದಲ್ಲಿ ಮಾಸಿಕ 8000 ಡಾಲರ್ ಆದಾಯವಿರುವ ವರ್ಗದ ಮೇಲೆ ಶೇ. 10 ರಷ್ಟು ಕೋವಿಡ್ ತೆರಿಗೆಯನ್ನು ಇಡೀ ವರ್ಷ ಪೂರ್ತಿ ಸಂಗ್ರಹಿಸಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ.

ಇದಲ್ಲದೆ ಈಕ್ವೆಡಾರ್ ದೇಶದ ವಿರೋಧ ಪಕ್ಷಗಳು ಒಂದು ಮಿಲಿಯನ್ ಡಾಲರ್ಗಿಂತ ಹೆಚ್ಚಿನ ಸಂಪತ್ತುಳ್ಳವರ ಮೇಲೆ ಹೆಚ್ಚುವರಿಯಾಗಿ ಶೇ.1ರಷ್ಟು ತೆರಿಗೆ ವಿಧಿಸಬೇಕೆಂಬ ಚಳವಳಿ ಪ್ರಾರಂಭಿಸಿವೆ. ಪೆರುಗ್ವೆಯ ವಿರೋಧಪಕ್ಷಗಳು 10 ಮಿಲಿಯನ್ ಡಾಲರ್ಗಿಂತ ಹೆಚ್ಚಿನ ಆದಾಯವುಳ್ಳವರ ಮೇಲೆ ಹೆಚ್ಚುವರಿಯಾಗಿ ಶೇ.1 ರಷ್ಟು ತೆರಿಗೆ ಹಾಕಬೇಕೆಂದು ಆಗ್ರಹಿಸುತ್ತಿವೆ. ಬ್ರೆಜಿಲ್ ನ ವಿರೋಧಪಕ್ಷಗಳು ಸಹ ಶ್ರೀಮಂತರ ಸಂಪತ್ತಿನ ಮೇಲೆ ಕೋವಿಡ್ ತೆರಿಗೆ ವಿಧಿಯಬೇಕೆಂಬ ಪ್ರಚಾರಾಂದೋಲನ ಪ್ರಾರಂಭಿಸಿವೆ.

ಹೀಗೆ ಲ್ಯಾಟಿನ ಅಮೆರಿಕಾ ದೇಶಗಳಲ್ಲಿ ಆಯಾ ದೇಶಗಳ ಶ್ರೀಮಂತರ ಮೇಲೆ Solidarity Tax, Wealth Tax, Covid Tax ... ಇನ್ನಿತರ ಹೆಸರಿನಲ್ಲಿ ಹೆಚ್ಚುವರಿ ತೆರಿಗೆ ವಿಧಿಸಬೇಕೆಂಬ ಒತ್ತಾಯ ಚಳವಳಿಯ ರೂಪವನ್ನೇ ಪಡೆದುಬಿಟ್ಟಿದೆ. ಇದನ್ನು ಇತ್ತೀಚೆಗೆ Americas Quarterly ಎಂಬ ಜರ್ನಲ್ ವಿಸ್ತೃತವಾಗಿ ವರದಿಯನ್ನು ಮಾಡಿದೆ. ಆಸಕ್ತರು ಆ ವರದಿಯನ್ನು ಈ ಕೊಂಡಿಯಲ್ಲಿ ಓದಿಕೊಳ್ಳಬಹುದು

https://www.americasquarterly.org/article/latin-americas-plans-to-tax-the-rich/

ಭಾರತದ ಕಥೆ- ಶ್ರೀಮಂತ ಬಡವರು ಹಾಗು ಕಾರ್ಪೊರೇಟ್ ಗಣತಂತ್ರ

ಇಂದು ಕೋವಿಡ್ ದಾಳಿಯಿಂದ ಭಾರತದ ಬಡವರನ್ನು ಪಾರು ಮಾಡಲು ದೇಶದ 90 ಕೋಟಿ ಬಡ-ಮಧ್ಯಮವರ್ಗದವರ ಜೋಬಿಗೆ ಕನಿಷ್ಠ 5-6 ಲಕ್ಷ ಕೋಟಿ ರೂಪಾಯಿಗಳನ್ನು ತುರ್ತಾಗಿ ವರ್ಗಾವಣೆ ಮಾಡುವ ಅಗತ್ಯವಿದೆ.

