ಅತಿ ಶ್ರೀಮಂತರಿಗೆ ಶೇ.2 ಸಂಪತ್ತಿನ ತೆರಿಗೆ ಅಭಿಯಾನ

Update: 2020-05-25 17:45 GMT

ಮಾನ್ಯರೇ,

ಕೊರೋನ ಬಿಕ್ಕಟ್ಟನ್ನು ನಿಭಾಯಿಸಿ ಪ್ರಪಂಚ ಮಟ್ಟದಲ್ಲಿ ತಲೆಯೆತ್ತಿ ನಿಲ್ಲಲು ಮತ್ತು ಜನರ ಹಿತ ಕಾಪಾಡಲು ಸಾಂವಿಧಾನಿಕ ದಾರಿಯಾದ ‘ಶೇ.1 ಅತಿ ಶ್ರೀಮಂತರಿಗೆ ಕೇವಲ ಶೇ.2 ಸಂಪತ್ತಿನ ತೆರಿಗೆ’: ಈ ಅಭಿಯಾನದಲ್ಲಿ 2020 ಮೇ 1ರ ಸಂಪತ್ತಿನ ತೆರಿಗೆ ಪಿಟಿಷನ್‌ಗೆ ಸಹಿ ಮಾಡುವ ಮೂಲಕ ಪಾಲ್ಗೊಳ್ಳಿ ಎಂದು ಮನವಿ ಮಾಡುತ್ತಿದ್ದೇವೆ.

ಭಾರತವು ಕಲ್ಯಾಣ ರಾಜ್ಯದ (Welfare State)ಕಡೆಗೆ ಚಲಿಸಬೇಕೆಂಬ ಆಶಯಗಳು ಇದ್ದಾಗ 1957ರಲ್ಲೇ ಸಂಪತ್ತಿನ ಮೇಲೆ ತೆರಿಗೆ ಪರಿಕಲ್ಪನೆ ಜಾರಿಯಲ್ಲಿತ್ತಾದರೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿರಲಿಲ್ಲ. ಆದರೆ, 1991ರ ನಂತರ ಮಾರುಕಟ್ಟೆ ಶಕ್ತಿಗಳು ಆಳ್ವಿಕೆಯನ್ನು ನಿಯಂತ್ರಿಸತೊಡಗಿದ ಪರಿಣಾಮವಾಗಿ 2015 ರಲ್ಲಿ ಕೇಂದ್ರ ಸರಕಾರವು ಸಂಪತ್ತಿನ ಮೇಲಿನ ತೆರಿಗೆ ಪರಿಕಲ್ಪನೆಯನ್ನೇ ರದ್ದು ಮಾಡಿಬಿಟ್ಟಿತು. ಆದರೀಗ, ಒಂದು ಲಕ್ಷ ದಾಟಿ ಓಡುತ್ತಿರುವ ಕೊರೋನ ಸೋಂಕಿನ ದಾಳಿಯಿಂದ ತತ್ತರಿಸುತ್ತಿರುವ ಭಾರತವು ಚೇತರಿಸಿಕೊಳ್ಳುವಂತಾಗಲು ಶೇ.1 ಅತಿ ಶ್ರೀಮಂತರಿಗೆ ಕೇವಲ ಶೇ.2 ಸಂಪತ್ತಿನ ತೆರಿಗೆ ವಿಧಿಸಿಯಾದರೂ ಕೊರೋನ ತಹಬಂದಿಗೆ ತರುವುದು ಇಂದಿನ ತುರ್ತಾಗಿದೆ. ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್‌ಜಿಯವರು ಈಗಾಗಲೇ ತಮ್ಮ ಒಟ್ಟು ಸಂಪತ್ತಿನ ಶೇ. ಶೇ.2 ರಷ್ಟನ್ನು ಕೊರೋನ ಬಿಕ್ಕಟ್ಟಿನ ನಿವಾರಣೆಗಾಗಿ ಬಿಟ್ಟುಕೊಟ್ಟಿರುವುದನ್ನು ಗಮನಿಸಿ ಹೇಳುವುದಾದರೆ ಈ ಸಾಧ್ಯತೆ ಅಂತಹ ಕಷ್ಟದಾಯಕವಾದುದ್ದೇನೂ ಅಲ.್ಲ ಈ ವಿಚಾರದಲ್ಲಿ ಜನರಿಂದ ಆಯ್ಕೆಯಾದ ಮತ್ತು ಶಕ್ತಿಯುತವಾದ ಯಾವುದೇ ಸರಕಾರವು ಹಿಂದೆ-ಮುಂದೆ ನೋಡದೆ ತುಂಬಾ ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಇಂದಿನ ಕೊರೋನ ಬಿಕ್ಕಟ್ಟಿನ ಯಂಕರ ಪರಿಸ್ಥಿತಿಯನ್ನು ಎದುರಿಸಲು ಇತ್ತೀಚೆಗೆ, ಪ್ರಧಾನ ಮಂತ್ರಿ ಘೋಷಿಸಿರುವ 20 ಲಕ್ಷಕೋಟಿ ರೂ. ಪ್ಯಾಕೇಜ್‌ನ ಒಳಹೊಕ್ಕು ನೋಡಿದರೆ, ಇದರಲ್ಲಿ-

