ಅಕ್ಷರಶಃ ಕೆಂಡವಾದ ದಿಲ್ಲಿ; 50 ಡಿಗ್ರಿ ತಾಪಮಾನ ದಾಖಲಿಸಿದ ರಾಜಸ್ಥಾನ

Update: 2020-05-27 03:59 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮೇ 27: ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಕಳೆದ ಒಂದು ದಶಕದಲ್ಲೇ ಗರಿಷ್ಠ ತಾಪಮಾನ ದಾಖಲಾಗಿದೆ. ಪಾಲಂ ಹವಾಮಾನ ಕೇಂದ್ರದಲ್ಲಿ 46.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಸಪ್ಧರ್‌ಜಂಗ್ ಕೇಂದ್ರದಲ್ಲಿ 18 ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲಾಗಿದೆ.

2010ರಲ್ಲಿ ಪಾಲಂ ಹಾಗೂ 2002ರಲ್ಲಿ ಸಪ್ಧರ್‌ಜಂಗ್ ಕೇಂದ್ರಗಳಲ್ಲಿ ಕ್ರಮವಾಗಿ 47.6 ಡಿಗ್ರಿ ಹಾಗೂ 46 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ರಾಜಧಾನಿಯಲ್ಲಿ ಇದಕ್ಕಿಂತ ಹೆಚ್ಚಿನ ಸರಾಸರಿ ಉಷ್ಣಾಂಶ ದಾಖಲಾದದ್ದು 1998ರಲ್ಲಿ.

ಎಪ್ರಿಲ್ ತಿಂಗಳಿಡೀ ಹಾಗೂ ಮೇ ಮೊದಲ ವಾರದಲ್ಲೂ ವಾಡಿಕೆಗಿಂತ ಕಡಿಮೆ ತಾಪಮಾನ ದಿಲ್ಲಿಯಲ್ಲಿ ದಾಖಲಾಗಿತ್ತು. ಆದರೆ ಇದೀಗ ಉಷ್ಣಾಂಶ ಏರಿಕೆಯಾಗುತ್ತಿರುವುದು ಆತಂಕಕ್ಕೀಡು ಮಾಡಿದೆ. ದಿಲ್ಲಿಯಲ್ಲಿ ಕೆಲವೊಮ್ಮೆ ಜೂನ್‌ನಲ್ಲಿ ಗರಿಷ್ಠ ಉಷ್ಣಾಂಶ ದಾಖಲಾದ ನಿದರ್ಶನಗಳೂ ಇವೆ.

ಪಾಲಂನಲ್ಲಿ ದಾಖಲಾದ 47.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, ಬಿಸಿಗಾಳಿ ವರ್ಗದ ವ್ಯಾಪ್ತಿಗೆ ಬರುತ್ತದೆ. ರಾಜಸ್ಥಾನದ ಚುರು ಎಂಬಲ್ಲಿ ದೇಶದ ಗರಿಷ್ಠ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಮಂಗಳವಾರ ದಾಖಲಾಗಿದೆ. ಕಳೆದ ವರ್ಷದ ಜೂನ್‌ನಲ್ಲಿ ಪಾಲಂ ಕೇಂದ್ರದಲ್ಲಿ 48 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.

ಪಶ್ಚಿಮ ರಾಜಸ್ತಾನ, ಪಶ್ಚಿಮ ಮಧ್ಯಪ್ರದೇಶ, ದಕ್ಷಿಣ ಹರ್ಯಾಣ, ದಿಲ್ಲಿ, ದಕ್ಷಿಣ ಉತ್ತರ ಪ್ರದೇಶ, ಉತ್ತರ ಮಧ್ಯಪ್ರದೇಶ ಮತ್ತು ವಿದರ್ಭ ಪ್ರದೇಶಗಳಲ್ಲಿ ತೀವ್ರ ಉಷ್ಣ ಗಾಳಿಯ ವಾತಾವರಣ ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News