ಅಷ್ಟು ಸಂಪನ್ಮೂಲವನ್ನು ನಮ್ಮ ದೇಶದಲ್ಲೂ ಶ್ರೀಮಂತರ ಸಂಪತ್ತಿನ ಮೇಲೆ ತೆರಿಗೆ ಹಾಕಿ ಕ್ರೂಢೀಕರಿಸಲು ಸಾಧ್ಯವಿಲ್ಲವೇ?, ನಮ್ಮ ದೇಶದ ಶ್ರೀಮಂತರು ಕೋವಿಡ್ ತೆರಿಗೆ ಕಟ್ಟಲಾಗದಷ್ಟು ಅಥವಾ ತಮ್ಮ ದೇಶದ ಸಹವಾಸಿಗಳಿಗಾಗಿ Solidarity Tax ಕಟ್ಟಲಾಗದಷ್ಟು ಬಡವರೇ?

Credit Sussie ಎಂಬ ಜಗತ್ತಿನ ಆರ್ಥಿಕ ಸುಧಾರಣೆಗಳ ವಿಶ್ಲೇಷಣೆ ಮಾಡುವ ಹಾಗು ಮುಕ್ತ ಮಾರುಕಟ್ಟೆ ಪರವಾದ  ಅಂತಾರಾಷ್ಟ್ರೀಯ ಸಂಸ್ಥೆಯ ಪ್ರಕಾರ 2019ರಲ್ಲಿ ಭಾರತದ ಸಂಪತ್ತು 12.5  ಟ್ರಿಲಿಯನ್ ಡಾಲರ್. ಒಂದು ಟ್ರಿಲಿಯನ್ ಎಂದರೆ ಒಂದು ಲಕ್ಷ ಕೋಟಿ. ಹಾಗು ಒಂದು ಡಾಲರ್ ಗೆ ಸರಾಸರಿ 70 ರು. ವಿನಿಮಯ ದರ ಎಂದಿಟ್ಟುಕೊಂಡರೂ ಭಾರತದ ಸಂಪತ್ತು  886 ಲಕ್ಷ ಕೋಟಿ ರೂಪಾಯಿಗಳು ಎಂದಾಯಿತು. ಹೀಗಾಗಿ ಭಾರತವು ಇಂದು ಪ್ರಪಂಚದಲ್ಲಿ 7ನೇ ಅತಿ ಶ್ರೀಮಂತ ರಾಷ್ಟ್ರವಾಗಿದೆ.

ಆದರೆ ಅದೇ ವರದಿ ಹೇಳುವಂತೆ ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಮಾತ್ರ ಈ ಸಂಪತ್ತು ಅತ್ಯಂತ ಅಸಮಾನವಾಗಿ ಹಂಚಿಕೆಯಾಗಿದೆ. 886 ಲಕ್ಷ ಕೋಟಿ ಸಂಪತ್ತಿನಲ್ಲಿ ಶೇ.74ರಷ್ಟು ಅಂದರೆ 686 ಲಕ್ಷ ಕೋಟಿ ರೂಪಾಯಿಯಷ್ಟು ಸಂಪತ್ತು ಕೇವಲ ಈ ದೇಶದ ಶೇ. 10ರಷ್ಟು ಅಂದರೆ 13 ಕೋಟಿ ಜನರ ಬಳಿ ಸಂಗ್ರಹವಾಗಿದೆ. 

ಇನ್ನು ಒಳಹೊಕ್ಕು ನೋಡಿದರೆ ಈ ದೇಶದ ಶೇ.1ರಷ್ಟು ಅಂದರೆ ಕೇವಲ 1.3 ಕೋಟಿ ಜನರ ಬಳಿ 451 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಸಂಗ್ರಹಗೊಂಡಿದೆ. ಅದೇ ವರದಿಯ ಪ್ರಕಾರ ಈ ದೇಶದಲ್ಲಿ ಅಂದಾಜು 12 ಲಕ್ಷ  ಡಾಲರ್ ಮಿಲಿಯನೇರ್ ಗಳಿದ್ದಾರೆ.

(ಹೆಚ್ಚಿನ ವಿವರಗಳಿಗೆ ಆಸಕ್ತರು ಈ ವರದಿಯನ್ನು ಗಮನಿಸಬಹುದು) 

https://www.credit-suisse.com/about-us/en/reports-research/global-wealth-report.html )

2020ರ ಜನವರಿಯಲ್ಲಿ OXFAM ಸಂಸ್ಥೆಯು ಬಿಡುಗಡೆ ಮಾಡಿದ ಜಗತ್ತಿನ ಅಸಮಾನತೆಯ ವರದಿಯ ಪ್ರಕಾರ 2018ರಲ್ಲಿ ಈ ದೇಶದ ಕೇವಲ 63 ಅತಿ ಶ್ರೀಮಂತರ ಬಳಿ ಭಾರತದ ಕೇಂದ್ರ ಸರ್ಕಾರದ ಬಜೆಟ್ಟಿಗಿಂತ ಹೆಚ್ಚಿನ ಸಂಪತ್ತು ಎಂದರೆ 24 ಲಕ್ಷ ಕೋಟಿಗೂ ಹೆಚ್ಚಿನ ಸಂಪತ್ತು ಶೇಖರಗೊಂಡಿತ್ತು.

