97 ಜನರು ಮೃತಪಟ್ಟ ವಿಮಾನ ದುರಂತ: ಮೂರು ಎಚ್ಚರಿಕೆಗಳನ್ನು ಕಡೆಗಣಿಸಿದ್ದ ಪೈಲಟ್ ?

Update: 2020-05-25 16:29 GMT

ಕರಾಚಿ: ಶುಕ್ರವಾರ  ಪತನಗೊಂಡ ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್‍ಲೈನ್ಸ್ ನ ಲಾಹೋರ್-ಕರಾಚಿ ನಡುವೆ ಸಂಚರಿಸುತ್ತಿದ್ದ ವಿಮಾನದ ಪೈಲಟ್ ವಿಮಾನದ ಭೂಸ್ಪರ್ಶ ಸಂದರ್ಭ ಅದು  ಹಾರುತ್ತಿದ್ದ ಎತ್ತರ ಹಾಗೂ ವೇಗದ ಕುರಿತಂತೆ  ಏರ್ ಟ್ರಾಫಿಕ್ ಕಂಟ್ರೋಲರ್‍ನಿಂದ ಬಂದಿದ್ದ ಮೂರು ಎಚ್ಚರಿಕೆಗಳನ್ನು ಕಡೆಗಣಿಸಿದ್ದರೆಂದು ತಿಳಿದು ಬಂದಿದೆ.

ತನಗೆ ವಿಮಾನದ ಹಾರಾಟ ವೇಗ ಹಾಗೂ ಅದು ಇದ್ದ ಎತ್ತರ ಸಮಾಧಾನಕರವಾಗಿದೆ ಹಾಗೂ ಪರಿಸ್ಥಿತಿಯನ್ನು ನಿಭಾಯಿಸುವುದಾಗಿ ಆತ ಸಂದೇಶ ನೀಡಿದ್ದರೆಂದು ತಿಳಿದು ಬಂದಿದೆ.

ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಸ್ವಲ್ಪ ದೂರವಿರುವಾಗ ವಿಮಾನ ಜನವಸತಿ ಪ್ರದೇಶದಲ್ಲಿ ಪತನಗೊಂಡು 97 ಜನರು ಮೃತಪಟ್ಟು, ಇಬ್ಬರು ಪವಾಡಸದೃಶರಾಗಿ ಪಾರಾಗಿದ್ದರು.

ವಿಮಾನ ಭೂಸ್ಪರ್ಶಕ್ಕೆ ಕೆಲವೇ ಕ್ಷಣಗಳಿದ್ದುದರಿಂದ ಆ ಸಂದರ್ಭ ವಿಮಾನ  7,000 ಅಡಿ ಎತ್ತರದಲ್ಲಿ ಹಾರಾಡಬೇಕಿದ್ದರೆ ಈ ವಿಮಾನ 10,000 ಅಡಿ ಎತ್ತರದಲ್ಲಿ ಹಾರುತ್ತಿತ್ತು, ಇದನ್ನು ಗಮನಿಸಿ ಎಟಿಸಿಯಿಂದ  ಮೊದಲ ಎಚ್ಚರಿಕೆ ನೀಡಲಾಗಿತ್ತು. ವಿಮಾನವು ನಿಲ್ದಾಣದಿಂದ 10 ನಾಟಿಕಲ್ ಮೈಲಿ ದೂರವಿರುವಾಗ ಅದು 3,000 ಅಡಿ ಎತ್ತರದಲ್ಲಿ ಹಾರಬೇಕಿದ್ದರೂ 7,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದುದರಿಂದ ಎರಡನೇ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಪೈಲಟ್ ಅದನ್ನೂ ಕಡೆಗಣಿಸಿದ್ದರು.

ವಿಮಾನದಲ್ಲಿ ಎರಡು ಗಂಟೆ 34 ನಿಮಿಷಗಳ ಹಾರಾಟಕ್ಕೆ ಇಂಧನವಿತ್ತು ಹಾಗೂ ಅದು ಕೇವಲ ಒಂದು ಗಂಟೆ 33 ನಿಮಿಷ ಹಾರಾಟ ಪೂರ್ಣಗೊಳಿಸಿತ್ತು. ವಿಮಾನ ದುರಂತಕ್ಕೆ ಪೈಲಟ್ ನಿರ್ಲಕ್ಷ್ಯ ಕಾರಣವೇ ಅಥವಾ ತಾಂತ್ರಿಕ ದೋಷಗಳೇನಾದರೂ ಕಾರಣವೇ ಎಂಬ ಕುರಿತು ತನಿಖೆ ನಡೆಯುತ್ತಿದೆ.