1) ಸ್ವಾಯತ್ತ ಸಂಸ್ಥೆಯಾದ ರಿಸರ್ವ್ ಬ್ಯಾಂಕ್‌ಆಫ್ ಇಂಡಿಯಾವು ತನ್ನ ಹಣಕಾಸು (ಮಾನಿಟರಿ) ನೀತಿಗೆ ಅನುಗುಣವಾಗಿ ಪ್ರಕಟಿಸಿದ ಕ್ರಮಗಳನ್ನು ಹಾಗೂ ಬಡ್ಡಿದರ ಮತ್ತು ಬ್ಯಾಂಕ್ ನಿರ್ವಹಣೆ ಕುರಿತಾಗಿ ಮಾಡಿರುವ ಘೋಷಣೆಗಳನ್ನು ಸರಕಾರ ತನ್ನದೇ ಎಂಬಂತೆ ಬಿಂಬಿಸಿಕೊಂಡಿದೆ!

2) ಈ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ಅನ್ನು ಘೋಷಿಸುವ ಮುನ್ನವೇ ಬಜೆಟ್‌ನಲ್ಲಿ ಈ ಹಿಂದೆಯೇ ಮಾಡಿದ್ದ ಘೋಷಣೆಗಳನ್ನೂ ಮತ್ತು ಕೇಂದ್ರ ಸರಕಾರ ಕಾಲಕಾಲಕ್ಕೆ ನಿಗದಿಪಡಿಸುತ್ತಾ ಬರುವ ಹಣಕಾಸನ್ನೂ ಕ್ರೋಡಿಕರಿಸಿ ಈ 20 ಲಕ್ಷ ಕೋಟಿ ರೂ. ಕೋವಿಡ್-19 ಪ್ಯಾಕೇಜ್‌ನ ಭಾಗವಾಗಿ ಸೇರಿಸಲಾಗಿದೆ!

 3) ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೃಷಿ, ಮೀನುಗಾರಿಕೆಗೆ ಸಂಬಂಧಿಸಿದ 1 ಲಕ್ಷ 40 ಸಾವಿರ ಕೆ ಟಿ ರೂ. ಘೋಷಿಸಿರುವುದು ಇವತ್ತಿನ ತುರ್ತಿಗೆ ಪ್ರಯೋಜನಕ್ಕೆ ಬಾರಲಾಗದ ಒಂದು ಆಶಯ ಯೋಜನೆಯಾಗಿದೆ.

4) ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಎಲ್ಲಾ ಕೂಡಿ ಕಳೆದು ವಾಸ್ತವವಾಗಿ ಸರಕಾರ ಕೋವಿಡ್‌ನ ಆರ್ಥಿಕ ಮುಗ್ಗಟ್ಟು ಎದುರಿಸಲು ವಾಸ್ತವವಾಗಿ ಘೋಷಿಸಿರುವುದು ಹೆಚ್ಚೆಂದರೆ 2 ಲಕ್ಷ ಕೋಟಿ ರೂ. ಆಗಬಹುದಷ್ಟೆ. ಹೀಗೆಂದೇ ಎಲ್ಲಾ ಆರ್ಥಿಕ ತಜ್ಞರೂ, ವಿವಿಧ ಬ್ಯಾಂಕಿನ ಮುಖ್ಯಸ್ಥರೂ ಹೇಳುತ್ತಿದ್ದಾರೆ. ಸರಕಾರವೂ ಇದನ್ನು ನಿರಾಕರಿಸಿಲ್ಲ. ಹೀಗಿದೆ ಇದರ ಕತೆ.