(https://www.oxfamindia.org/sites/default/files/2020-01/India supplement.pdf)

2019ರಲ್ಲಿ ಮತ್ತೊಂದು ಸಂಸ್ಥೆಯು ಮಾಡಿದ ಅಧ್ಯಯನದ ಪ್ರಕಾರ ಭಾರತದಲ್ಲಿ 137 ಡಾಲರ್ ಬಿಲಿಯನೇರ್ (ಒಂದು ಬಿಲಿಯನ್ ಎಂದರೆ ನೂರು ಕೋಟಿ ) ಗಳಿದ್ದಾರೆ. ಹಾಗು ಪ್ರಪಂಚದಲ್ಲಿ ಅತಿ ಹೆಚ್ಚು ಡಾಲರ್ ಬಿಲಿಯನೇರ್ಗಳನ್ನೂ ಹೊಂದಿರುವರ ಸಂಖ್ಯೆಯಲ್ಲಿ ಭಾರತವು ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿದೆ. ಡಾಲರ್ ಬಿಲಿಯನೇರ್ ಮತ್ತು ಡಾಲರ್ ಮಿಲಿಯನೇರ್ ಗಳ ಸಂಖ್ಯೆಯು ಭಾರತದಲ್ಲೇ ಅತಿ ವೇಗವಾಗಿ ಹೆಚ್ಚಾಗುತ್ತಿದೆ. ಭಾರತದಲ್ಲಿ ಅಂದಾಜು 5896 ಜನರ ಬಳಿ  50 ಮಿಲಿಯನ್ ಡಾಲರ್ ಅಂದರೆ 300 ಕೋಟಿ ರೂ. ಗೂ  ಹೆಚ್ಚಿನ ಸಂಪತ್ತಿದೆ. ಇನ್ನು ನಾಲಕ್ಕು ವರ್ಷಗಳಲ್ಲಿ ಆ ಸಂಖ್ಯೆ 1,00,000ವನ್ನು ದಾಟಲಿದೆ. ಹೆಚ್ಚಿನ ವಿವರಗಳಿಗೆ ಈ ಕೊಂಡಿಯಲ್ಲಿರುವ ವಿವರಗಳನ್ನು ಪರಿಶೀಲಿಸಬಹುದು :

https://www.hurun.net/EN/Article/Details?num=775CEFAE8BF8  

ಅಂದರೆ ದೇಶದ ಸಂಪತ್ತು ವರ್ಷಗಳೆದಂತೆ ಹೆಚ್ಚಾಗುತ್ತಿದೆ.

ಆದರೆ ಅದರಲ್ಲಿ ಶ್ರೀಮಂತರ ಪಾಲು ಸಂವಿಧಾನ ಬಾಹಿರವಾಗಿ 1991ರ ನಂತರ ಹೆಚ್ಚಾಗುತ್ತಲೇ ಬಂದಿದೆ. ಮೋದಿ ಕಾಲದಲ್ಲಿ ಈ ಅಸಮಾನ ಹಂಚಿಕೆ ರಾಕೆಟ್ ಸ್ಪೀಡ್ ಪಡೆದುಕೊಂಡಿದೆ. ಹೀಗಾಗಿ ಈ ದೇಶದಲ್ಲಿ ಸಂಪತ್ತು ಹೆಚ್ಚಾಗುತ್ತಿದೆಯೆ ವಿನಾ ಅದರ ಹಂಚಿಕೆಯಾಗುತ್ತಿಲ್ಲ.

ಸಂಪತ್ತಿನ ಅಸಮಾನ ಹಂಚಿಕೆಯನ್ನು ಅರ್ಥ ಮಾಡಿಕೊಳ್ಳಲು ಸಂಪತ್ತಿನ GINI Coefficient ಎಂಬ ಮಾನಕವನ್ನು ಬಳಸಲಾಗುತ್ತದೆ. ಅದರ ಪ್ರಕಾರ ಒಂದು ದೇಶದಲ್ಲಿರುವ ಸಂಪತ್ತಿನ ಅಸಮಾನತೆಯನ್ನು 0ಯಿಂದ 1 ರವರೆಗಿನ  ಶ್ರೇಯಾಂಕದಲ್ಲಿ ಅಳೆಯಲಾಗುತ್ತದೆ. ಒಂದು ದೇಶದ GINI ಸೊನ್ನೆಯ ಸಮೀಪವಿದೆ ಎಂದರೆ ಅತ್ಯಂತ ಸಮಾನ ಹಂಚಿಕೆಯಾಗಿದೆ ಎಂದರ್ಥ.  GINI 1ಕ್ಕೆ ಸಮೀಪವಿದ್ದರೆ ಸಂಪತ್ತು ಅತ್ಯಂತ ಅಸಮಾನವಾಗಿ ಹಂಚಿಕೆಯಾಗಿದೆ ಎಂದರ್ಥ. ಭಾರತದ ಸಂಪತ್ತಿನ GINI ಕೊಫಿಶಿಯೆಂಟ್ ಸೊನ್ನೆಯ ಸಮೀಪವಿರಲಿ ಎಂದಿಗೂ 0.7ಗಿಂತ ಕೆಳಗಿಳಿದಿರಲಿಲ್ಲ. 