ಮೊದಲ ಭೂಸ್ಪರ್ಶದ ವೇಳೆ ಇಂಜಿನ್‌ಗಳಿಗೆ ಹಾನಿ

ವಿಮಾನವನ್ನು ಇಳಿಸಲು ಪೈಲಟ್ ಪ್ರಥಮ ಪ್ರಯತ್ನ ನಡೆಸಿದಾಗ ಅದರ ಇಂಜಿನ್‌ಗಳು ರನ್‌ವೇಯನ್ನು ಮೂರು ಬಾರಿ ಸವರಿತು ಹಾಗೂ ಅದರ ಪರಿಣಾಮವಾಗಿ ಘರ್ಷಣೆ ಸಂಭವಿಸಿ ಕಿಡಿಗಳು ಹೊತ್ತಿಕೊಂಡವು ಎಂದು ಪರಿಣತರು ಹೇಳಿದ್ದಾರೆ ಎಂದು ದೇಶದ ನಾಗರಿಕ ವಾಯುಯಾನ ಪ್ರಾಧಿಕಾರ (ಸಿಎಎ) ಸಿದ್ಧಪಡಿಸಿದ ವರದಿಯೊಂದು ತಿಳಿಸಿದೆ.

ಮೊದಲ ವಿಫಲ ಭೂಸ್ಪರ್ಶದ ವೇಳೆ, ಇಂಜಿನ್‌ಗಳ ತೈಲ ಟ್ಯಾಂಕ್ ಮತ್ತು ಇಂಧನ ಪಂಪ್‌ಗಳಿಗೆ ಹಾನಿಯಾಗಿರಬಹುದು, ಹಾಗಾಗಿ ವಿಮಾನವನ್ನು ಸುರಕ್ಷಿತ ಎತ್ತರಕ್ಕೆ ಏರಿಸಲು ಅಗತ್ಯವಾದ ಬಲ ಮತ್ತು ವೇಗವನ್ನು ಪಡೆಯಲು ಪೈಲಟ್‌ಗೆ ಅಸಾಧ್ಯವಾಯಿತು ಎಂದು ವರದಿ ತಿಳಿಸಿದೆ.

3,000 ಅಡಿ ಎತ್ತರಕ್ಕೆ ಹೋಗಲು ವಿಫಲವಾದ ವಿಮಾನ

 ವಿಮಾನವನ್ನು ಭೂಸ್ಪರ್ಶ ಮಾಡುವ ಮೊದಲ ಪ್ರಯತ್ನ ವಿಫಲವಾದಾಗ, ವಿಮಾನ ನಿಲ್ದಾಣಕ್ಕೆ ಸುತ್ತು ಬರುವ ನಿರ್ಧಾರವನ್ನು ಪೈಲಟ್ ತೆಗೆದುಕೊಂಡರು. ಅದು ಸ್ವತಃ ಪೈಲಟ್ ತೆಗೆದುಕೊಂಡ ನಿರ್ಧಾರವಾಗಿತ್ತು. ವಿಮಾನದ ಲ್ಯಾಂಡಿಂಗ್ ಗೇರ್ ಕೆಲಸ ಮಾಡುತ್ತಿಲ್ಲ ಎಂಬ ವಿಷಯವನ್ನು ವಿಮಾನ ಸುತ್ತು ಬರುತ್ತಿದ್ದಾಗಲಷ್ಟೇ ಎಟಿಸಿಗೆ ತಿಳಿಸಲಾಯಿತು ಎಂದು ಜಿಯೋ ನ್ಯೂಸ್ ತಿಳಿಸಿದೆ.

ಆಗ ವಿಮಾನವನ್ನು 3,000 ಅಡಿ ಎತ್ತರಕ್ಕೆ ಒಯ್ಯುವಂತೆ ಪೈಲಟ್‌ಗೆ ಏರ್ ಟ್ರಾಫಿಕ್ ಕಂಟ್ರೋಲರ್ ಸೂಚಿಸಿದರು. ಆದರೆ, 1,800 ಅಡಿ ಎತ್ತರಕ್ಕೆ ಮಾತ್ರ ಒಯ್ಯಲು ಪೈಲಟ್‌ಗೆ ಸಾಧ್ಯವಾಯಿತು. 3,000 ಅಡಿ ಎತ್ತರಕ್ಕೆ ವಿಮಾನವನ್ನು ಏರಿಸಲು ವಿಮಾನ ಸಿಬ್ಬಂದಿಗೆ ಸೂಚಿಸಿದಾಗ, ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಫಸ್ಟ್ ಆಫಿಸರ್ ಹೇಳಿದರು ಎಂದು ವರದಿ ಹೇಳಿದೆ.

ವಿಮಾನಕ್ಕೆ ಸೂಚಿತ ಎತ್ತರವನ್ನು ಸಾಧಿಸಲು ವಿಫಲವಾಗಿರುವುದಕ್ಕೆ ಅದರ ಇಂಜಿನ್‌ಗಳು ಸರಿಯಾಗಿ ಸ್ಪಂದಿಸದಿರುವುದೇ ಕಾರಣವಾಗಿದೆ ಎಂದು ಪರಿಣತರು ಹೇಳಿದ್ದಾರೆ. ಬಳಿಕ ವಿಮಾನ ಓಲಾಡುತ್ತಾ ನೆಲಕ್ಕೆ ಅಪ್ಪಳಿಸಿದೆ. ಆಗ ನೆಲದ ಮೇಲಿದ್ದ 11 ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News