ವಾಸ್ತವ ಹೀಗಿರುವಾಗ, ಈ ಕೊರೋನ ದುರಂತ ಸಂದರ್ಭದಲ್ಲಿನ ಸಮಾಜೋ-ಆರ್ಥಿಕ ಬಿಕ್ಕಟ್ಟನ್ನು ನಿಜವಾಗಿ, ಯಶಸ್ವಿಯಾಗಿ ಮತ್ತು ಮಾನವೀಯವಾಗಿ ನಿರ್ವಹಿಸುವ ಸಲುವಾಗಿ ದೇಶದ ಶೇ.1 ಅತಿ ಶ್ರೀಮಂತರಿಗೆ ಸಂಪತ್ತಿನ ಮೇಲೆ ಶೇ.2, ಸಂಪತ್ತಿನ ತೆರಿಗೆ ಜಾರಿಗೆ ತನ್ನಿ ಎಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಲು ದೇಶದ ಪ್ರಜ್ಞ್ಞಾವಂತರು 2020 ಮೇ 1ರಂದು ಪಿಟಿಷನ್ ಹಾಕಿದ್ದಾರೆ. ಈ 2020 ಮೇ 1 ರ ಪಿಟಿಷನ್‌ಗೆ ಕರ್ನಾಟಕ ಜಾಗೃತ ಸಮುದಾಯವೂ ಜೊತೆಗೂಡಬೇಕೆಂದು ವಿನಂತಿಸುತ್ತೇವೆ. ಇದಕ್ಕಾಗಿ, ಇಲ್ಲಿ ಲಗತ್ತಿಸಿರುವ 2020 ಮೇ 1ರ ಪಿಟಿಷನ್ ಗೆ ಮಾ್ಯಮ ಪ್ರಕಟನೆೆ, ಸಾಮಾಜಿಕ ಜಾಲತಾಣ ಪ್ರಚಾರ ಹಾಗೂ ಸಹಿ ಮಾಡುವ ಮೂಲಕ ಬೆಂಬಲಿಸಬೇಕೆಂದು ಮತ್ತೊಮ್ಮೆ ಮನವಿ ಮಾಡುತ್ತೇವೆ. ಕರ್ನಾಟಕದ ಪ್ರವರ್ತಕರು

 ಎ. ಆರ್. ವಾಸವಿ (ಸಾಮಾಜಿಕ ಮಾನವಶಾಸ್ತ್ರಜ್ಞೆ, ನಿವೃತ್ತ ಪ್ರಾಧ್ಯಾಪಕರು NIAS, ಬೆಂಗಳೂರು )
 ವಿ.ಕೆ.ನಟರಾಜ್ (ವಿಶ್ರಾಂತ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾನಿಲಯ)
ಟಿ.ಆರ್. ಚಂದ್ರಶೇಖರ (ನಿವೃತ್ತ ಪ್ರಾಧ್ಯಾಪಕರು, ಕನ್ನಡ ವಿವಿ, ಅಭಿವೃದ್ಧಿ ಆರ್ಥಿಕ ತಜ್ಞರು)
 ಪುರುಷೋತ್ತಮ ಬಿಳಿಮಲೆ (ಕನ್ನಡ ಪ್ರಾಧ್ಯಾಪಕರು, ಭಾರತೀಯ ಭಾಷೆಗಳ ಅಧ್ಯಯನ ಕೇಂದ್ರ, ಜೆಎನ್‌ಯು)
 ದೇವನೂರ ಮಹಾದೇವ (ಲೇಖಕರು, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತರು)
 ಎಸ್. ಆರ್, ಹಿರೇಮಠ ( ಸಂಚಾಲಕರು, ಸಿಟಿಜನ್ಸ್ ಫಾರ್ ಡೆಮಾಕ್ರಸಿ)
 ದು. ಸರಸ್ವತಿ (ಬರಹಗಾರರು, ಸಾಮಾಜಿಕ ಕಾರ್ಯಕರ್ತರು)
 ಚುಕ್ಕಿ ನಂಜುಂಡಸ್ವಾಮಿ (ಕೆ.ಆರ್.ಆರ್.ಎಸ್, ಅಮೃತ ಭೂಮಿ) ರೂಪ ಹಾಸನ (ಬರಹಗಾರರು, ಪ್ರೇರಣಾ ವಿಕಾಸ ವೇದಿಕೆ, ಹಾಸನ)
 ಸಪ್ತಗಿರಿ ಐಯ್ಯಂಗಾರ್ (People's Association In Grassroots Action and Movement)
 ಎ. ನಾರಾಯಣ(ಸಹ ಪ್ರಾಧ್ಯಾಪಕರು, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯ)
 ಕೆ.ಸಿ.ರಘು (ಆಹಾರ ತಜ್ಞರು)
 ಪ್ರಕಾಶ ಕಮ್ಮರಡಿ (ಕೃಷಿ ಆರ್ಥಿಕ ತಜ್ಞ ಮತ್ತು ಮಾಜಿ ಅಧ್ಯಕ್ಷ ಕರ್ನಾಟಕ ಕೃಷಿ ಬೆಲೆ ಆಯೋಗ, ಬೆಂಗಳೂರು)
 ಡಾ. ರಝಾಕ್ ಉಸ್ತಾದ್ (ರಾಜ್ಯ ಉಪಾಧ್ಯಕ್ಷರು ಹೈದರಬಾದ್ ಕರ್ನಾಟಕ ಹೋರಾಟ ಸಮಿತಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News