1991ರ ನಂತರವಂತೂ ಈ ಅಸಮಾನತೆ  ಇನ್ನು ಹೆಚ್ಚಾಗಿದೆ. ಕಳೆದ ಐದು ವರ್ಷಗಳ ಮೋದಿ ಹಯಾಮಿನಲ್ಲಿ  ಭಾರತದ ಸಂಪತ್ತಿನ ಅಸಮಾನ ಹಂಚಿಕೆಯ ಕೊಫಿಶಿಯೆಂಟ್ 0.87ನ್ನು ಮುಟ್ಟಿದೆ.

ಭಾರತದಲ್ಲಿ ಸಂಪತ್ತಿನ ಅಸಮಾನ ಹಂಚಿಕೆಯ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡಿರುವ ನೊಬೆಲ್ ವಿಜೇತ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟಿಯವರ ಪ್ರಕಾರ 1950ರ ವೇಳೆಗೆ ಭಾರತ ವಾರ್ಷಿಕ ರಾಷ್ಟ್ರೀಯ ಆದಾಯ 9,476 ಕೋಟಿಯಷ್ಟಿತ್ತು. ಅದು ಈಗ 203 ಲಕ್ಷ ಕೋಟಿಯಾಗಿದೆ. ಅಂದರೆ ಹೆಚ್ಚು ಕಡಿಮೆ 2000 ಪಟ್ಟು ಹೆಚ್ಚಾಗಿದೆ. ಸಂಪತ್ತು 880 ಲಕ್ಷ ಕೋಟಿಯಾಗಿದೆ.

ಅವರ ಮತ್ತೊಂದು ಅಧ್ಯಯನದ ಪ್ರಕಾರ ಭಾರತದ ಸಂಪತ್ತು ಕಳೆದ ವರ್ಷ 44 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದ್ದೇನೋ ನಿಜ. ಆದರೆ ಅದರಲ್ಲಿ ಶೇ.74ರಷ್ಟು ಪಾಲನ್ನು ಈ ದೇಶದ ಒಂದು ಕೋಟಿ ಅತಿ ಶ್ರೀಮಂತರು ಕಬಳಿಸಿದ್ದಾರೆ. ಮತ್ತೊಂದು ಕಡೆ ಈ ಸಂಪತ್ತನ್ನು ಸೃಷ್ಟಿಸಿದ ಈ ದೇಶದ ತಳಹಂತದ ಶೇ.50 ಜನರಿಗೆ ಅಂದರೆ 65 ಕೋಟಿ ಜನರಿಗೆ ಆ ಹೆಚ್ಚುವರಿ 44 ಲಕ್ಷ ಕೋಟಿಯಲ್ಲಿ ದಕ್ಕಿದ್ದು ಕೇವಲ ಶೇ.3 ಮಾತ್ರ!   

(https://wid.world/document/chancelpiketty2017widworld/)

ಆದ್ದರಿಂದಲೇ ಭಾರತಕ್ಕೆ ಅತಿ ಹೆಚ್ಚು ಬಡವರಿರುವ ಶ್ರೀಮಂತರ ದೇಶವೆಂಬ ಹೆಸರು ಬಂದಿದೆ!

ಈ ದೇಶದಲ್ಲಿ ಸಂಪತ್ತಿದೆ. ಆದರೆ ಅದು ಆ ಸಂಪತ್ತನ್ನು ಸೃಷ್ಟಿ ಮಾಡಿರುವವರ ಬಳಿ ಇಲ್ಲ. ಬದಲಿಗೆ ಅದನ್ನು ಲೂಟಿ ಮಾಡುತ್ತಿರುವ ಈ ದೇಶದ ಶೇ. 1ರಷ್ಟು ಅತಿ ಶ್ರೀಮಂತರ ಬಳಿ ಸೇರಿಕೊಂಡಿದೆ. ಹೀಗಾಗಿ ಆ ಸಂಪತ್ತಿನ ಮೇಲೆ ಈ ದೇಶದ ಬಡಜನರ ಹಾಗು ಎಲ್ಲಾ ದೇಶವಾಸಿಗಳ ಹಕ್ಕಿದೆ

ವಾಸ್ತವದಲ್ಲಿ ಕಳೆದ 70 ವರ್ಷಗಳಲ್ಲಿ ಈ ದೇಶದ ಸಂಪತ್ತಿನಲ್ಲಿ ಭಾರತದ ದುಡಿಯುವ ಜನರ ಪಾಲು ಒಂದೇ ಸಮನೆ ಕಡಿಮೆಯಾಗುತ್ತಿದೆ ಎಂಬುದನ್ನು ILO ವರದಿಗಳು ಸಾಬೀತುಪಡಿಸುತ್ತವೆ.

ಈ ಸಂಪತ್ತಿನ ಅಸಮಾನತೆಯ ಕಾರಣದಿಂದಾಗಿಯೇ ಇಂದು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಹಾಗು ಲಾಕ್ ಡೌನಿನ ಕಾರಣದಿಂದಾಗಿ ಈ ದೇಶದ ಶೇ. 90 ಭಾಗ ಭಾರತೀಯರು ಸಾವನ್ನು ಮತ್ತು ಸಂಕಷ್ಟಗಳನ್ನು ಎದುರಿಸುವಂತಾಗಿದೆ.

ಸಂಪತ್ತು ಸಮಾನವಾಗಿ ಹಂಚಿಕೆಯಾಗಿದ್ದರೆ ಹೊಟ್ಟೆ ಪಾಡಿಗೆ ಮಹಾನಗರಗಳಿಗೆ ವಲಸೆ ಹೋಗುವುದು  ಅನಿವಾರ್ಯವಾಗುತ್ತಿರಲಿಲ್ಲ. ಹಾಗು ಈಗ ಕೋವಿಡ್ ಲಾಕ್ ಡೌನಿನಿಂದಾಗಿ ನಡೆದುಕೊಂಡೇ ಸಾವಿರಾರು ಮೈಲಿ ನಡೆಯುತ್ತಾ ಪ್ರಾಣ ಬಿಡುವ ದಾರುಣತೆಗೆ ಈ ದೇಶದ 12 ಕೋಟಿ ವಲಸೆ ಕಾರ್ಮಿಕರು ಬಲಿಯಾಗಬೇಕಿರಲಿಲ್ಲ.

ಸಂಪತ್ತು ಸಮಾನವಾಗಿ ಹಂಚಿಕೆಯಾಗಿದ್ದರೆ ಕಾಲು ಚಾಚುವಷ್ಟು ಮನೆಯು ಇಲ್ಲದೆ ಮನೆಮಕ್ಕಳೆಲ್ಲಾ ಕೋವಿಡ್ ಗೆ ಬಲಿಯಾಗುವ ಕ್ರೌರ್ಯವನ್ನು ಮಹಾನಗರಗಳ ಹತ್ತಾರು ಕೋಟಿ ಸ್ಲಮ್ ವಾಸಿಗಳು ಎದುರಿಸಬೇಕಿರಲಿಲ್ಲ. ಸಂಪತ್ತು ಸಮಾನವಾಗಿ ಹಂಚಿಕೆಯಾಗಿದ್ದರೆ ಕೋವಿಡ್ ಬಿಕ್ಕಟ್ಟಿನಲ್ಲಿ ಬೆಳೆದ ಬೆಳೆಯನ್ನು ಮಾರಲಾಗದೆ ಮಾಡಿದ ಸಾಲವನ್ನು ತೀರಿಸಲಾಗದೆ ಬಡರೈತಾಪಿ ಜನ ಆತ್ಮಹತ್ಯೆ ಮಾಡಿಕೊಳ್ಳಬೇಕಿರಲಿಲ್ಲ.

ವಾಸ್ತವವಾಗಿ ವೈದ್ಯರು ಹೇಳುವಂತೆ ಕೋವಿಡ್ ಬಂದವರೆಲ್ಲಾ ಸಾಯುವುದಿಲ್ಲ. ಯಾರಿಗೆ ಕೋವಿಡ್ ಜೊತೆಗೆ ಇತರ ಸಹ-ಕಾಯಿಲೆಗಳು (Comorbidities) ಇರುತ್ತವೋ, ಯಾರು ಕೋವಿಡ್ ಬಂದಾಗ ಪರಿಣಾಮಕಾರಿಯಾಗಿ ಕ್ವಾರೆಂಟೈನ್ ಮಾಡಿಕೊಂಡು ಆರೈಕೆ ಮಾಡಿಕೊಳ್ಳಲಾಗುವುದಿಲ್ಲವೋ ಅವರನ್ನು ಕೋವಿಡ್ ಬಲಿ ತೆಗೆದುಕೊಳ್ಳುತ್ತದಂತೆ  

ಈ ದೇಶದ ಸಂಪತ್ತಿನ ಅಸಮಾನ ಹಂಚಿಕೆ ಮತ್ತು ಅದರ ಪರಿಣಾಮವಾದ ಬಡತನ, ಅಪೌಷ್ಠಿಕತೆಗಳು  ಭಾರತದ ಬಡಜನತೆ ಈಗಾಗಲೇ ಎದುರಿಸುತ್ತಿದ್ದ ಮಾರಣಾಂತಿಕ ಸಹ ಕಾಯಿಲೆಯಾಗಿಬಿಟ್ಟಿದೆ.  (co-morbidity). ಅದರ ಮೇಲೆ ಈಗ ಕೋವಿಡ್ ದಾಳಿಯಾಗಿದೆ. ಹೀಗಾಗಿ ಬರಲಿರುವ ದಿನಗಳಲ್ಲಿ ಕೋವಿಡ್ ಬಲಿ ತೆಗೆದುಕೊಳ್ಳುವುದು ಬಡವರನ್ನೇ ಆಗಲಿದೆ. ಇದಕ್ಕೆ ನೇರ ಕಾರಣ ಸಂಪತ್ತಿನ ಅಸಮಾನ ಹಂಚಿಕೆಯೇ ಆಗಿದೆ. ಇಂದು ಕೋವಿಡ್ ಹಾಗೂ ಹಸಿವು, ನಿರುದ್ಯೋಗಗಳ ಅವಳಿ ದಾಳಿಯಿಂದ ಈ ದೇಶದ 90 ಕೋಟಿ ಜನರನ್ನು ಬಚಾವು ಮಾಡಬೇಕೆಂದರೆ ತುರ್ತಾಗಿ ಕನಿಷ್ಠ 5-6ಲಕ್ಷ ಕೋಟಿಯಷ್ಟು ಸಂಪನ್ಮೂಲವನ್ನು ಬಡವರ ಜೋಬಿಗೆ ವರ್ಗಾಯಿಸಬೇಕಿದೆ.

ಅದಕ್ಕೆ ಇರುವ ಏಕೈಕ ದಾರಿ ಈ ದೇಶದ ಅತಿ ಶ್ರೀಮಂತರ ಮೇಲೆ ತೆರಿಗೆ ಹಾಕುವುದೇ ವಿನಾ ಕಾರ್ಮಿಕ ಮೇಲೆ ಬಡಜನರ ಮೇಲೆ ಇನ್ನಷ್ಟು ಹೊರೆಯನ್ನು ಹೊರಿಸುವುದಲ್ಲ.

ಹಾಗೆ ನೋಡಿದರೆ ನಮ್ಮ ದೇಶದ ಸಂವಿಧಾನದ ಪ್ರಭುತ್ವ ನಿರ್ದೇಶನಾ ತತ್ವಗಳ ಆರ್ಟಿಕಲ್ 39, ಪ್ರಭುತ್ವಕ್ಕೆ ಸಂಪತ್ತು ಒಂದು ಕಡೆ ಕೇಂದ್ರೀಕರಣವಾಗದಂತೆ ಹಾಗು ಅದು ಸಮಾನ ಹಂಚಿಕೆಯಾಗುವಂತೆ ಮಾಡುವ ಆರ್ಥಿಕ ನೀತಿಗಳನ್ನು ಜಾರಿ ಮಾಡುವ ನಿರ್ದೇಶನವನ್ನು ನೀಡಿದೆ. ಈ ಉದ್ದೇಶದ ಜಾರಿಗಾಗಿ ಶ್ರೀಮಂತರ ಮೇಲೆ ಹೆಚ್ಚಿಗೆ ತೆರಿಗೆ ಹಾಕಿ ಬಡವರ ಮೇಲೆ ಕಡಿಮೆ ತೆರಿಗೆ ಹಾಕುವ ಒಂದು ಬಗೆಯ ‘ಕಲ್ಯಾಣ ರಾಜ್ಯ’ (Welfare State) ಪರಿಕಲ್ಪನೆಯನ್ನು ದೇಶ ಅಳವಡಿಸಿಕೊಳ್ಳಬೇಕೆಂಬ ಆಗ್ರಹ ಸಂವಿಧಾನದಲ್ಲಿತ್ತು.

ಅದರ ಭಾಗವಾಗಿ ಪರಂಪರಾನುಗತವಾಗಿ ಸಂಪತ್ತನ್ನು ಪಡೆದುಕೊಳ್ಳುವವರ ಮೇಲೆ ವಾರಸತ್ವ ತೆರಿಗೆ (Inheritance Tax)  ಹಾಗು 1957ರಲ್ಲಿ ಸಂಪತ್ತಿನ ಮೇಲೆ ತೆರಿಗೆ (Wealth Tax) ಅನ್ನು ಜಾರಿ ಮಾಡಲಾಯಿತು. ಆದರೆ ಅವೆರಡು ಸಹ ಗಂಭೀರವಾಗಿ ಅನುಷ್ಠಾನಗೊಳ್ಳಲೇ ಇಲ್ಲ. ಬದಲಾಗಿ 1985ರಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಹೊಸ ಆರ್ಥಿಕ ನೀತಿಯ ಭಾಗವಾಗಿ ವಾರಸತ್ವ ತೆರಿಗೆಯನ್ನು ರದ್ದುಗೊಳಿಸದರೆ 2015ರಲ್ಲಿ ಬಿಜೆಪಿ ಸರ್ಕಾರ ಕಾರ್ಪೊರೇಟ್ ಧಣಿಗಳ ಋಣವನ್ನು ತೀರಿಸಿಕೊಳ್ಳಲು ಸಂಪತ್ತಿನ ತೆರಿಗೆಯನ್ನು ರದ್ದುಗೊಳಿಸಿತು.

ಇನ್ನು ಶ್ರೀಮಂತರ ವೈಯಕ್ತಿಕ ಹಾಗು ಕಾರ್ಪೊರೇಟ್ ಲಾಭದ ಮೇಲೆ ನೇರ ತರಿಗೆಗಳು ಜಾರಿಯಲ್ಲಿವೆ. ಆದರೆ 1991ರ ನಂತರದಲ್ಲಿ ಭಾರತದ ತೆರಿಗೆ ಸಂಗ್ರಹದಲ್ಲಿ ಜನಸಾಮಾನ್ಯರಿಂದ ವಸೂಲಿ ಮಾಡುವ ಪರೋಕ್ಷ ತೆರಿಗೆಯ ಪ್ರಮಾಣ ಶೇ. 65ರಷ್ಟಾಗಿದ್ದರೆ  ನೇರ ತೆರಿಗೆಯ ಪ್ರಮಾಣ ಕೇವಲ ಶೇ.35ಕ್ಕೆ ಇಳಿದಿದೆ.

ಆದರೆ ಮೋದಿ ಸರ್ಕಾರ GST ಜಾರಿ ಮಾಡಿದ ಮೇಲೆ ಬಡಮಧ್ಯಮ ವರ್ಗ ಹಾಗು ರೈತಾಪಿ ಕಟ್ಟುವ ಪರೋಕ್ಷ ತೆರಿಗೆಯ ಪ್ರಮಾಣ ಇನ್ನು ಹೆಚ್ಚಾಗಿದೆ. ಈ ಸಂವಿಧಾನ ವಿರೋಧಿ ಅಪರಾಧದಲ್ಲಿ ಕಾಂಗ್ರೆಸ್ಸನ್ನು ಒಳಗೊಂಡಂತೆ ಎಲ್ಲಾ ಪಕ್ಷಗಳು ಪಾಲುದಾರರು. ಆದರೆ...ಈ ಜನದ್ರೋಹಕ್ಕೆ ದೇಶಪ್ರೇಮವೆಂಬ ಬಣ್ಣಹಚ್ಚಿ ರಾಕೆಟ್ ವೇಗದಲ್ಲಿ ಜಾರಿ ಮಾಡುತ್ತಿರುವ ಕೀರ್ತಿ ಮಾತ್ರ ಮೋದಿ ಸರ್ಕಾರಕ್ಕೆ ಮತ್ತು ಅದರ ಪ್ಯಾಶಿಸ್ಟ್ ಯಂತ್ರಾತಂಗಗಳಿಗೆ ಸಲ್ಲಬೇಕು.

2019ರಲ್ಲಿ ಕಾರ್ಪೊರೇಟ್ ಕುಳಗಳ ಪ್ರತ್ಯಕ್ಷ ಸಹಕಾರದೊಂದಿಗೆ ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದಮೇಲೆ ನೇರ  ತೆರಿಗೆಯ ಪ್ರಮಾಣವನ್ನು ಇನ್ನು ತೀವ್ರವಾಗಿ ಕಡಿತಗೊಳಿಸಿದೆ. 2019ರ ಸೆಪ್ಟೆಂಬರ್ ನಲ್ಲಿ ಕಾರ್ಪೊರೇಟ್ ತೆರಿಗೆಯ ಮೇಲಿದ್ದ ಮೇಲ್ಮಿತಿಯನ್ನು ಶೇ.35ರಿಂದ 25ಕ್ಕೆ ಇಳಿಸಿ ಕೇವಲ 5000 ಉದ್ದಿಮೆಪತಿಗಳ ಬಳಿ ಅಂದಾಜು 1,45,000 ಕೋಟಿ  ರುಗಳಷ್ಟು ಉಳಿತಾಯವನ್ನು ಮಾಡಿಕೊಟ್ಟಿದ್ದು ಮೋದಿ ಸರ್ಕಾರದ ಇತ್ತೀಚಿನ ಕೊಡುಗೆ. ಈ ಮೊತ್ತವು  ಕೋವಿಡ್ ಪ್ಯಾಕೇಜಿನಲ್ಲಿ ಈ ದೇಶದ 90 ಕೋಟಿ ಕೂಲಿ ಕಾರ್ಮಿಕರು ಹಾಗು  ರೈತಾಪಿಗಳಿಗೆ ಕೊಟ್ಟಿರುವುದಕ್ಕಿಂತಲೂ ಕಡಿಮೆ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಲೇ ಬೇಕು.

ಆದ್ದರಿಂದಲೇ ದೇಶ ಮತ್ತು ಜಗತ್ತು ಯಾವುದೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರು ಭಾರತದಲ್ಲಿ ಮಾತ್ರ ಬಿಲಿಯನೇರ್ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಕೋವಿಡ್ ಬಿಕ್ಕಟ್ಟು ಈ ದೇಶದ ಸಂಪತ್ತಿನ ಅಸಮಾನ ಹಂಚಿಕೆಯ ರಾಜಕೀಯದ ಕ್ರೂರ ಪರಿಣಾಮಗಳನ್ನು ದಾರುಣವಾಗಿ ಬಿಚ್ಚಿಟ್ಟಿದೆ.

ಸಂಪತ್ತಿನ ಹಂಚಿಕೆಯೆಂಬುದು ಒಂದು ಆರ್ಥಿಕ ಕ್ರಮ ಮಾತ್ರವಲ್ಲ. ಅದು ಪ್ರಧಾನವಾಗಿ ರಾಜಕೀಯ ನಡೆ. ಈ ದೇಶದ ರಾಜಕೀಯ ಅಧಿಕಾರ ಯಾವ ವರ್ಗಗಳ ಪರವಾಗಿದೆ ಎಂಬುದರ ಲಿಟ್ಮಸ್ ಟೆಸ್ಟ್.

ಸಂಪತ್ತಿನ ತೆರಿಗೆ ಮತ್ತು ಸಾಮಾಜಿಕ ನ್ಯಾಯ

ಆದ್ದರಿಂದ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕೋವಿಡ್ ತೆರಿಗೆ ಅಥವಾ ಸಂಪತ್ತಿನ ಮೇಲಿನ ತೆರಿಗೆಯ ಹಾಕುವುದನ್ನು ಒಂದು ಮರು ವಿತರಣಾ ನ್ಯಾಯ (Re distributive Justice ) ವೆಂಬ ರಾಜಕೀಯ ಕ್ರಮವಾಗಿ ನೋಡಬೇಕು.

PM CARES ಅಥವಾ CSR (Corporate Social Responsibility) ಯ ಹೆಸರಿನಲ್ಲಿ ಶ್ರೀಮಂತ ಉದ್ದಿಮೆಗಳು ತೆರಿಗೆ ಕದಿಯಲು ಕೊಡುವ ಅಥವಾ 'ಚಾರಿಟಿ'ಯ- ದಾನ-ಧರ್ಮ ದ  ಭಾಗವಾಗಿ ನೀಡುವ ಹಣವನ್ನು ಹೊಣೆಗಾರಿಕೆಯೆಂದೋ ಅಥವಾ ಕೊಡುಗೈ ದಾನವೆಂದೋ ಕೊಂಡಾಡಬೇಕೆಂದು ಸರ್ಕಾರ ನಿರೀಕ್ಷಿಸುತ್ತದೆ.

ಆದರೆ ಈ ಧೋರಣೆ ದೇಶದ ಸಂಪತ್ತಿನ ಮೇಲೆ ಜನತೆಗಿರುವ ಸಮಾನ ಹಕ್ಕಿನ ಪ್ರಶ್ನೆಯನ್ನು ಮರೆಮಾಚುತ್ತದೆ. ಹಾಗೂ ಸಂಪತ್ತಿನ ಆಸಮಾನ ಹಂಚಿಕೆಯ ವ್ಯವಸ್ಥಿತ ಅನ್ಯಾಯಕ್ಕೆ ಒಂದಷ್ಟು ಮುಲಾಮು ಹಚ್ಚಿ ತೆಪ್ಪಗಾಗಿಸುತ್ತದೆ. ಈ ಕಾರಣದಿಂದಾಗಿ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಾದರೂ ಈ ಅತಿ ಶ್ರೀಮಂತರ ಈ ಅಶ್ಲೀಲ ಸಂಪತ್ತಿನ ಸಂಗ್ರಹದ ಮೇಲೆ ಮೇಲೆ ಕೋವಿಡ್ ತೆರಿಗೆಯನ್ನು ಹಾಕುವುದು  ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ಇದು ಭಾರತದ ಬಡಜನರ ಹಕ್ಕಾಗಿದೆ.

ವಾಸ್ತವವಾಗಿ ಈ �

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News